ಮುಖ್ಯಾಧಿಕಾರಿ ಕ್ರಮಕ್ಕೆ ಪಪಂ ಸದಸ್ಯರು ಗರಂ
ಕುಣಿಗಲ್: ಮುಖ್ಯಾಧಿಕಾರಿ ಪುರಸಭೆಗೆ ಸೇರಿದ ಆಸ್ತಿಯನ್ನು ನಿಯಮ ಬಾಹಿರವಾಗಿ ವಿಲೇವಾರಿ ಮಾಡಿದ್ದಾರೆಂಬ ಆರೋಪಕ್ಕೆ ಸಂಬಂಧಿಸಿದಂತೆ ನಿರ್ಣಯ ಬರೆದ ಗುಮಾಸ್ತನಿಗೆ ಮುಖ್ಯಾಧಿಕಾರಿ ಒಂದು ತಿಂಗಳು ಗೈರು ಹಾಜರಿ ನಮೂದಿಸಿ ದೌರ್ಜನ್ಯ ನಡೆಸಿದ್ದನ್ನು ಖಂಡಿಸಿದ ಪುರಸಭೆ ಸದಸ್ಯರು ಅಧ್ಯಕ್ಷ ಕೆ.ಎಲ್.ಹರೀಶ್ ಅಧ್ಯಕ್ಷತೆಯಲ್ಲಿ ಶುಕ್ರವಾರ ತುರ್ತು ಸಭೆ ನಡೆಸಿದರು.
ಗುರುವಾರ ಪುರಸಭೆ ವಿಶೇಷ ಸಾಮಾನ್ಯ ಸಭೆ ಸೇರಿದ್ದು ಪಟ್ಟಣದ ಅಂಬೇಡ್ಕರ್ ಭವನ ಒತ್ತುವರಿ ವಿಷಯದಲ್ಲಿ ಹೈಕೋರ್ಟ್ ಸೂಕ್ತ ಆದೇಶ ನೀಡಿದೆ. ಆದರೂ ಮುಖ್ಯಾಧಿಕಾರಿಗಳು ಪ್ರಕರಣ ಸರಿಯಾಗಿ ನಿರ್ವಹಿಸದೆ ಒತ್ತುವರಿದಾರರ ಪರವಾಗಿ ಕ್ರಮ ಕೈಗೊಂಡು, ಪ್ರಕರಣ ತಾವೇ ಇತ್ಯರ್ಥಗೊಳಿಸುವ ಮೂಲಕ ಪುರಸಭೆ ಆಸ್ತಿ ರಕ್ಷಿಸಿಲ್ಲವೆಂದು ಆರೋಪಿಸಿದರು. ದಾಖಲೆಗಳನ್ನು ಸದಸ್ಯ ರಂಗಸ್ವಾಮಿ ನೀಡಿ, ಮುಖ್ಯಾಧಿಕಾರಿ ವಿರುದ್ಧ ನಿರ್ಣಯವನ್ನು ಸಭೆಯಲ್ಲಿ ಹಾಜರಿದ್ದ ಮುಖ್ಯಾಧಿಕಾರಿ ಅನ್ನದಾನಿ ಮನವಿ ಲೆಕ್ಕಿಸದೆ ನಿರ್ಣಯ ಬರೆಸಿದರು.
ನಿರ್ಣಯವನ್ನು ಗುಮಾಸ್ತ ನರಸಿಂಹಯ್ಯ ಬರೆದ ಕಾರಣ, ಸಭೆ ಮುಗಿಸಿ ಹೊರಬಂದ ಮುಖ್ಯಾಧಿಕಾರಿ, ಏಕಾಏಕಿ ಹಾಜರಾತಿ ಪುಸ್ತಕದಲ್ಲಿ ಗುಮಾಸ್ತ ಕೆಲಸಕ್ಕೆ ಹಾಜರಾದರೂ ಒಂದು ತಿಂಗಳವರೆಗೂ ಗೈರು ನಮೂದಿಸಿದರು. ವಿಷಯವನ್ನು ಸಭೆ ಗಮನಕ್ಕೆ ತಂದ ಗುಮಾಸ್ತ, ಮುಖ್ಯಾಧಿಕಾರಿ ಕ್ರಮದಿಂದ ಆಘಾತಗೊಂಡು ಅಸ್ವಸ್ಥನಾದ ಆತನನ್ನು ಚಿಕಿತ್ಸೆಗೆ ಕಳಿಸಿದ ಸದಸ್ಯರು, ಅಧ್ಯಕ್ಷ ನೇತೃತ್ವದಲ್ಲಿ ಹಾಜರಿ ಪುಸ್ತಕ ನೀಡುವಂತೆ ಮುಖ್ಯಾಧಿಕಾರಿಯವರನ್ನು ಕೇಳಿದಾಗ, ಮುಖ್ಯಾಧಿಕಾರಿ ಅನುಚಿತವಾಗಿ ವರ್ತಿಸಿ ಸದಸ್ಯರು,ಅಧ್ಯಕ್ಷರೊಂದಿಗೆ ಅನುಚಿತವಾಗಿ ನಡೆದುಕೊಂಡಿದ್ದು, ಇದನ್ನು ಖಂಡಿಸಿ ಶುಕ್ರವಾರ ಮುಖ್ಯಾಧಿಕಾರಿಗಳ ದುರ್ನಡತೆ ಬಗ್ಗೆ ಶುಕ್ರವಾರ ತುರ್ತುಸಭೆ ಕರೆಯಲಾಯಿತು.
ಸಭೆಯಲ್ಲಿ ಅಧ್ಯಕ್ಷ ಹರೀಶ್, ಗುರುವಾರದ ಘಟನೆ ಸಭೆಗೆ ವಿವರಿಸಿದ್ದಲ್ಲದೆ ಇದೇ ಮುಖ್ಯಾಧಿಕಾರಿಗಳು ಪಟ್ಟಣದಲ್ಲಿ ನಿಯಮಬಾಹಿರವಾಗಿ 140 ಕೃಷಿ ಪ್ರದೇಶಕ್ಕೆಲ್ಲಾ ಖಾತೆ ಮಾಡಿ ಪುರಸಭೆಗೆ ನಷ್ಟ ಮಾಡಿದ್ದಲ್ಲದೆ, ಸರ್ಕಾರಿ ಜಾಗಗಳನ್ನು ಅಕ್ರಮವಾಗಿ ಖಾತೆ ಮಾಡಿದ್ದಾರೆ. ಇವರ ಅಕ್ರಮಕ್ಕೆ ಸಹಕರಿಸದ ಕೆಳಹಂತದ ಸಿಬ್ಬಂದಿಗೆ ಗೈರು ಹಾಜರಿ, ಸರ್ವಿಸ್ ಪುಸ್ತಕಕ್ಕೆ ನಮೂದು ಮಾಡುವ, ಅಮಾನತಿಗೆ ಶಿಫಾರಸು ಮಾಡುವ ಬೆದರಿಕೆ ಹಾಕುತ್ತಿದೆ. ಇವರ ವರ್ತನೆಯಿಂದ ಜನತೆ ಬಡಿದಾಡಿಕೊಳ್ಳುವಂತೆ ಮಾಡಿದ್ದು ಇವರ ಉದ್ಧಟತನದಿಂದ ಯಾವುದೇ ಅಭಿವೃದ್ದಿಕಾರ್ಯವಾಗುತ್ತಿಲ್ಲ ಎಂದು ಆರೋಪಿಸಿದರು.
ಇವರ ವಿರುದ್ಧ ತನಿಖೆ ನಡೆಸಲು ಮತ್ತು ಕೂಡಲೇ ಕರ್ತವ್ಯದಿಂದ ಬಿಡುಗಡೆ ಮಾಡುವ ಬಗ್ಗೆ ಸಭೆ ತೀರ್ಮಾನಿಸುವಂತೆ ಕೋರಿದರು. 18 ಮಂದಿ ಹಾಜರಿದ್ದ ಸಭೆಯಲ್ಲಿ ಸದಸ್ಯ ಶಂಕರ್ ಒಬ್ಬರೇ ಮುಖ್ಯಾಧಿಕಾರಿ ಪರ ನಿಂತರೆ, ಐವರು ಸದಸ್ಯರು ಶಾಸಕರ ಗಮನಕ್ಕೆ ತಂದು ಕ್ರಮ ಕೈಗೊಳ್ಳುವಂತೆ, ಉಳಿದ 12 ಮಂದಿ ಸದಸ್ಯರು ಮುಖ್ಯಾಧಿಕಾರಿ ಬಿಡುಗಡೆಗೆ ಕ್ರಮ ಕೈಗೊಳ್ಳುವ ನಿರ್ಣಯ ಅಂಗೀಕರಿಸಿದರು.