ದಾಖಲೆ ತರದ ಅಧಿಕಾರಿಗಳಿಗೆ ಡಿಸಿ ಪಾಠ
ತುರುವೇಕೆರೆ: ರೈತರ ಜಮೀನಿನ ಹದ್ದು ಬಸ್ತ್, ಅವರ ಜಮೀನಿನ ದಾಖಲೆಗಳನ್ನು ಸರಿಪಡಿಸಿ ಅಂತ ಹೇಳಿ ಮೂರು ತಿಂಗಳಾಯಿತು. ಆದರೂ ಪಕ್ಕಾ ದಾಖಲೆ ಮಾಡಿಲ್ಲ. ಯಾಕ್ರಿ ಹೀಗೆ ಸಮಯ ವ್ಯರ್ಥ ಮಾಡ್ತೀರಾ ಸರ್ಕಾರಿ ಕೆಲಸ ಅಂದ್ರೆ ಬೇಕಾಬಿಟ್ಟಿ ಮಾಡಬಹುದು ಅಂತ ತಿಳಿದು ಕೊಂಡಿದಿರೇನ್ರೀ? ರೈತರ ಸಮಸ್ಯೆ ನಿಮಗೆ ಅರ್ಥ ಆಗಲ್ವೇನ್ರೀ? ಕೆಲಸ ಮಾಡಕ್ಕೆ ಇಂಟರೆಸ್ಟ್ ಇದ್ರೆ ಕೆಲಸ ಮಾಡಿ ಇಲ್ಲಾಂದ್ರೆ ಕೆಲಸಕ್ಕೆ ರಾಜೀನಾಮೆ ನೀಡಿ ಮನೆಗೆ ಹೋಗ್ರೀ...
- ಹೀಗೆ ತಹಸೀಲ್ದಾರ್ ಮಾರೇಗೌಡ ಸಹಿತ ಹಲವಾರು ಕಂದಾಯ ಇಲಾಖಾ, ತೋಟಗಾರಿಕಾ, ಕೃಷಿ ಇಲಾಖಾ ಅಧಿಕಾರಿಗಳಿಗೆ ಲೆಫ್ಟ್ ಅಂಡ್ ರೈಟ್ ತೆಗೆದುಕೊಂಡವರು ಜಿಲ್ಲಾಧಿಕಾರಿ ಸತ್ಯಮೂರ್ತಿ.
ತಾಲೂಕಿನ ದಬ್ಬೇಘಟ್ಟದಲ್ಲಿ ರೈತರೊಂದಿಗೆ ಸಮಾಲೋಚನಾ ಸಭೆಯಲ್ಲಿ ಭಾಗವಹಿಸಿದ ಅವರು ಸಭೆಯಲ್ಲಿ ರೈತರಿಗೆ ಸಂಬಂಧಿಸಿದ ಸೂಕ್ತ ದಾಖಲಾತಿಗಳನ್ನು ಹಾಜರುಪಡಿಸಲು ವಿಫಲವಾದುದನ್ನು ಗಂಭೀರವಾಗಿ ಪರಿಗಣಿಸಿದರು.
ಇನ್ನು ಒಂದು ಗಂಟೆಯ ಸಮಯ ನೀಡ್ತೀನಿ. ನನಗೆ ಬೇಕಿರುವ ಎಲ್ಲಾ ದಾಖಲೆಗಳನ್ನು ಸರಿಪಡಿಸಿಕೊಂಡು ಬನ್ನಿ ಎಂದು ಹೇಳಿ ಸನಿಹದಲ್ಲೇ ಇದ್ದ ನಾಡ ಕಚೇರಿಗೆ ಜಿಲ್ಲಾಧಿಕಾರಿ ತೆರಳಿದರು.
ತಾಲೂಕಿನ ಮಾಯಸಂದ್ರ ಹಾಗೂ ದಬ್ಬೇಘಟ್ಟ ಹೋಬಳಿಯ ಸುಮಾರು 88 ರೈತರ ಜಮೀನಿನ ಮೂಲಕ ಹಾದುಹೋಗುವ ಎಲ್ಪಿಜಿ ಪೈಪ್ ಲೈನ್ನ ಕಾಮಗಾರಿಯ ಕುರಿತು ಜಿಲ್ಲಾಧಿಕಾರಿ ಸತ್ಯಮೂರ್ತಿಯವರು ರೈತರೊಂದಿಗೆ ಸಮಾಲೋಚನಾ ಸಭೆ ನಡೆಸಲು ಆಗಮಿಸಿದ್ದರು. 2ಹೋಬಳಿಯ 14 ಹಳ್ಳಿಗಳ ವ್ಯಾಪ್ತಿಯಲ್ಲಿ ಬರುವ 578 ರೈತರು ಇದರ ಪ್ರಯೋಜನ ಪಡೆಯಲಿದ್ದಾರೆ. ಪೈಪನ್ನು ಜಮೀನಿನ 6 ಮೀ. ಅಗಲ ಹಾಗೂ 5 ಆಡಿ ಆಳದಲ್ಲಿ ಹುಗಿಯಲಾಗುವುದು. ಈ ಸಂಬಂಧ ಅಗತ್ಯವಾಗಿ ಬೇಕಿರುವ ಜಮೀನನ್ನು ಸ್ವಾಧೀನ ಪಡಿಸಿಕೊಳ್ಳುವ ಹಾಗೂ ಅವರಿಗೆ ನೀಡಬೇಕಿರುವ ಭೂ ಪರಿಹಾರದ ಬಗ್ಗೆ ರೈತರೊಂದಿಗೆ ಜಿಲ್ಲಾಧಿಕಾರಿ ಸತ್ಯಮೂರ್ತಿ ಚರ್ಚಿಸಿದರು. ಇವರೊಂದಿಗೆ ಎಚ್ಪಿಸಿಎಲ್ ಕಂಪನಿಯ ಅಧಿಕಾರಿಗಳೂ ಸಹ ಭಾಗವಹಿಸಿದ್ದರು.
ಸಭೆಯಲ್ಲಿ ಕಂದಾಯ, ಕೃಷಿ. ತೋಟಗಾರಿಕಾ ಹಾಗೂ ಅರಣ್ಯ ಇಲಾಖಾ ಅಧಿಕಾರಿಗಳು ಹಾಜರಿದ್ದರು. ಸದ್ಯ ವಶಪಡಿಸಿಕೊಳ್ಳಲು ಉದ್ದೇಶಿಸಿರುವ ಜಮೀನನಲ್ಲಿ ರೈತರು ಬೆಳೆದಿರುವ ಬೆಳೆಗಳ ಬಗ್ಗೆ ಮಾಹಿತಿ ಪಡೆದರು. ತೆಂಗು ಹಾಗೂ ಅಡಿಕೆ ಮರಗಳು ರೈತರ ವಾಣಿಜ್ಯ ಬೆಳೆಗಳಾಗಿದ್ದು ಅವುಗಳನ್ನು ರೈತರು ಶಾಶ್ವತವಾಗಿ ಕಳೆದುಕೊಳ್ಳುವುದರಿಂದ ಹೆಚ್ಚಿನ ಪರಿಹಾರವನ್ನುನೀಡಲು ಜಿಲ್ಲಾಧಿಕಾರಿಗಳು ತೋಟಗಾರಿಕಾ ಇಲಾಖಾ ಉಪ ನಿರ್ದೇಶಕಿ ಸವಿತಾ ರವರಿಗೆ ಸೂಚಿಸಿದರು. ತೆಂಗು, ಅಡಿಕೆ, ಮಾವು, ಸಪೋಟ, ಹುಣಸೇ, ಹಲಸು ಮರಗಳಿಗೆ ಏಕರೂಪದಲ್ಲಿ ದರ ನಿಗದಿ ಪಡಿಸುವುದರಿಂದ ರೈತರಿಗೆ ಅನುಕೂಲವಾಗಲಿದೆ ಎಂದು ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ಸೂಚಿಸಿದರು.
ದಾಖಲೆ ಸರಿಪಡಿಸಿಕೊಂಡು ಬಂದರು: ಮತ್ತೆ ಒಂದು ಗಂಟೆ ಬಳಿಕ ಕೆಲವು ದಾಖಲೆಗಳನ್ನು ಸರಿಪಡಿಸಿಕೊಂಡು ಬಂದಿದ್ದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಎಚ್ಚರಿಕೆ ನೀಡಿದರು. ಪೈಪ್ ಲೈನ್ ಕಾಮಗಾರಿ ಶೀಘ್ರವೇ ಕಾರ್ಯಾರಂಭ ಮಾಡಲಿದ್ದು ಸ್ವಾಧೀನ ಪಡಿಸಿಕೊಳ್ಳಲಿರುವ ಜಮೀನಿಗೆ ಬೇಗನೆ ಪರಿಹಾರ ಧನವನ್ನು ನೀಡುವುದು ಮುಖ್ಯವಾಗಿದೆ ಎಂದರು.
ಸಭೆಯಲ್ಲಿ ತಹಸೀಲ್ದಾರ್ ಮಾರೇಗೌಡ, ಜಿಪಂ ಸದಸ್ಯ ಎ.ಬಿ.ಜಗದೀಶ್, ವೆಂಕಟರಾಮಯ್ಯ, ಎಚ್.ಪಿ.ಸಿ.ಎಲ್ ಕಂಪನಿಯ ಚೀಫ್ ಮ್ಯಾನೇಜರ್ ರಮೇಶ್, ವ್ಯವಸ್ಥಾಪಕ ಶೇಷಾದ್ರಿ, ವಿಶೇಷ ಭೂಸ್ವಾಧೀನಾಧಿಕಾರಿ ಟಿ.ಎನ್.ಕೃಷ್ಣಮೂರ್ತಿ, ಪಿಎಲ್ ಡಿ ಬ್ಯಾಂಕ್ನ ನಿರ್ದೇಶಕ ಉಗ್ರೇಗೌಡ, ತಾಲ್ಲೂಕು ರೈತ ಸಂಘದ ಅಧ್ಯಕ್ಷ ಶ್ರೀನಿವಾಸ್, ಸಿಪಿಐ ನಿರಂಜನ್ ಮೊದಲಾದವರು ಇದ್ದರು.