ಎಚ್ಎಂಟಿಗೆ ಬರಲಿದೆ ಒಳ್ಳೆಯ ಸಮಯ
ತುಮಕೂರು: ತುಮಕೂರಿನ ಎಚ್ಎಂಟಿ ಕಾರ್ಖಾನೆ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಸಂಸತ್ನಲ್ಲಿ ಧ್ವನಿ ಎತ್ತುವ ಭರವಸೆಯನ್ನು ಸಂಸದ ಎಸ್.ಪಿ. ಮುದ್ದಹನುಮೇಗೌಡ ನೀಡಿದ್ದಾರೆ.
ಅವರು ಬುಧವಾರ ನಗರದ ಎಚ್ಎಂಟಿ ಕೈ ಗಡಿಯಾರ ಕಾರ್ಖಾನೆಗೆ ಭೇಟಿ ನೀಡಿ, ಕಾರ್ಮಿಕ ಮುಖಂಡರು ಹಾಗೂ ಆಡಳಿತ ಮಂಡಳಿಯ ಮುಖಂಡರೊಂದಿಗೆ ಎಚ್ಎಂಟಿ ಪುನಶ್ಚೇತನದ ಬಗ್ಗೆ ಸಮಗ್ರ ಸಾಧಕ-ಬಾಧಕಗಳನ್ನು ಆಲಿಸಿದ ಬಳಿಕ ಮಾತನಾಡಿದ ಸಂಸದರು, ಎಚ್ಎಂಟಿ ಬಗ್ಗೆ ಜನರಲ್ಲಿ ಉತ್ತಮ ಅಭಿಪ್ರಾಯವಿದೆ. ಹಾಗಾಗಿ ಈ ಬಗ್ಗೆ ಇಲ್ಲಿನ ವಾಸ್ತವ ಸ್ಥಿತಿಗತಿಗಳ ಬಗ್ಗೆ ಈ ಬಾರಿಯ ಲೋಕಸಭಾ ಅಧಿವೇಶನದಲ್ಲಿ ಧ್ವನಿಎತ್ತುವುದಾಗಿ ಭರವಸೆ ನೀಡಿದರು.
ಮುಂದಿನ ದಿನಗಳಲ್ಲಿ ಮತ್ತೊಮ್ಮೆ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ ಬಳಿಕ ಅಗತ್ಯ ನಿರ್ಧಾರಗಳನ್ನು ಕೈಗೊಳ್ಳುವ ಬಗ್ಗೆ ತಿಳಿಸಿದರು. ಕಾರ್ಖಾನೆ ಪುನಶ್ವೇತನಕ್ಕೆ ಯಾವೆಲ್ಲ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ? ಹಾಲಿ ಇರುವಂತಹ ಸಮಸ್ಯೆಗಳು ಯಾವುವು? ಅವುಗಳ ಪರಿಹಾರಕ್ಕೆ ಏನು ಮಾಡಬೇಕು? ಎಂಬುದಾಗಿ ಮುಖಂಡರೊಂದಿಗೆ ಕಾರ್ಖಾನೆ ಸ್ಥಿತಿಗತಿ ಕುರಿತು ಸಮಗ್ರ ಮಾಹಿತಿ ಕಲೆಹಾಕಿದರು.
ಸಭೆಯಲ್ಲಿ ಕಾರ್ಮಿಕ ಮುಖಂಡ ಸತ್ಯನಾರಾಯಣ ಮಾತನಾಡಿ, ಪ್ರತಿ ಹಳ್ಳಿ ಹಳ್ಳಿಗಳಲ್ಲಿ, ದೇಶ-ವಿದೇಶಗಳಲ್ಲಿ ಹೆಸರು ವಾಸಿಯಾಗಿದ್ದ ಎಚ್ಎಂಟಿ ಕೈಗಡಿಯಾರಗಳು ಕೋಟ್ಯಂತ ಆದಾಯ ತಂದುಕೊಟ್ಟಿತ್ತು. ಆದರೆ 2000ನೇ ಇಸವಿ ಬಳಿಕ ಎಚ್ಎಂಟಿ ವಿವಿಧ ಘಟಕಗಳಾಗಿ ವಿಂಗಡಣೆಯಾಯಿತು. ಆನಂತರದಲ್ಲಿ ಎಚ್ಎಂಟಿ ಕೈಗಡಿಯಾರ ಘಟಕಕ್ಕೆ ಲಾಭಾಂಶದಲ್ಲಿ ಸಾಕಷ್ಟು ಕಡೆಗಣಿಸುವ ಮೂಲಕ ಮಲತಾಯಿ ಧೋರಣೆ ಅನುಸರಿಸಲಾಯಿತು ಎಂದವರು ಆರೋಪಿಸಿದರು.
ತುಮಕೂರು ಘಟಕ ಪ್ರತಿ ವರ್ಷ 30 ಲಕ್ಷ ಕೈಗಡಿಯಾರಗಳನ್ನು ಉತ್ಪಾದನೆ ಮಾಡುತ್ತಿದ್ದು, ಮಾರುಕಟ್ಟೆಯಲ್ಲಿ ಶೇ.60ರಷ್ಟು ಎಚ್ಎಂಟಿ ವಾಚ್ಗಳೇ ಮಾರಾಟವಾಗುತ್ತಿದ್ದವು. ಆದರೆ ಈಗ ಎಚ್ಎಂಟಿ ಕೈಗಡಿಯಾರ ಕಾರ್ಖಾನೆ ಹೀನಾಯ ಸ್ಥಿತಿ ತಲುಪಿದೆ. ಪರಿಣಾಮ ಸಾಕಷ್ಟು ಉದ್ಯೋಗಿಗಳು ವಿಆರ್ಎಸ್ ಮೊರೆ ಹೋಗಿದ್ದಾರೆ. ಕಾರ್ಖಾನೆ ಅಭಿವೃದ್ಧಿಪಡಿಸಲು ಹೊಸ ಹೊಸ ಇಂಜಿನಿಯರ್ ನೇಮಕವಾಗಬೇಕು. ಹೊಸ ತಂತ್ರಜ್ಞಾನ ಹಾಗೂ ನೂತನ ಯಂತ್ರಗಳ ಅಗತ್ಯವಿದೆ ಎಂದು ಸಂಸದರ ಮುಂದೆ ತಮ್ಮ ಸಮಸ್ಯೆ ತೋಡಿಕೊಂಡರು.
ಎಚ್ಎಂಟಿ ಕೈಗಡಿಯಾರ ಕಾರ್ಖಾನೆ ಕಾರ್ಮಿಕರಿಗೆ ವೇತನ ಪರಿಷ್ಕರಣೆ ಆಗಬೇಕು. ಎಲ್ಲ ನೌಕರರಿಗೂ ಸೂಕ್ತ ಭದ್ರತೆ ಸಿಗುವಂತಾಗಬೇಕು. ಆಗ ಕಾರ್ಖಾನೆಯನ್ನು ಪುನಶ್ಚೇತನಗೊಳಿಸಲು ಸಾಧ್ಯವಾಗುತ್ತದೆ. ಒಂದು ವೇಳೆ ಹೀಗೆ ಆಗದ ಪಕ್ಷದಲ್ಲಿ ಎಚ್ಎಂಟಿ ಘಟಕವನ್ನು ಇನ್ನೊಂದು ಘಟಕದೊಂದಿಗೆ ವಿಲೀನ ಮಾಡುವಂತೆ ಸಂಸದರಿಗೆ ಸಲಹೆ ನೀಡಲಾಯಿತು.
ಎಚ್ಎಂಟಿ ಘಟಕದ ಮುಖ್ಯಸ್ಥರಾದ ಗೋಪಾಲಯ್ಯ ಅವರು ಆಡಳಿತ ಮಂಡಳಿ ಪರವಾಗಿ ಮಾತನಾಡಿ, ಎಚ್ಎಂಟಿ ಕಾರ್ಖಾನೆ ಯಾವುದೇ ಕಾರಣಕ್ಕೂ ಮುಚ್ಚಲಾಗುವುದಿಲ್ಲ. ಆದರೆ ಎಚ್ಎಂಟಿ ಉಳಿಸಲು ಕೆಲ ಸಮಯಬೇಕಾಗಿದೆ. ಅಲ್ಲದೆ ಕಾರ್ಖಾನೆ ಉಳಿವಿಗೆ ಸರ್ಕಾರದ ಯಾವುದಾದರೊಂದು ಯೋಜನೆಗೆ ಸರ್ಕಾರ ಎಚ್ಎಂಟಿ ಘಟಕವನ್ನು ಸಂಪೂರ್ಣವಾಗಿ ಬಳಸಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಎಚ್ಎಂಟಿ ಘಟಕಕ್ಕೆ ಸರ್ಕಾರದಿಂದ ಒಂದಷ್ಟು ಸಹಾಯ ಅಥವಾ ಆರ್ಡರ್ ಸಿಕ್ಕಿದರೂ ಎಚ್ಎಂಟಿ ಉಳಿಯುತ್ತದೆ ಎಂದವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಸಭೆಯಲ್ಲಿ ಎಚ್ಎಂಟಿ ಕಾರ್ಖಾನೆಯ ಆಡಳಿತ ಮಂಡಳಿಯ ಹಿರಿಯ ಅಧಿಕಾರಿಗಳು, ಕಾರ್ಮಿಕ ಸಂಘದ ಹಿರಿಯ ಮುಖಂಡರು ಹಾಜರಿದ್ದರು.