ಅಕ್ಷರ ದಾಸೋಹ ನೌಕರರ ಬೇಡಿಕೆ ಈಡೇರಿಕೆಗೆ ಪ್ರತಿಭಟನೆ
ಮಧುಗಿರಿ: ಅಕ್ಷರ ದಾಸೋಹ ನೌಕರರ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ತಾಲೂಕು ಸಂಘದ ವತಿಯಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನೆ ನಡೆಸಿ ಶಿಕ್ಷಣಾಧಿಕಾರಿಗೆ ಮನವಿ ಸಲ್ಲಿಸಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ.ಮಲ್ಲಮ್ಮ ಮಾತನಾಡಿ, ಕೇಂದ್ರ ಸರ್ಕಾರ ಕೂಡಲೇ ಮಾಸಿಕ 1000 ಪಾವತಿಸಬೇಕು. ರಾಜ್ಯ ಸರ್ಕಾರ ಕೂಡ ಹೆಚ್ಚಿಸಿರುವ 500 ಬಿಡುಗಡೆ ಮಾಡುವ ಮೂಲಕ ನೌಕರರ ಹಿತ ಕಾಪಾಡಬೇಕು. ಜನಶ್ರೀ ಯೋಜನೆ ವಿಸ್ತರಿಸಬೇಕು. ಬಿಸಿಯೂಟ ನೌಕರರನ್ನು ಶಿಕ್ಷಣ ಇಲಾಖೆಯಡಿ ಕಾಯಂ ಮಾಡಬೇಕು ಹಾಗೂ ಅಗತ್ಯ ಸೇವಾ ಸೌಲಭ್ಯಗಳನ್ನು ನೀಡಬೇಕು ಎಂದು ಒತ್ತಾಯಿಸಿದರು. ತಾಲೂಕು ಘಟಕದ ಅಧ್ಯಕ್ಷೆ ನಾಗರತ್ನ ಮಾತನಾಡಿ, ತಾಲೂಕಿನಲ್ಲಿ ಮಳೆ, ಬೆಳೆ ಇಲ್ಲ. ಬಿಸಿಯೂಟದಿಂದ ಗ್ರಾಮೀಣ ಹೆಣ್ಣು ಮಕ್ಕಳು ಜೀವನ ನಡೆಸುತ್ತಿದ್ದಾರೆ. ಆದರೆ ಹಾಜರಾತಿ ಕಡಿಮೆಯಿರುವುದರಿಂದ ಕೆಲಸದಿಂದ ತೆಗೆಯುವ ಕ್ರಮ ನಿಲ್ಲಬೇಕು.ಬೇಸಿಗೆ ರಜಾ ವೇತನವನ್ನು ಬಿಸಿಯೂಟ ನೌಕರರಿಗೂ ನೀಡಬೇಕು.ಬಿಪಿಎಲ್ ಕಾರ್ಡ್ ಕೊಡಬೇಕು. ಸುರಕ್ಷಾ ಭತ್ಯೆ ಹಾಗೂ ಸ್ವಚ್ಛತಾ ಭತ್ಯೆ ಒದಗಿಸಿ ಅಡುಗೆ ತಯಾರು ಮಾಡುವಾಗ ಆಕಸ್ಮಿಕ ಅಪಘಾತವಾಗಿ ಗಾಯಾಳುವಾದರೆ ಪರಿಹಾರ ನೀಡಬೇಕು, ಲೈಂಗಿಕ ಕಿರುಕುಳದ ವಿರುದ್ಧ ಇಲಾಖೆಯೇ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿದರು. ಉಪಾಧ್ಯಕ್ಷೆ ಜಯಲಕ್ಷ್ಮಮ್ಮ, ಭಾಗ್ಯಮ್ಮ, ಮಂಜುಳಾ, ಅನಸೂಯಮ್ಮ, ತಿಮ್ಮಕ್ಕ, ಗಂಗಮ್ಮ ಹಾಗೂ ಇತರರು ಇದ್ದರು.