ಸ್ಥಳದಲ್ಲೇ ಪ್ರಕರಣಗಳ ಇತ್ಯರ್ಥ
ಮಧುಗಿರಿ: ಕಾನೂನು ಸೇವಾ ಸಮಿತಿಯಿಂದ ಬಡವರಿಗೆ ಉಚಿತ ಕಾನೂನು ನೆರವು ನೀಡಲಾಗುತ್ತಿದೆ ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶ ಡಿ. ಸುರೇಶ್ ಹೇಳಿದರು.
ಇಲ್ಲಿನ ಒಕ್ಕಲಿಗರ ಸಮುದಾಯ ಭವನದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ತಾ. ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಕಂದಾಯ ಇಲಾಖೆ, ತಾಲೂಕು ಆರೋಗ್ಯ ಕೇಂದ್ರ, ಕುಂಚ ಗ್ರಾಮೀಣಾಭಿವೃದ್ಧಿ, ಮಕ್ಕಳ ಕ್ಷೇಮಾಭಿವೃದ್ಧಿ ಟ್ರಸ್ಟ್ ಹಾಗೂ ಅನ್ನಪೂರ್ಣೇಶ್ವರಿ ಮಹಿಳಾ ಸಮಾಜದ ಸಂಯುಕ್ತಾಶ್ರಯದಲ್ಲಿ ಏರ್ಪಟಾಗಿದ್ದ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
1 ರಿಂದ 25 ಸಾವಿರಕ್ಕಿಂತ ಕಡಿಮೆ ವಾರ್ಷಿಕ ಆದಾಯ ಇರುವವರಿಗೆ ಉಚಿತ ಕಾನೂನು ನೆರವು ನೀಡಲಾಗುತ್ತಿದೆ. ಜು.14,15,16 ರಂದು ಸಂಚಾರಿ ರಥ ತಾಲೂಕಿಗೆ ಆಗಮಿಸಲಿದೆ. ಆಗ ನ್ಯಾಯಾಧೀಶರು ಮತ್ತು ವಕೀಲರು ಭಾಗವಹಿಸುವರು ಎಂದರು. ಗ್ರಾಮೀಣ ಪ್ರದೇಶದ ಜನತೆಗೆ ಕಾನೂನು ಅರಿವು ಮೂಡಿಸುವ ನಿಟ್ಟಿನಲ್ಲಿ ಪ್ರಕರಣಗಳನ್ನು ಸ್ಥಳದಲ್ಲೇ ಇತ್ಯರ್ಥ ಪಡಿಸಲಾಗುವುದು. ಮಹಿಳೆಯೊಬ್ಬಳು ಕಲಿತರೆ ಇಡೀ ಕುಟುಂಬವೇ ಸುಶಿಕ್ಷಿತವಾಗುತ್ತದೆ ಎಂದರು.
ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಡಿ.ಕೆ. ವೇಲಾ ಮಾತನಾಡಿ,ಮಹಿಳೆಯರ ಮೇಲೆ ದಬ್ಬಾಳಿಕೆ, ದೌರ್ಜನ್ಯ, ಶೋಷಣೆ ನಿರಂತರವಾಗಿ ನಡೆಯುತ್ತಿದ್ದು, ಕಾನೂನಿನ ದುರ್ಬಳಕೆ ತಡೆದು ಅನ್ಯಾಯಕ್ಕೊಳಗಾದವರಿಗೆ ನ್ಯಾಯ ದೊರಕಿಸಿ ಕೊಡಬೇಕು ಎಂದರು.
ವಕೀಲ ರಘುನಾಥರೆಡ್ಡಿ ಮಹಿಳೆಯರ ಕಾನೂನಿನ ಬಗ್ಗೆ, ಶಿವಣ್ಣ ಜನನ ಮತ್ತು ಮರಣ ನೋಂದಣಿ ಬಗ್ಗೆ ಹಾಗೂ ಡಾ. ಪಾಳ್ಯ ಮೊಹಮದ್ ಮೊಹಿದ್ದೀನ್ ಮಕ್ಕಳ ಆರೋಗ್ಯ ಮತ್ತು ಅಪೌಷ್ಟಿಕತೆ ಬಗ್ಗೆ ಉಪನ್ಯಾಸ ನೀಡಿದರು.
ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಕಾನೂನು ಸೇವಾ ಸಮಿತಿ ಅಧ್ಯಕ್ಷ ಕಸನಪ್ಪನಾಯ್ಕ್ ಅಧ್ಯಕ್ಷತೆ ವಹಿಸಿದ್ದರು. ನ್ಯಾಯಾಧೀಶರಾದ ಕೆ. ಲಕ್ಷ್ಮೀ, ವಕೀಲರ ಸಂಘದ ಅಧ್ಯಕ್ಷ ಕೆ.ಎನ್. ಜಯರಾಮ್, ಕಾರ್ಯದರ್ಶಿ ಎಂ.ಎಸ್. ಅಶೋಕ್, ಅನ್ನಪೂರ್ಣೇಶ್ವರಿ ಮಹಿಳಾ ಸಮಾಜದ ಅಧ್ಯಕ್ಷೆ ಸಾವಿತ್ರಮ್ಮ ಶಂಕರಯ್ಯ, ಕಾರ್ಯದರ್ಶಿ ಸುಧಾರಂಗರಾಜು, ಕುಂಚ ಟ್ರಸ್ಟ್ ಮುಖ್ಯ ಪೋಷಕಿ ರಾಮಕ್ಕ, ಕಾರ್ಯದರ್ಶಿ ಕೀರ್ತಿರಾಜ್, ಪ್ರಾಧ್ಯಾಪಕ ಪ್ರೊ. ತಿಪ್ಪೇರುದ್ರಯ್ಯ ಅನೇಕರು ಇದ್ದರು.