ಕಸ ಕಗ್ಗಂಟು: ಸಿಎಂ ನೇತೃತ್ವದಲ್ಲಿ ಸಭೆ
ತುಮಕೂರು ಮಹಾನಗರ ಪಾಲಿಕೆ ಕಸ ವಿಲೇವಾರಿ ಕಗ್ಗಂಟು ಬಿಡಿಸಲು ಸೋಮವಾರ ಮಧ್ಯಾಹ್ನ 3 ಗಂಟೆಗೆ ವಿಧಾನಸೌಧದಲ್ಲಿ ಜಿಲ್ಲೆಯ ಎಲ್ಲ ಶಾಸಕರು, ಪಾಲಿಕೆಯ ಸದಸ್ಯರೊಟ್ಟಿಗೆ ಸಭೆ ಸೇರುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ. ಜಯಚಂದ್ರ ತುಮಕೂರು ಮಹಾನಗರಪಾಲಿಕೆ ಸಾಮಾನ್ಯ ಸಭೆಯಲ್ಲಿ ತಿಳಿಸಿದರು. ಸದಸ್ಯರ ಮನವಿ ಆಲಿಸಿದ ಸಚಿವರು, ಕಸ ವಿಲೇವಾರಿ ಸಮಸ್ಯೆ ಬಗೆಹರಿಸಲು ಪಕ್ಷಾತೀತವಾಗಿ ಶ್ರಮಿಸುವಂತೆ ಸದಸ್ಯರು, ಎಲ್ಲ ಪಕ್ಷದ ಶಾಸಕರಿಗೆ ಮನವಿ ಮಾಡಿದರು. ಘನತ್ಯಾಜ್ಯ ವಿಲೇವಾರಿಯಲ್ಲಿ ಯಾವುದೇ ರಾಜಕೀಯ ಬೇಡ. ಊರಿನ ಹಿತ ಮುಖ್ಯ. ಈಗಾಗಲೇ ಅಜ್ಜಗೊಂಡನಹಳ್ಳಿಯಲ್ಲಿ ಘನತ್ಯಾಜ್ಯ ವಿಲೇವಾರಿ ಮಾಡುವ ಸಂಬಂಧ ಆ ಭಾಗದಿಂದ ವಿರೋಧಗಳು ಬಂದಿವೆ. ಪ್ರತಿಭಟನೆಗಳು ನಡೆದಿವೆ. ಇದಾಗಬಾರದಿತ್ತು. ಈಗಲೂ ಕಾಲ ಮಿಂಚಿಲ್ಲ. ಈ ಅಜ್ಜಗೊಂಡನಹಳ್ಳಿ ಯೋಜನೆಗೆ ಕಳೆದ 10 ವರ್ಷಗಳ ಹಿಂದೆ ಚಾಲನೆ ನೀಡಲಾಗಿತ್ತು. ಜಾಗಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲೂ ಸಹ ತುಮಕೂರು ಮಹಾ ನಗರ ಪಾಲಿಕೆಯ ಪರವಾಗಿಯೇ ಆಗಿದೆ. ಇದೂ ಹೀಗೆಯೇ ಮುಂದುವರೆದರೆ ಊರಿಗೆ ಒಳ್ಳೆಯದಾಗಲ್ಲ. ಕೂಡಲೇ ಬಗೆಹರಿಸುವ ತುರ್ತಿದೆ ಎಂದರು.