ರೈತ ವಿರೋಧಿ ಸರ್ಕಾರಕ್ಕೆ ಧಿಕ್ಕಾರ
ಮಧುಗಿರಿ: ಆಳುವ ಸರ್ಕಾರಗಳ ಇಚ್ಛಾಶಕ್ತಿ ಕೊರತೆಯಿಂದ ತುಮಕೂರು ಜಿಲ್ಲೆ ಭೀಕರ ಬರಗಾಲಕ್ಕೆ ತುತ್ತಾಗಿ ನೀರಾವರಿ ಯೋಜನೆಯಿಂದ ವಂಚಿತವಾಗಿದೆ ಎಂದು ಜಿಲ್ಲಾ ರೈತ ಸಂಘದ ಅಧ್ಯಕ್ಷ ಗೋವಿಂದರಾಜು ಆಕ್ರೋಶ ವ್ಯಕ್ತಪಡಿಸಿದರು.
ಒಕ್ಕಲಿಗರ ಸಮುದಾಯ ಭವನದಲ್ಲಿ ತಾಲೂಕು ರೈತ ಸಂಘ ಏರ್ಪಡಿಸಿದ್ದ ಬರಗಾಲ, ಸಮಗ್ರ ನೀರಾವರಿ ಬೈಪಾಸ್, ರಿಂಗ್ ರಸ್ತೆ, ತುಮಕೂರು-ರಾಯದುರ್ಗ ರೇಲ್ವೆ ಕಾಮಗಾರಿ ಹಾಗೂ ಪವರ್ ಗ್ರೀಡ್ ಕಾಮಗಾರಿ ಕುರಿತು ರೈತರ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಈ ಎಲ್ಲ ಕಾಮಗಾರಿಗಳು ಪ್ರಾರಂಭವಾಗಲಿದ್ದು ರೈತರ ಕೃಷಿ ಜಮೀನನ್ನು ಭೂಸ್ವಾಧೀನ ಪ್ರಕ್ರಿಯೆಗೆ ಮುಂದಾಗಿರುವ ಪವರ್ ಗ್ರೀಡ್ ಸಂಸ್ಥೆ ರೈತರಿಗೆ ವೈಜ್ಞಾನಿಕ ಬೆಲೆ ನೀಡಿದ ಬಳಿಕ ಕಾಮಗಾರಿ ಪ್ರಾಂರಭಿಸಬೇಕು. ಜಿಲ್ಲೆಯ ಮಧುಗಿರಿ, ಪಾವಗಡ, ಶಿರಾ ಹಾಗೂ ಕೊರಟಗೆರೆ ತಾಲೂಕುಗಳಲ್ಲಿ ಮಳೆ ಇಲ್ಲದೆ ಅಂತರ್ಜಲ ಪಾತಾಳ ಸೇರಿ ರೈತರು ಸಂಕಟಕ್ಕೆ ಸಿಕ್ಕಿದ್ದಾರೆ. 4 ಕಂಬ ಹಾಕುವ ಕಡೆ 4 ಲಕ್ಷ, 1 ಎಕರೆಗೆ 2.50 ಲಕ್ಷ ಪರಿಹಾರ ಕೊಡಬೇಕು. ಯಾರೇ ಆಗಲಿ ಸರ್ವೆ ಮತ್ತು ಪಂಚನಾಮೆ ಮಾಡದ ಹೊರತು ಕೆಲಸ ಪ್ರಾರಂಭಿಸಬಾರದು ಎಂದು ಎಚ್ಚರಿಕೆ ನೀಡಿದರು.
ಈ ಎಲ್ಲ ನಿರ್ಮಾಣದ ವಿರುದ್ಧ ಜು.12ರಂದು ಮಧುಗಿರಿಯಲ್ಲಿ ಜಿಲ್ಲಾ ಮಟ್ಟದ ಬೃಹತ್ ರೈತ ಸಮಾವೇಶ ಮಾಡುವ ಸಲುವಾಗಿ ರೈತರು ಸಂಘಟಿತರಾಗಿ ಹೋರಾಟ ಕೈಗೊಳ್ಳಬೇಕು ಎಂದು ಕರೆ ನೀಡಿದರು. ತಾಲೂಕು ರೈತ ಸಂಘದ ಶಂಕರಪ್ಪ ಮಾತನಾಡಿದರು. ಡಿ.ಆರ್.ರಾಜಶೇಖರ್, ಗಂಗಣ್ಣ, ನಾಗರತ್ನಮ್ಮ,ಶ್ರೀನಿವಾಸ್, ರಮೇಶ್ ಇತರರು ಇದ್ದರು.