ಗುಬ್ಬಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಮುತ್ತಿಗೆ
ಗುಬ್ಬಿ: ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಪ್ರವೇಶ ಪಡೆಯಲು ಬರುವ ವಿದ್ಯಾರ್ಥಿಗಳು ಹಾಗೂ ಪೋಷಕರೊಂದಿಗೆ ಸೌಜನ್ಯತೆ ತೋರದ ಪ್ರಾಚಾರ್ಯರ ಕ್ರಮ ಖಂಡಿಸಿ ಕಾಲೇಜಿನ ಹಳೇ ವಿದ್ಯಾರ್ಥಿಗಳ ಸಂಘದ ಪದಾಧಿಕಾರಿಗಳು, ವಿದ್ಯಾರ್ಥಿಗಳು ಹಾಗೂ ಪೋಷಕರು ಬುಧವಾರ ಕಾಲೇಜಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ಪ್ರತಿಭಾವಂತ ವಿದ್ಯಾರ್ಥಿಗಳು ಇಚ್ಛಿಸಿದ ವಿಷಯಕ್ಕೆ ಪ್ರವೇಶ ನೀಡಲು ನಿರಾಕರಿಸುವುದರ ಜೊತೆಗೆ ಬೇರೆ ಕಾಲೇಜಿಗೆ ಹೋಗುವಂತೆ ನಿರ್ದೇಶನ ನೀಡುವ ಪ್ರಾಂಶುಪಾಲರ ಕ್ರಮ ಸರಿಯಲ್ಲ. ತಾಲೂಕಿನ ವಿವಿಧ ಗ್ರಾಮೀಣ ಭಾಗಗಳಿಂದ ಪದವಿ ಶಿಕ್ಷಣಕ್ಕಾಗಿ ಬರುವ ವಿದ್ಯಾರ್ಥಿಗಳಿಗೆ ಅವರ ಅಭಿರುಚಿಗನುಗುಣವಾಗಿ ಐಚ್ಛಿಕ ವಿಷಯ ನೀಡುವಲ್ಲಿಯೂ ತಾರತಮ್ಯ ಮಾಡುತ್ತಿರುವ ಸಮಂಜಸವಲ್ಲ ಎಂದು ಕಾಲೇಜಿನ ಹಳೇ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಎಚ್.ಟಿ.ಭೈರಪ್ಪ ಆರೋಪಿಸಿದರು.
ನಂತರ ನಡೆದ ಸಂದಾನ ಸಭೆಯಲ್ಲಿ ಪ್ರವೇಶ ಬಯಸಿ ಬರುವ ಎಲ್ಲಾ ವಿದ್ಯಾರ್ಥಿಗಳಿಗೂ ಪ್ರವೇಶ ನೀಡುವುದಾಗಿ ನಿರ್ಧಾರ ಕೈಗೊಂಡ ನಂತರ ವಿದ್ಯಾರ್ಥಿಗಳು ಮತ್ತು ಪೋಷಕರು ಪ್ರತಿಭಟನೆ ಕೈ ಬಿಟ್ಟರು. ಮುಖಂಡರಾದ ಬಿ.ಎಸ್.ಪಂಚಾಕ್ಷರಿ, ಲೋಕೇಶ್, ಸಿದ್ದರಾಮಣ್ಣ, ಪೃಥ್ವಿರಾಜ್, ಉಮೇಶ್, ಹರಪ್ರಸಾದ್, ಗಂಗಣ್ಣ, ಎಬಿವಿಪಿ ಮುಖಂಡ ಕೆ.ಸಂಜಯ್, ಚೇತನ್ ಹಾಗೂ ಇತರರು ಇದ್ದರು.