ಮಾದಕ ವಸ್ತುಗಳಿಂದ ಯುವಜನಾಂಗ ದೂರವಿರಬೇಕು: ವಾಸಂತಿ ಉಪ್ಪಾರ್
ತುಮಕೂರು: ಮಾದಕ ವಸ್ತುವಿಗೆ ದಾಸರಾಗುವುದರಿಂದ ಆರ್ಥಿಕ ಸ್ವಾವಲಂಬನೆ, ನೆಮ್ಮದಿ, ಸ್ವಾಭಿಮಾನವನ್ನು ಕಳೆದುಕೊಳ್ಳುತ್ತೇವೆ. ಆದ್ದರಿಂದ ಯುವ ಜನಾಂಗ ಒಳ್ಳೆಯ ಗುಣ, ನಡತೆಯನ್ನು ಚಿಕ್ಕಂದಿನಿಂದಲೇ ರೂಢಿಸಿಕೊಳ್ಳಬೇಕು ಎಂದು ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿ ವಾಸಂತಿ ಉಪ್ಪಾರ್ ಕಿವಿಮಾತು ಹೇಳಿದರು. ಶಿರಾ ಸರ್ಕಾರಿ ಪದವಿಪೂರ್ವ ಕಾಲೇಜು ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಮದ್ಯ ಮತ್ತು ಮಾದಕ ವಸ್ತುಗಳ ದುಷ್ಪರಿಣಾಮ ಕುರಿತ ವಿಚಾರ ಸಂಕಿರಣ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ, ಅಡ್ಡ ದಾರಿ ಹಿಡಿಸುವ ಸಮಾಜ ಘಾತುಕ ಶಕ್ತಿಗಳಿಂದ ಯುವಜನಾಂಗ ಸಾಧ್ಯವಾದಷ್ಟು ದೂರವಿರುವಂತೆ ಕರೆ ನೀಡಿದರು. ಕೇಂದ್ರ ಸರ್ಕಾರದ 2012ರ ಅಂಕಿಅಂಶಗಳ ಪ್ರಕಾರ ಪ್ರತಿ ವರ್ಷ ದೇಶದ ಏಳೂವರೆ ಕೋಟಿಯಷ್ಟು ಜನರು ಮಾದಕ ವಸ್ತುವಿಗೆ ದಾಸರಾಗುತ್ತಿರುವ ಆಘಾತಕಾರಿ ವಿಷಯರ. ಪ್ರತಿ ವರ್ಷ ಜಾಗತಿಕವಾಗಿ 2 ಲಕ್ಷ ಜನ ಮಾದಕ ವಸ್ತುವಿನಿಂದ ಮೃತಪಡುತ್ತಿದ್ದಾರೆ. 3 ಲಕ್ಷ ಕೋಟಿ ಮಾದಕ ವ್ಯಸನಿಗಳ ಆರೋಗ್ಯಕ್ಕಾಗಿ ಖರ್ಚು ಮಾಡಲಾಗುತ್ತಿದೆ ಎಂದು ಸಮಗ್ರ ಮಾಹಿತಿ ನೀಡಿದರು. ಸಮಾಜ ಸೇವಕಿ ಸುಜಾತ ನಾರಾಯಣಚಾರ್, ಕಾಲೇಜಿನ ಪ್ರಾಂಶುಪಾಲ ಬಿ.ವಿ.ಜನಾರ್ದನಯ್ಯ ಮಾತನಾಡಿದರು. ಕಾರ್ಯಕ್ರಮದಲ್ಲಿ ವಾರ್ತಾಧಿಕಾರಿ ಎಂ.ಆರ್. ಮಮತ, ಹಿರಿಯ ಉಪನ್ಯಾಸಕಿ ಟಿ.ಎನ್. ಮಂಜುಳಾ, ರಾಜಣ್ಣ, ಗಿರಿಸ್ವಾಮಿ, ಗ್ರಂಥಪಾಲಕ ರಾಘವೇಂದ್ರಾಚಾರ್ ಮುಂತಾದವರು ಉಪಸ್ಥಿತರಿದ್ದರು.