ಪಹಣಿ ಆಂದೋಲನ ಅಧಿಕಾರಿಗಳಿಗೆ ಮನವಿ
ಹುಳಿಯಾರು: ಹೋಬಳಿ ವ್ಯಾಪ್ತಿಯ ಪಹಣಿ ತಿದ್ದುಪಡಿ ಆಂದೋಲನವನ್ನು ಶೀಘ್ರವೇ ಹಮ್ಮಿಕೊಳ್ಳುವಂತೆ ಮತ್ತು ಪಟ್ಟಣದ ನಾಡಕಚೇರಿಯಲ್ಲಿ ಪಹಣಿ ಪಡೆಯಲು ಬರುವ ಸಾರ್ವಜನಿಕರಿಗೆ ನೆರಳಿನ ವ್ಯವಸ್ಥೆ ಕಲ್ಪಿಸುವಂತೆ ಒತ್ತಾಯಿಸಿ ತಾಲೂಕು ಮಹಾಜನ್ ಪರಿವಾರ್ನಿಂದ ನಾಡ ಕಚೇರಿ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ನಾಡಕಚೇರಿಗೆ ಬರುವ ಸಾರ್ವಜನಿಕರು ನೆರಳಿನ ವ್ಯವಸ್ಥೆ ಇಲ್ಲದೆ ಪರದಾಡುವಂತೆ ಆಗಿದೆ. ಇದನ್ನು ತಪ್ಪಿಸುವಂತೆ ಉಪತಹಸೀಲ್ದಾರ್ ಹನುಮಂತನಾಯಕ ಅವರಿಗೆ ಮನವಿ ಸಲ್ಲಿಸಿ, ಶೀಘ್ರವೇ ಸಮಸ್ಯೆ
ಕುರಿತು ಸ್ಪಂದಿಸಬೇಕೆಂದು
ಒತ್ತಾಯಿಸಿದರು.
ಅತ್ಯಾಚಾರಿಗೆ ಸಜೆ
ತುಮಕೂರು: ಅಪ್ರಾಪ್ತೆಯ ಮೇಲೆ ಅತ್ಯಾಚಾರ ಎಸೆಗಿದ ಅಪರಾಧಿಗೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಎನ್.ಕೆ. ಸುಧೀಂದ್ರರಾವ್ 8 ವರ್ಷಗಳ ಕಠಿಣ ಶಿಕ್ಷೆ ಹಾಗೂ ರು. 4 ಸಾವಿರ ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಹೆಬ್ಬೂರು ಹೋಬಳಿ ವಡೇರಪುರದ ನವೀನ್ ಕುಮಾರ್ (27) ಶಿಕ್ಷೆಗೊಳಗಾದವನು. ಅಕ್ಟೋಬರ್ 9, 2012 ರಂದು ರಾತ್ರಿ 8.30ರ ಸಮಯದಲ್ಲಿ ಅಪ್ರಾಪ್ತೆ ಹೆಬ್ಬೂರು ವಡೇರಪುರ ಗ್ರಾಮದಲ್ಲಿ ನೀರಿನ ಟ್ಯಾಂಕ್ ಹತ್ತಿರ ನಡೆದು ಬರುತ್ತಿರುವಾಗ ಆರೋಪಿ ಆಕೆ ಕೂಗಿಕೊಳ್ಳದಂತೆ ಕೈಯಿಂದ ಬಾಯಿ ಮುಚ್ಚಿ ಬಲವಂತವಾಗಿ ಮಿಷನ್ ರೂಮಿನೊಳಗೆ ಕರೆದುಕೊಂಡು ಹೋಗಿ ಆಕೆ ತೊಟ್ಟಿದ್ದ ವೇಲ್ನಿಂದ ಎರಡು ಕೈಗಳನ್ನು ಕಟ್ಟಿ ಕೂಗಿಕೊಳ್ಳದಂತೆ ಬಾಯಿಗೆ ಬಟ್ಟೆ ಕಟ್ಟಿ ಹಲವು ಬಾರಿ ಅತ್ಯಾಚಾರವೆಸಗಿರುತ್ತಾನೆ. ಆರೋಪಿ ವಿರುದ್ಧ ತನಿಖೆ ಪೂರೈಸಿ ಕ್ಯಾತ್ಸಂದ್ರ ಸಿ.ಪಿ.ಐ. ಕೆ.ಸಿ. ಗಿರಿ ಅವರು ದೋಷಾರೋಪಣಾ ಪತ್ರ ಸಲ್ಲಿಸಿದ್ದರು. ಪ್ರಕರಣದಲ್ಲಿ ಸರ್ಕಾರದ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಆರ್.ಕೆ. ಭಟ್ ವಾದ ಮಂಡಿಸಿದ್ದರು.
ಪ್ರಭಾರ ಪಿಯು ಡಿಡಿ ಅಧಿಕಾರಕ್ಕೆ
ತುಮಕೂರು: ತುಮಕೂರು ಪದವಿ ಪೂರ್ವ ಶಿಕ್ಷಣ ಇಲಾಖೆ ಪ್ರಭಾರ ಉಪನಿರ್ದೇಶಕರಾಗಿ ಮಧುಗಿರಿ ತಾಲೂಕು ಐ.ಡಿ. ಹಳ್ಳಿಯ ಸರ್ಕಾರಿ ಪ.ಪೂ. ಕಾಲೇಜಿನ ಪ್ರಾಂಶುಪಾಲ ದೊಡ್ಡಹಾಲಪ್ಪ ಗುರುವಾರ ಅಧಿಕಾರ ಸ್ವೀಕರಿಸಿದರು. ತುಮಕೂರಿನ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಜಯಪ್ರಕಾಶ್ ರಾಯಚೂರು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರಾಗಿ ವರ್ಗಾವಣೆಯಾದ ಕಾರಣ ದೊಡ್ಡಹಾಲಪ್ಪ ಪ್ರಭಾರ ಡಿಡಿ ಆಗಿ ಅಧಿಕಾರ ಸ್ವೀಕರಿಸಿದ್ದಾರೆ.
ಶುಚಿತ್ವ ಕಾಪಾಡಲು ಸಲಹೆ
ಕೊರಟಗೆರೆ: ಅಕ್ಷರ ದಾಸೋಹ ಕೊಠಡಿಗಳಲ್ಲಿ ಶುಚಿತ್ವ ಹೊಂದಿರಬೇಕು ಎಂದು ಮಧುಗಿರಿ ಶೈಕ್ಷಣಿಕ ಜಿಲ್ಲಾ ಉಪನಿರ್ದೇಶಕ ಗೋಪಾಲಕೃಷ್ಣ ತಿಳಿಸಿದರು. ತಾಲೂಕಿನ ಶಾಲೆಗಳಲ್ಲಿ ನೂತನವಾಗಿ ನಿರ್ಮಾಣವಾಗಿರುವ ಅಕ್ಷರ ದಾಸೋಹ ಅಡುಗೆ ಕೋಣೆಗಳನ್ನು ವೀಕ್ಷಿಸಿ ಮಾತನಾಡಿ, ಸೌಲಭ್ಯ ಸಮರ್ಪಕವಾಗಿ ಬಳಸಬೇಕು ಎಂದರು.ಅಕ್ಷರ ದಾಸೋಹ ತಾಲೂಕು ಸಹಾಯಕ ನೀರ್ದೇಶಕ ಎಲ್. ಕಾಮಯ್ಯ ಮಾತನಾಡಿ, ಸರ್ಕಾರದಿಂದ ತಾಲೂಕಿಗೆ ಬಂದ ಅನುದಾನ ಸಮರ್ಪಕ ಕಾಮಗಾರಿ ನಿರ್ವಹಿಸಲಾಗಿದೆ ಎಂದರು. ವಿಷಯ ಪರಿವೀಕ್ಷಕ ವೇದಮೂರ್ತಿ, ಪಾಪಯ್ಯ, ಪ್ರಭಾರಿ ಮುಖ್ಯ ಶಿಕ್ಷಕ ಹನುಮಂತರೆಡ್ಡಿ, ವೈ.ಸಿ.ವಿ. ಸ್ವಾಮಿ ಇದ್ದರು.