ಎಇಇ ಕಚೇರಿ ತೆರವಿಗೆ ಸೂಚನೆ
ವಾಣಿಜ್ಯ ಸಮುಚ್ಚಯ ನಿರ್ಮಿಸಲು ಎಇಇ ಕಚೇರಿ ಅಡ್ಡಿ
ಕುಣಿಗಲ್: ತಾಪಂ ಜಾಗದ ಅಭಿವೃದ್ಧಿಗೆ ಜಿಪಂ ಎಂಜಿನಿಯರಿಂಗ್ ಕಾರ್ಯಾಲಯ ಅಡ್ಡಿಯಾಗಿದ್ದು ಕಚೇರಿ ತೆರವಿಗೆ ಕ್ರಮ ಕೈಗೊಳ್ಳುವಂತೆ ತಾಪಂ ಪ್ರಭಾರ ಅಧ್ಯಕ್ಷ ಜಗದೀಶ್, ಜಿಪಂ ಎಇಇ ಅವರಿಗೆ ಸೂಚನೆ ನೀಡಿದರು.
ಬುಧವಾರ ನಡೆದ ತಾಪಂ ವಿಶೇಷ ಸಾಮಾನ್ಯ ಸಭೆಯಲ್ಲಿ, ಪಟ್ಟಣದ ಮದ್ದೂರು ರಸ್ತೆಯ ಮುಸಾಫಿರ್ ಖಾನಾ ಪ್ರದೇಶದಲ್ಲಿ ವಾಣಿಜ್ಯ ಸಮುಚ್ಚಯ ನಿರ್ಮಿಸಲು ಈಗಾಗಲೆ ನಿರ್ಣಯ ಅಂಗೀಕರಿಸಿ, ಹಣ ಮೀಸಲಿರಿಸಲಾಗಿದೆ. ಆದರೆ ಈ ಪ್ರದೇಶದಲ್ಲಿನ ಜಿಪಂ ಎಇಇ ಕಾರ್ಯಾಲಯ ತೆರವುಗೊಳ್ಳದ ಕಾರಣ ಕಾಮಗಾರಿಗೆ ಹಿನ್ನಡೆಯಾಗಿದ್ದು, ಈಗಾಗಲೆ ಹಲವು ಬಾರಿ ಪತ್ರ ಬರೆದಿದ್ದರೂ ಕಚೇರಿ ತೆರವುಗೊಳಿಸಿಲ್ಲವೆಂದು ಎಇಇ ಮರಿಗೌಡರವರನ್ನು ಪ್ರಶ್ನಿಸಿದರು. ಎಇಇ ಕಚೇರಿ ತೆರವಿಗೆ ಸರ್ಕಾರದ ಗೆಜೆಟ್ ಪ್ರಕಟಣೆಯಾಗಬೇಕು, ಈ ಬಗ್ಗೆ ಮೇಲಾಧಿಕಾರಿಗಳಿಗೆ ವರದಿ ನೀಡಿದ್ದು, ಬಂದ ನಂತರ ಪರ್ಯಾಯ ವ್ಯವಸ್ಥೆ ಮಾಡಿ ತೆರವುಗೊಳಿಸಲಾಗುವುದೆಂದರು.
ವಿಕಲಾಂಗರಿಗೆ ನೀಡುವ ಶೇ.3ರ ಅನುದಾನ ಫಲಾನುಭವಿ ಗುರುತಿಸಲು ತಾಪಂ ಸದಸ್ಯರನ್ನು ಕಡೆಗಣಿಸಲಾಗಿದೆ ಎಂದು ಸದಸ್ಯ ಲೋಕೇಶ್ ಅಧ್ಯಕ್ಷರೊಂದಿಗೆ ವಾಗ್ವಾದಕ್ಕಿಳಿದರು. ಫಲಾನುಭವಿಗಳ ಆಯ್ಕೆ ವಿಷಯದಲ್ಲಿ ಸದಸ್ಯರ ಗಮನಕ್ಕೆ ತಂದು ಆಯ್ಕೆ ಮಾಡುವುದರಿಂದ ಒಂದೇ ಫಲಾನುಭವಿಗೆ ಪದೇಪದೇ ಸವಲತ್ತು ಸಿಗುವುದು ತಪ್ಪಿ, ಅರ್ಹ ಫಲಾನುಭವಿಗೆ ಸವಲತ್ತು ದೊರಕುವುದರಿಂದ ಸದಸ್ಯರ ಗಮನಕ್ಕೆ ತರುವಂತೆ ಸೂಚನೆ ನೀಡಲಾಯಿತು. ಸಭೆಗೆ ಗೈರಾದ ಬೆಸ್ಕಾಂ ಸಿಬ್ಬಂದಿಗೆ ನೋಟಿಸ್ ಜಾರಿ ಮಾಡುವಂತೆ, ಸಮರ್ಪಕ ಅನುದಾನ ವೆಚ್ಚಮಾಡುವಲ್ಲಿ ಲೆಕ್ಕಪತ್ರ ನಿರ್ವಹಣೆಯಲ್ಲಿ ಲೋಪವೆಸಗಿರುವ ಬಿಳೇದೇವಾಲಯ, ಮಡಿಕೆಹಳ್ಳಿ ಸೇರಿದಂತೆ ಇತರೆ ಎರಡು ಗ್ರಾಪಂಗಳ ಲೆಕ್ಕ ತಪಾಸಣೆ ಮಾಡಲು ಸೇರಿದಂತೆ ಇತರೆ ವಿಷಯಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಸಭೆ ಪ್ರಾರಂಭಕ್ಕೆ ಸಂಬಂಧಿಸಿ ಸೂಕ್ತ ಕೋರಂ ಇಲ್ಲದೆ ಮಧ್ಯಾಹ್ನ 1ಗಂಟೆಗೆ ಸಭೆ ಪ್ರಾರಂಭವಾಯಿತು.