ಕುರಿ ಮೇಲೆ ಚಿರತೆ ದಾಳಿ
ಕುಣಿಗಲ್: ತಾಲೂಕಿನ ಚೌದ್ರಿಪಾಳ್ಯದಲ್ಲಿ ಚಿರತೆ ದಾಳಿಗೆ ರೈತರ ಮೂರು ಕುರಿ ಬಲಿಯಾಗಿವೆ. ಕೊತ್ತಗೆರೆ ಹೋಬಳಿಯ ಚೌದ್ರಿಪಾಳ್ಯದ ಕಾಳಯ್ಯ ಎಂಬ ರೈತ ತನ್ನ ಮನೆ ಮುಂದೆ ಕಟ್ಟಿದ್ದ ಕುರಿಗಳ ಮೇಲೆ ಚಿರತೆ ದಾಳಿ ನಡೆಸಿ ಎರಡು ಕುರಿಯನ್ನು ಕೊಂದು ಒಂದನ್ನು ಗಾಯಗೊಳಿಸಿದೆ. ಘಟನಗೆ ಸಂಬಂಧಿಸಿ ಪೊಲೀಸರು, ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬೆಳೆವಿಮೆ: 31ರವರೆಗೆ ವಿಸ್ತರಣೆ
ತಿಪಟೂರು: ಮುಂಗಾರು ಹಂಗಾಮಿನಲ್ಲಿ ಪ್ರಾಯೋಗಿಕ ಮಾರ್ಪಡಿಸಿ ರಾಷ್ಟ್ರೀಯ ಕೃಷಿ ವಿಮಾ ಯೋಜನೆ ಅಡಿ ಎಲ್ಲಾ ವರ್ಗದ ರೈತರು ಭಾಗವಹಿಸಲು ಜೂ.30 ಎಂದು ಕೊನೆಯ ದಿನಾಂಕವನ್ನು ನಿಗದಿಪಡಿಸಲಾಗಿತ್ತು. ಆದರೆ ಈಗ ಜು.31ರವರೆಗೆ ವಿಸ್ತರಿಸಲಾಗಿದ್ದು, ರೈತ ಬಾಂಧವರು ಇದರ ಸದುಪಯೋಗಪಡೆದುಕೊಳ್ಳಬೇಕೆಂದು ಸಹಾಯಕ ಕೃಷಿ ನಿರ್ದೇಶಕರು ತಿಳಿಸಿದ್ದಾರೆ. ರೈತರಿಗೆ ಯೋಜನೆಯ ಬಗ್ಗೆ ಅರಿವು ಮೂಡಿಸಲು ಹೆಚ್ಚಿನ ಕಾಲಾವಕಾಶ ಬೇಕಿರುವುದರಿಂದ ಮತ್ತು ವಿಳಂಬ ಮುಂಗಾರಿನಿಂದ ಬಿತ್ತನೆ ಚಟುವಟಿಕೆ ಅವಧಿಯು ಮುಂದೂಡಲ್ಪಟ್ಟಿರುವುದರಿಂದ ರಾಜ್ಯ ಮಟ್ಟದ ಬೆಳೆ ವಿಮಾ ಸಮನ್ವಯ ಸಮಿತಿಯು ಜು.31ರವರೆಗೆ ವಿಸ್ತರಿಸಲು ಅನುಮೋದನೆ ನೀಡಿದ್ದಾರೆಂದು ತಿಳಿಸಿದ್ದಾರೆ.
ಮದ್ಯವರ್ಜನ ಶಿಬಿರ ಇಂದು
ತಿಪಟೂರು: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಬೆಂಗಳೂರು, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ವತಿಯಿಂದ 702ನೇ ಮದ್ಯವರ್ಜನ ಶಿಬಿರವನ್ನು ತಾಲೂಕಿನ ಗಂಗನಫಟ್ಟ ಗೇಟ್ನ ಶ್ರೀರಂಗ ಸಮುದಾಯ ಭವನದಲ್ಲಿ ಗುರುವಾರ ಬೆಳಿಗ್ಗೆ 11ಗಂಟೆಗೆ ಆಯೋಜಿಸಲಾಗಿದೆ. ಮದ್ಯವರ್ಜನ ಶಿಬಿರದ ಗೌರವಾಧ್ಯಕ್ಷ ಪ್ರೊ. ಜಿ.ಕೆ. ಬಸವೇಗೌಡರು ಉದ್ಘಾಟಿಸಲಿದ್ದು, ಅಧ್ಯಕ್ಷತೆ ಕೆ.ಟಿ.ನಟೇಶ್ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ತಹಸೀಲ್ದಾರ್ ಮಂಜುನಾಥ್, ಗ್ರಾಮಾಭಿವೃದ್ಧಿ ಯೋಜನೆ ನಿರ್ದೇಶಕ ಪಿ.ಗಂಗಾಧರ ರೈ ಮತ್ತಿತರರು ಭಾಗವಹಿಸಲಿದ್ದಾರೆ.
6ರಂದು ವಧು-ವರರ ಸಮಾವೇಶ
ತುಮಕೂರು: ತುಮಕೂರು ನಗರ ವೀರಶೈವ ಸಮಾಜ ಸೇವಾ ಸಮಿತಿ ಮೈತ್ರಿ ಮಹಿಳಾ ವಿಭಾಗದ ವತಿಯಿಂದ ವೀರಶೈವ-ವಧು ವರರ ಸಮಾವೇಶವನ್ನು ಜು.6 ರಂದು ಬೆಳಗ್ಗೆ 10 ಗಂಟೆಗೆ ತುಮಕೂರಿನ ಜೆಸಿ ರಸ್ತೆಯಲ್ಲಿರುವ ವೀರಶೈವ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಮೈತ್ರಿ ಮಹಿಳಾ ವಿಭಾಗದ ಅಧ್ಯಕ್ಷೆ ಪ್ರಭಾಮಣಿ ತಿಳಿಸಿದರು. ತುಮಕೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ 800 ಮಂದಿ ನೊಂದಣಿ ಮಾಡಿಸಿದ್ದಾರೆ. 6 ಜೋಡಿ ಮದುವೆಗೆ ಸಿದ್ಧರಾಗಿದ್ದಾರೆ. ಅಂಗವಿಕಲರಿಗೆ ನೊಂದಣಿಗೆ ಶುಲ್ಕವಿಲ್ಲ. ಇನ್ನು ಹೆಚ್ಚಿನ ಮಂದಿ ವಿವಾಹವಾಗುವ ನಿರೀಕ್ಷೆಯಿದೆ. ಹೆಚ್ಚಿನ ಮಾಹಿತಿಗಾಗಿ 9972123220, 9945630656, 9880612230, 9844181331, 9844276699 ಸಂಪರ್ಕಿಸುವಂತೆ ಅವರು ಕೋರಿಸಿದರು. ಕಾರ್ಯಕ್ರಮವನ್ನು ಮೈತ್ರಿ ಮಹಿಳಾ ವಿಭಾಗದ ಮಾಜಿ ಅಧ್ಯಕ್ಷೆ ಪಾರ್ವತಿ ರಾಜಶೇಖರ್ ಹಾಗೂ ವಕೀಲ ರಾಜಶೇಖರ್ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ತುಮಕೂರು ವೀರಶೈವ ಸಮಾಜ ಸೇವಾ ಸಮಿತಿಯ ಅಧ್ಯಕ್ಷ ಜಿ.ಆರ್. ಶಿವಕುಮಾರ್, ಗೌರವ ಕಾರ್ಯದರ್ಶಿ ಎಚ್.ಎನ್. ಶಿವಕುಮಾರ್ ಪಾಲ್ಗೊಳ್ಳಲ್ಲಿದ್ದಾರೆ. ಅಧ್ಯಕ್ಷತೆಯನ್ನು ಮೈತ್ರಿ ಮಹಿಳಾ ವಿಭಾಗದ ಅಧ್ಯಕ್ಷೆ ಪ್ರಭಾಮಣಿ ವಹಿಸಲಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಕಲ್ಯಾಣ ಕೇಂದ್ರದ ಅಧ್ಯಕ್ಷೆ ದೇವರಾಜಮ್ಮ ಪರಮಶಿವಯ್ಯ, ಉಪಾಧ್ಯಕ್ಷೆ ರಾಜೇಶ್ವರಿ ಶಿವಸ್ವಾಮಿ, ಕಾರ್ಯದರ್ಶಿ ಗೀತಾ ಬಸವರಾಜ್, ಉಪಾಧ್ಯಕ್ಷೆ ಜಯಂತಿ ಚಿತ್ತರಂಜನ್, ತೀರ್ಥ ಓಹಿಲೇಶ್ವರ್, ಸಿ. ಗೀತಾ ಪರಮೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು