ಸುದ್ದಿ ಸಂಕ್ಷೇಪ
ಯೋಜನೆ ಸದುಪಯೋಗ ಪಡೆದು ಅಭಿವೃದ್ಧಿ ಪಥದತ್ತ ಸಾಗಿ
ಕುಣಿಗಲ್: ಆರೋಗ್ಯ, ಶಿಕ್ಷಣ, ಗ್ರಾಮಾಂತರ ಅಭಿವೃದ್ಧಿ ಸೇರಿದಂತೆ ಇತರೆ ಕ್ಷೇತ್ರಗಳಲ್ಲಿ ಸರ್ಕಾರದ ಯೋಜನೆಗಳ ಜೊತೆಯಲ್ಲಿ ಖಾಸಗಿ ಸಂಘ ಸಂಸ್ಥೆಗಳು ಪೂರಕಸೇವೆ ಸಲ್ಲಿಸುತ್ತಿವೆ. ಗ್ರಾಮಾಂತರ ಪ್ರದೇಶದ ಜನತೆ ಯೋಜನೆಗಳ ಸದುಪಯೋಗ ಪಡೆದುಕೊಂಡು ಅಭಿವೃದ್ಧಿ ಪಥದತ್ತ ಸಾಗಬೇಕೆಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ಯೋಜನಾ ನಿರ್ದೇಶಕ ಗಂಗಾಧರ ರೈ ತಿಳಿಸಿದರು.
ತಾಲೂಕಿನ ಭಕ್ತರಹಳ್ಳಿ ಸಮೀಪದ ವಾಣಗೆರೆ ಗ್ರಾಮದಲ್ಲಿನ ಸಂತಗ್ರೆಗೋರಿಯಸ್ ದಯಾಭವನಕ್ಕೆ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಎರಡು ಲಕ್ಷ ರು.ಗಳ ಚೆಕ್ ವಿತರಿಸಿ ಮಾತನಾಡಿ, ಕ್ರೈಸ್ತ ಸಮುದಾಯದವರು ಸಮಾಜ ಸೇವಾ ಕ್ಷೇತ್ರದಲ್ಲಿ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಎಚ್ಐವಿ ಸೋಂಕಿತರು, ಅವರ ಮಕ್ಕಳಿಗೆ ಸೂಕ್ತ ಆರೈಕೆ ಚಿಕಿತ್ಸೆ ಕಲ್ಪಿಸುವಲ್ಲಿ ದಯಾಭವನ ಸಂಸ್ಥೆ ಉತ್ತಮ ಸೇವೆಯಲ್ಲಿ ತೊಡಗಿದೆ. ಇದೀಗ ಮೂತ್ರಪಿಂಡ ರೋಗ ಸೇರಿದಂತೆ ಅರ್ಬುದ ರೋಗಕ್ಕೂ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ತಾಲೂಕಿನ ಗ್ರಾಮಾಂತರ ಪ್ರದೇಶದಲ್ಲಿ ಸುಸಜ್ಜಿತ ಆಸ್ಪತ್ರೆ ಹೊಂದಿರುವುದು ಈ ಭಾಗದ ಜನತೆಗೆ ಸಹಕಾರಿಯಾಗಲಿದ್ದು,ದಯಾಭವನದ ಚಟುವಟಿಕೆಗೆ ಪೂರಕವಾಗಲೆಂದು ಯೋಜನೆ ವತಿಯಿಂದ 2ಲಕ್ಷ ರು. ನೀಡಲಾಗಿದೆ ಎಂದರು.
ಜೆಡಿಎಸ್ ಸಮಾವೇಶಕ್ಕೆ ಸಂಬಂಧವಿಲ್ಲ: ಕಾಡುಗೊಲ್ಲ ಹಿತರಕ್ಷಣಾ ಸಮಿತಿ
ತುಮಕೂರು: ಫೆ. 2 ರಂದು ಜೆಡಿಎಸ್ನಿಂದ ಹಿರಿಯೂರಿನಲ್ಲಿ ಹಮ್ಮಿಕೊಂಡಿರುವ ಯಾದವ ಸಮಾವೇಶಕ್ಕೂ, ರಾಜ್ಯ ಕಾಡುಗೊಲ್ಲರ ಹಿತರಕ್ಷಣಾ ಸಮಿತಿಗೂ ಯಾವುದೇ ಸಂಬಂಧವಿಲ್ಲ ಎಂದು ಜಿಲ್ಲಾ ಸಮಿತಿ ಗೌರವಾಧ್ಯಕ್ಷ ಗುಡ್ಡದಹಳ್ಳಿ ಬಸವರಾಜು ಹಾಗೂ ಅದ್ಯಕ್ಷ ಹಾರೋಗೆರೆ ಮಾರಣ್ಣ ಸ್ಪಷ್ಟಪಡಿಸಿದ್ದಾರೆ. ಸಮಿತಿ ಅನುಮತಿ ಪಡೆಯದೆ ಯಾದವ ಸಮಾವೇಶದ ಆಹ್ವಾನಪತ್ರಿಕೆ ಹಾಗೂ ಜಾಹಿರಾತುಗಳಲ್ಲಿ ರಾಜ್ಯ ಕಾಡುಗೊಲ್ಲ ಹಿತರಕ್ಷಣಾ ಸಮಿತಿಯನ್ನು ಬಳಕೆ ಮಾಡಿಕೊಂಡಿರುವುದು ಕಾನೂನು ಬಾಹಿರವಾಗಿದ್ದು, ಯಾವುದೇ ಗೊಂದಲಗಳಿಗೆ ಸಮುದಾಯ ಒಳಗಾಗಬಾರದು ಎಂದು ತಿಳಿಸಿದ್ದಾರೆ.
ಫೆ.3ರಂದು ಪ್ರತಿಭಟನೆ
ಕೊರಟಗೆರೆ: ಸಾರ್ವಜನಿಕರ ಹಲವರು ಬೇಡಿಕೆಗಳ ಈಡೇರಿಕೆಗಾಗಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಫೆ.3 ರಂದು ಪಟ್ಟಣದಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಂಡಿದೆ. ಪಡಿತರ ಚೀಟಿ, ವಸತಿ ಯೋಜನೆಯಲ್ಲಿ ಸಮರ್ಪಕ ಬಿಲ್ ಪಾವತಿ, ಬಗರ್ ಹುಕುಂ ಫಲಾನುಭವಿಗಳಿಗೆ ಸಾಗುವಳಿ ಚೀಟಿ, ವೃದ್ಧರು, ಅಂಗವಿಕಲರು, ವಿಧವೆಯರಿಗೆ ಸಮರ್ಪಕ ಪಿಂಚಣೆಗಾಗಿ ಆಗ್ರಹಿಸಿ ಪ್ರತಿಭಟನೆಯನ್ನು ನಡೆಸುತ್ತಿದ್ದು ಪಟ್ಟಣದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಿಂದ ತಾಲೂಕು ಕಚೇರಿಯ ವರೆಗೆ ಬೃಹತ್ ಮೆರವಣೆಗೆಯೊಂದಿಗೆ ತಹಸೀಲ್ದಾರ್ ಅವರಿಗೆ ಮನವಿ ನೀಡಲಾಗುವುದು. ಪ್ರತಿಭಟನೆಯಲ್ಲಿ ಎಲ್ಲಾ ಸಂಘ ಸಂಸ್ಥೆಗಳು ಹಾಗೂ ಸಾರ್ವಜನಿಕರು ಬೆಂಬಲಿಸುವಂತೆ ಸಂಘಟಕರು ಮನವಿ ಮಾಡಿದ್ದಾರೆ.
ರಾಮಾನುಜಂ ಅಧ್ಯಕ್ಷರಾಗಿ ಆಯ್ಕೆ
ಪಾವಗಡ: ತಾಲೂಕು ಭೋವಿ ಕ್ಷೇಮಾಭಿವೃದ್ಧಿ ಸಂಘದ ಅಡಿಯಲ್ಲಿ ಭೋವಿ ವಿದ್ಯಾರ್ಥಿ ನಿಲಯದ ನಿರ್ವಹಣ ಸಮಿತಿಯನ್ನು ರಚಿಸಲಾಯಿತು. ಸಮಿತಿಯ ಅಧ್ಯಕ್ಷರಾಗಿ ಬಿಸಿಎಂ ವಿದ್ಯಾರ್ಥಿ ನಿಲಯದ ಮೇಲ್ವಿಚಾರಕ ರಾಮಾನುಜಂ ಹಾಗೂ ಕಾರ್ಯದರ್ಶಿಯಾಗಿ ದೈಹಿಕ ಶಿಕ್ಷಕ ವಿ. ಜಯರಾಮ್ ಆಯ್ಕೆಯಾಗಿದ್ದಾರೆ. ಮುಖ್ಯ ಶಿಕ್ಷಕ ಜಿ.ವೆಂಕಟೇಶ್, ಕಂದಾಯ ಇಲಾಖೆ ಕಾರ್ಯದರ್ಶಿ ಭೀಮಪ್ಪ, ಸಿಆರ್ಪಿ ರಾಮಾಂಜಿನಪ್ಪ, ಶಿಕ್ಷಕರಾದ ಶ್ರೀನಿವಾಸ್, ತಿಮ್ಮಭೋವಿ, ಚನ್ನಕೇಶವ ಪೊಲೀಸ್ ಇಲಾಖೆಯ ವೆಂಕಟೇಶ್ ಇತರರು ಸಮಿತಿಯ ಸದಸ್ಯರಾಗಿ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.