ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಚಿಕೂನ್ ಗುನ್ಯಾ: ಪರದಾಟ

Rashmi Kasaragodu
Updated On : 3 Jul 2014, 1:31 am

ಹುಳಿಯಾರು: ದಿನದಿಂದ ದಿನಕ್ಕೆ ಚಿಕುನ್ ಗುನ್ಯಾ ಪೀಡಿತರ ಸಂಖ್ಯೆ ಹೆಚ್ಚುತ್ತಿರುವ ಹೋಬಳಿಯ ರಂಗನಕೆರೆ ಗ್ರಾಮದಲ್ಲಿ ಸೂಕ್ತ ಚಿಕಿತ್ಸೆ ದೊರೆಯದೆ ಇಲ್ಲಿನ ಜನ ಪರಿತಪಿಸುತ್ತಿದ್ದಾರೆ.
20 ದಿವಸಗಳಿಂದ ರೋಗ ಬಾಧಿಸುತ್ತಿದ್ದು ಮನೆಗಿಬ್ಬರು ರೋಗಿಗಳು ಖಾಯಿಲೆಗೆ ತುತ್ತಾಗಿ ನರಕಯಾತನೆ ಅನುಭವಿಸುತ್ತಿದ್ದಾರೆ. ಎರಡು ದಿವಸಗಳ ಹಿಂದೆ ಗ್ರಾಮಕ್ಕೆ ಭೇಟಿ ನೀಡಿದ್ದ ತಾಲೂಕು ವೈದ್ಯಾಧಿಕಾರಿಗಳು ಶೀಘ್ರದಲ್ಲೇ ವೈದ್ಯರನ್ನು ಗ್ರಾಮಕ್ಕೆ ಕಳುಹಿಸಿ ಚಿಕಿತ್ಸೆ ನೀಡುವುದಾಗಿ ಹಾಗೂ ಕುಗ್ರಾಮವಾಗಿರುವುದರಿಂದ ತಮ್ಮದೇ ವಾಹನದ ಮೂಲಕ ಹೊಯ್ಸಳಕಟ್ಟೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಚಿಕಿತ್ಸೆ ಕೊಡಿಸುವ ಭರವಸೆ ನೀಡಿದ್ದರು.
ಅದರಂತೆ ಜಿಲ್ಲಾ ಕೇಂದ್ರದಿಂದ ಸಂಚಾರಿ ಆರೋಗ್ಯ ಘಟಕದ ವಾಹನ ಗ್ರಾಮಕ್ಕೆ ಬಂದು ಪ್ರದಕ್ಷಿಣೆ ನಡೆಸಿ ಹೋಗಿದ್ದು ನಂತರ ಮಂಗಳವಾರ ಮಧ್ಯಾಹ್ನದ ವೇಳೆಗೆ ಗ್ರಾಮಕ್ಕೆ ನುರಿತ ವೈದ್ಯರಿಲ್ಲದೆ ಕೇವಲ ಶುಶ್ರೂಕಿಯರನ್ನೊಳಗೊಂಡ ತಂಡ ಬೇಕಾದ ಚಿಕಿತ್ಸಾ ಸಾಮಗ್ರಿ, ಔಷಧಿ ತರದೆ ಬರೀ ಒಆರ್‌ಎಸ್ ಪುಡಿ ಮಾತ್ರ ತಂದು ಚಿಕಿತ್ಸೆ ಕೊಡಲು ಆರಂಭಿಸಿದರು. ಗ್ರಾಮದಲ್ಲಿ ಸುಮಾರು 10ಕ್ಕೂ ಹೆಚ್ಚು ಮಂದಿ ನಿತ್ರಾಣರಾಗಿ ನಡೆಯಲಾಗದೆ ತತ್ತರಿಸಿ ಹೋಗಿದ್ದರು ಏನೂ ತಾರದೇ ಬರಿಗೈಲಿ ಬಂದು ಹೇಗೆ ಚಿಕಿತ್ಸೆ ನೀಡುತ್ತಿರಿ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮಸ್ಥರ ಆಕ್ರೋಶಕ್ಕೆ ಮಣಿದ ತಾಲೂಕು ವೈದ್ಯಾಧಿಕಾರಿ ಶಿವಕುಮಾರ್ ಸಂಜೆ 5.30ರ ವೇಳೆಗೆ ಒಬ್ಬ ವೈದ್ಯರನ್ನು ಕಳುಹಿಸಿ ಚಿಕಿತ್ಸೆ ಕೊಡಿಸುವುದರ ಜತೆಗೆ ತುರ್ತು ಚಿಕಿತ್ಸೆ ನೀಡಲು 108 ವಾಹನದ ವ್ಯವಸ್ಥೆ ಮಾಡಿದರು. ನಂತರ ಕೆಲ ಮಂದಿಯನ್ನು ಹುಳಿಯಾರು ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ನೀಡಲಾಯಿತು.


ನಾಟಕ ಪ್ರದರ್ಶನ 5ಕ್ಕೆ
ಹುಳಿಯಾರು: ಹೋಬಳಿ ಪ್ರಗತಿಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಜು.5ರಂದು ರಾತ್ರಿ ಪಟ್ಟಣದ ಎಂಪಿಎಸ್ ಶಾಲಾ ಮೈದಾನದಲ್ಲಿ ಹೆಗ್ಗೋಡಿನ ಜನಮನದಾಟ ಕಲಾತಂಡದವರು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಖಾಸಗಿ ಜೀವನ ಕುರಿತು ನಾಟಕ ಅಭಿನಯಿಸಲಿದ್ದಾರೆ. ನಾಟಕಾಭಿನಯದ ಅಂಗವಾಗಿ ನಡೆಯುವ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಕೆ.ಎಸ್.ಸತ್ಯಮೂರ್ತಿ ಉದ್ಘಾಟಿಸಲಿದ್ದು, ಗ್ರಾಪಂ ಅಧ್ಯಕ್ಷೆ ಕಾಳಮ್ಮ ಅಧ್ಯಕ್ಷತೆ ವಹಿಸುವರು. ಸಾಹಿತಿ ವಡ್ಡಗೆರೆ ನಾಗರಾಜಯ್ಯ ಅಶಯ ನುಡಿಗಳನ್ನಾಡುವರು. ತಹಸೀಲ್ದಾರ್ ಕಾಮಾಕ್ಷಮ್ಮ, ಇಓ ಕೃಷ್ಣನಾಯಕ್, ಬಿಇಒ ಸಾ.ಚಿ.ನಾಗೇಶ್, ವೃತ್ತ ನಿರೀಕ್ಷಕ ಜಯಕುಮಾರ್, ಸಮಾಜ ಕಲ್ಯಾಣಾಧಿಕಾರಿ ರಾಮಯ್ಯ, ಪಿಎಸೈ ಘೋರ್ಪಡೆ, ಪಶುವೈದ್ಯಾಧಿಕಾರಿ ಡಾ.ರಘುಪತಿ ಭಾಗವಹಿಸುವರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement