ಅನಿಲ ಸಂಪರ್ಕ ವಿಳಂಬ: ಕ್ರಮಕ್ಕೆ ಆಗ್ರಹ
ಗುಬ್ಬಿ: ಪಪಂ 22.75 ಮೀಸಲು ಅನುದಾನದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಫಲಾನುಭವಿಗಳಿಗೆ ಅಡುಗೆ ಅನಿಲ ಸಂಪರ್ಕಕ್ಕೆ ವಿನಾ ಕಾರಣ ವಿಳಂಬ ಮಾಡುತ್ತಿರುವ ಇಂಡೇನ್ ಗ್ಯಾಸ್ ವಿತರಕ ರುದ್ರೇಶ್ವರ ಎಂಟರ್‌ಪ್ರೈಸಸ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಪಪಂ ಸದಸ್ಯ ಜಿ.ಸಿ. ನರಸಿಂಹಮೂರ್ತಿ ಒತ್ತಾಯಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ಕಳೆದ 4 ವರ್ಷದಿಂದ ಅನಿಲ ಸಂಪರ್ಕಕ್ಕೆ ಅರ್ಜಿ ಸಲ್ಲಿಸಿದ ಫಲಾನುಭವಿಗಳ ಪೈಕಿ 170 ಮಂದಿ ಅರ್ಹರನ್ನು ಗುರ್ತಿಸಲಾಗಿದೆ. ಸದ್ಯದ ಕ್ರೋಢಿಕೃತ ಮೀಸಲು ಹಣದಲ್ಲಿ ಪ್ರತಿ ವರ್ಷ ಇಂತಿಷ್ಟು ಫಲಾನುಭವಿಗಳಂತೆ ಒಟ್ಟು 170 ಮಂದಿಗೆ ಅನಿಲ ಸಂಪರ್ಕಕ್ಕೆ ಪಟ್ಟಣದ ಇಂಡೇನ್ ಗ್ಯಾಸ್ ವಿತರಕರಿಗೆ ಟೆಂಡರ್ ನೀಡಲಾಗಿದೆ. ಪಪಂ ಸಭೆ ಹಾಗೂ ಜಿಲ್ಲಾಧಿಕಾರಿಗಳ ಅನುಮತಿ ಪಡೆದ ನಂತರ ಆರ್ಥಿಕವಾಗಿ ಹಿಂದುಳಿದ ಎಸ್‌ಸಿ, ಎಸ್‌ಟಿ ವರ್ಗದ ಅರ್ಹರನ್ನು ಆಯ್ಕೆ ಮಾಡಲಾಗಿದೆ ಎಂದರು.
4 ವರ್ಷದಿಂದ ನಡೆದ ಟೆಂಡರ್ ಪ್ರಕ್ರಿಯೆ ಅನಿಲ ಸಂಪರ್ಕಕ್ಕೆ ಸಿದ್ಧವಿದ್ದರೂ, ವಿನಾಕಾರಣ ಫಲಾನುಭವಿಗಳಿಗೆ ತೊಂದರೆ ನೀಡುತ್ತಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿಗಳು, ತಹಸೀಲ್ದಾರ್ ಕೂಡಲೇ ಕ್ರಮ ಕೈಗೊಳ್ಳಬೇಕು. ವಿಳಂಬವಾದಲ್ಲಿ ದಲಿತ ಪರ ಸಂಘಟನೆಗಳೊಂದಿಗೆ ಹೋರಾಟ ನಡೆಸಲಾಗುವುದೆಂದು ಎಚ್ಚರಿಸಿದರು.