ನೆಲಗೊಂಡನಹಳ್ಳಿಯಲ್ಲಿ ಚಿಕೂನ್ಗುನ್ಯಾ ಭೀತಿ
ತಿಪಟೂರು: ತಾಲೂಕಿನ ಹೊನ್ನವಳ್ಳಿ ಸಾರ್ಥವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೆಲಗೊಂಡನಹಳ್ಳಿ, ರುದ್ರಾಪುರ, ಪಟ್ರೇಹಳ್ಳಿಯಲ್ಲಿ ಕಳೆದ 2-3 ತಿಂಗಳಿನಿಂದಲೂ ಚಿಕೂನ್ ಗುನ್ಯಾ ಕಾಣಿಸಿಕೊಂಡಿದ್ದು, ಈ ಬಗ್ಗೆ ಸಾರ್ಥವಳ್ಳಿ ಗ್ರಾಮ ಪಂಚಾಯಿತಿ ಯಾವುದೇ ಮುಂಜಾಗ್ರತ ಕ್ರಮಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿದೆ ಎಂದು ಇಲ್ಲಿನ ಪ್ರಜ್ಞಾವಂತ ನಾಗರೀಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಈ ಗ್ರಾಮಗಳ ಬಹುತೇಕ ತಿಪ್ಪೆಗುಂಡಿಗಳಿಂದ ಕೂಡಿದ್ದು, ಎಲ್ಲಿಯೂ ನೀರು ಹರಿಯಲು ಸರಿಯಾದ ಒಳಚರಂಡಿ ವ್ಯವಸ್ಥೆಯಿಲ್ಲ. ಬಹಳಷ್ಟು ಕಡೆ ಮನೆ ನೀರು ಮನೆಗಳ ಓಣಿಗಳಲ್ಲೇ ನಿಂತು ಕಲುಷಿತಗೊಂಡು ಸೊಳ್ಳೆ ಮತ್ತಿತರೆ ರೋಗಾಣುಗಳ ಉತ್ಪಾದನಾ ಕೇಂದ್ರಗಳಾಗಿವೆ. ಚಿಕೂನ್ ಗುನ್ಯಾ ಬರಲು ಪ್ರಮುಖ ಕಾರಣವೆಂದರೆ ಇಡೀ ಗ್ರಾಮಗಳೇ ತಿಪ್ಪೇಗುಂಡಿಮಯವಾಗಿರುವುದು ಎಂದರು.
ರೋಗಾಣುಗಳು: ಗ್ರಾಮಗಳ ಕೆಲ ಬೀದಿಗಳಲ್ಲಿ ತಿಪ್ಪೆಗುಂಡಿಗಳದ್ದೇ ಸಾಮ್ರಾಜ್ಯವಾಗಿದ್ದು, ಇವು ಸೊಳ್ಳೆಗಳ ಉತ್ಪಾದನಾ ಕೇಂದ್ರವಾಗಿದ್ದು, ಹಂದಿ ಮತ್ತಿತರೆ ರೋಗಾಣುಗಳ ಉಗಮಸ್ಥಾನವಾಗಿದೆ ಎಂದರೆ ತಪ್ಪಾಗಲಾರದು. ಗ್ರಾಮದೊಳಗಡೆ ಸ್ವಚ್ಛತೆ ಎಂಬುದು ಸಂಪೂರ್ಣ ಮಾಯವಾಗಿದೆ. ಗ್ರಾಮ ಪಂಚಾಯಿತಿ ಅಧಿಕಾರಿಗಳು ಮತ್ತು ಆಡಳಿತವರ್ಗ ತಕ್ಕ ಕ್ರಮ ಕೈಗೊಳ್ಳದಿರುವುದನ್ನು ನೋಡಿದರೆ ಅಮಾಯಕ ಜನರ ಮೇಲೆ ಗ್ರಾ.ಪಂ. ಚೆಲ್ಲಾಟವಾಡುತ್ತಿದೆ.
ಕಲ್ಮಶ ನೀರು: ಗ್ರಾಮಗಳಲ್ಲಿರುವ ಕುಡಿಯುವ ನೀರಿನ ಮಿನಿ ವಾಟರ್ ಟ್ಯಾಂಕ್ಗಳನ್ನು ಸ್ವಚ್ಛಗೊಳಿಸಿ ಅದೆಷ್ಟೋ ತಿಂಗಳಾಯಿತು ಎಂಬ ಆಕ್ರೋಶ ಇಲ್ಲಿನ ಅಮಾಯಕ ಸಾರ್ವಜನಿಕರಲ್ಲಿ ಎದ್ದು ಕಾಣುತ್ತಿದೆ. ಹೀಗಾಗಿ ಕಲ್ಮಶಗೊಂಡಿರುವ ನೀರನ್ನೇ ಸಾರ್ವಜನಿಕರು ಕುಡಿಯುವಂತಾಗಿದೆ. ಹತ್ತು ಹಲವು ಬಾರಿ ದೂರು ನೀಡಿದ್ದರೂ ನಿರ್ಲಕ್ಷ್ಯದಿಂದ ಇರುವುದರಿಂದ ಮೇಲಾಧಿಕಾರಿಗಳು ಇವರ ವಿರುದ್ಧ ಕ್ರಮ ಜರುಗಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ನಿರ್ಲಕ್ಷ್ಯ: ಗ್ರಾಮಗಳ ಸಾಕಷ್ಟು ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಈ ಬಗ್ಗೆ ತಾಲ್ಲೂಕು ಆರೋಗ್ಯಾಧಿಕಾರಿ ಒಂದು ಬಾರಿಯೂ ಗ್ರಾಮಕ್ಕೆ ಇವರು ಭೇಟಿ ನೀಡಿಲ್ಲ.