ದಳ ಹಿಸುಕುತ್ತಿರುವ ಬಂಡಾಯದ ಕೈ
ಎಸ್.ನಾಗಭೂಷಣ
ತುರುವೇಕೆರೆ: ಜು.14ರಂದು ನಡೆಯಲಿರುವ ತಾಪಂ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆ ತಾಲೂಕಿನಲ್ಲಿ ಕುತೂಹಲವನ್ನು ಕೆರಳಿಸಿರುವ ಬೆನ್ನಲ್ಲೇ ಜೆಡಿಎಸ್ಗೆ ಬಂಡಾಯದ ಬಿಸಿ ತಾಗ ತೊಡಗಿದೆ. ತಾಪಂನ 17 ಸ್ಥಾನಗಳ ಪೈಕಿ 15 ಮಂದಿ ಜೆಡಿಎಸ್ನ ಸದಸ್ಯರೇ ಇದ್ದಾರೆ. ಉಳಿದ ಇಬ್ಬರು ಬಿಜೆಪಿಯವರು. ಕಾಂಗ್ರೆಸ್ನದು ಶೂನ್ಯ ಸಂಪಾದನೆ.
ಅಧ್ಯಕ್ಷ ಗಾದಿ ಸಾಮಾನ್ಯ ಮಹಿಳೆಗೆ ಮೀಸಲಿದ್ದರೆ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ. ಕಳೆದ ಕೆಲವು ದಿನಗಳಿಂದ ತಾಪಂ ಸದಸ್ಯರಲ್ಲಿ ಮುಸುಕಿನ ಗುದ್ದಾಟ ನಡೆದಿದೆ. ಕಾಮಗಾರಿಗಳ ಪಟ್ಟಿ ಮಾಡುವ ವೇಳೆ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಇದರಲ್ಲಿ ಶಾಸಕ ಎಂ.ಟಿ.ಕೃಷ್ಣಪ್ಪ ಅವರು ಹಿಂದಿನ ಅಧ್ಯಕ್ಷ ಕೋಳಾಲ ಗಂಗಾಧರ್ ಅವರಿಗೇ ಪ್ರಾಧಾನ್ಯತೆ ನೀಡಿ ಇತರರನ್ನು ಕಡೆಗಣಿಸಿದ್ದಾರೆ ಎಂದು ದೂರಿ ಹಲವಾರು ಸದಸ್ಯರು ಜೆಡಿಎಸ್ ತೆರೆಯದಿದ್ದರೂ ಶಾಸಕ ಎಂ.ಟಿ.ಕೃಷ್ಣಪ್ಪ ವಿರುದ್ಧ ಸೆಟೆದು ನಿಂತಿದ್ದಾರೆ.
ಮುಂಬರುವ ಚುನಾವಣೆಯಲ್ಲಿ ಶಾಸಕರಿಗೆ ಪಾಠ ಕಲಿಸಬೇಕೆಂದು ನಿರ್ಧರಿಸಿರುವ ಒಂದು ತಂಡ ಶಾಸಕರು ಮಾಡಲು ಉದ್ದೇಶಿಸಿರುವ ಅಭ್ಯರ್ಥಿಯ ವಿರುದ್ಧವಾಗಿ ಬೇರೊಬ್ಬ ಅಭ್ಯರ್ಥಿಯನ್ನು ಕಣಕ್ಕಿಳಿಸಿ ತಮ್ಮದೇ ತಂಡದವರನ್ನು ಅಧ್ಯಕ್ಷ ಗಾದಿಗೆ ಕೂರಿಸುವ ತಯಾರಿ ನಡೆಸಿದ್ದಾರೆ. ತೆರೆಮರೆಯಲ್ಲಿ ಕಾಂಗ್ರೆಸ್ ಸಹ ಬಹಳ ಆಸಕ್ತಿ ತೋರಿದ್ದು ಹೇಗಾದರೂ ಮಾಡಿ ಶಾಸಕರ ಬಲವನ್ನು ಕುಗ್ಗಿಸಬೇಕು ಹಾಗೂ ಶೂನ್ಯ ಸಂಪಾದನೆಯಲ್ಲಿರುವ ತಾಪಂನಲ್ಲಿ ಬಂಡಾಯವೇಳುವ ಸದಸ್ಯರನ್ನು ಕಾಂಗ್ರೆಸ್ಗೆ ಸೇರಿಸಿಕೊಂಡು ಅಧಿಪತ್ಯ ಸಾಧಿಸಬೇಕು ಎಂದು ಆಲೋಚಿಸಿದೆ.
ಈಗಾಗಲೇ ಜೆಡಿಎಸ್ (ಶಾಸಕರಿಗೆ ವಿರೋಧ ಮಾತ್ರ)ನಿಂದ ಸಿಡಿದೆದ್ದಿರುವ ಸದಸ್ಯರಿಗೆ ನೈತಿಕ ಬೆಂಬಲ ನೀಡಿರುವ ಕಾಂಗ್ರೆಸ್, ಬಂಡಾಯವೆದ್ದಿರುವ ಸದಸ್ಯರ ಕೈ ಮೇಲು ಮಾಡಿದೆ. ಹಿಂದಿನ ಕಾಮಗಾರಿಗಳ ಪಟ್ಟಿಯ ಜಟಾಪಟಿಯಲ್ಲಿ ಶಾಸಕರ ಅಂಕಿತ ಪಡೆದಿದ್ದ ಪಟ್ಟಿಯನ್ನು ಹಿಂತಿರುಗಿಸುವಲ್ಲಿ ಕಾಂಗ್ರೆಸ್ ಪ್ರಮುಖ ಪಾತ್ರ ವಹಿಸಿದೆ. ಈಗಾಗಲೇ ಶಾಸಕರ ವಿರೋಧಿ ಗುಂಪಿನಲ್ಲಿ 8 ಮಂದಿ ಇದ್ದಾರೆ. ಇವರಿಗೆ ಬಿಜೆಪಿಯ ಇಬ್ಬರು ಸದಸ್ಯರ ಬೆಂಬಲವೂ ಇದೆ ಎನ್ನಲಾಗಿದೆ. ಬಂಡಾಯಗಾರರ ತಂತ್ರ-ಪ್ರತಿತಂತ್ರಗಳಿಗೆ ತಲೆಕೆಡಿಸಿಕೊಳ್ಳದ ಶಾಸಕ ಎಂ.ಟಿ.ಕೃಷ್ಣಪ್ಪ ಚುನಾವಣೆ ಘೋಷಣೆ ಆಗಲಿ. ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ದಿನದಂದು ಯಾರು ಅಧಿಕಾರ ಪಡೆಯುತ್ತಾರೆ ಎಂಬುದನ್ನು ಕಾದು ನೋಡಿ ಎಂದು ನಗೆ ಬೀರುತ್ತಿದ್ದಾರೆ.
ಶಾಸಕರ ಬಣದಿಂದ ಅಧ್ಯಕ್ಷ ಗಾದಿಗೆ ಕಾವ್ಯ ರಾಜಕುಮಾರ್, ನಾಗಮಣಿ ಲಕ್ಷ್ಮಣಗೌಡ ಆಕಾಂಕ್ಷಿ ಪಟ್ಟಿಯಲ್ಲಿದ್ದಾರೆ. ವಿರೋಧಿ ಬಣದಲ್ಲಿ ಕುಮಾರಿ ಕಾಂತರಾಜು ಪ್ರಮುಖ ಹುರಿಯಾಳಾಗಿದ್ದಾರೆ. ಉಪಾಧ್ಯಕ್ಷ ಗಾದಿ ಮಾತುಕತೆಯ ಮೂಲಕ ಪರಿಹಾರ ಕಾಣಲಿದೆ. ಹೇಗಾದರೂ ಮಾಡಿ ತಮ್ಮದೇ ಬಣದವರು ತಾಪಂ ಅಧ್ಯಕ್ಷರಾಗಬೇಕು ಎಂದು ಎರಡೂ ಬಣಗಳು ಜಿದ್ದಿಗೆ ಬಿದ್ದಿವೆ. ಕೆಲವು ಸದಸ್ಯರು ಈಗಾಗಲೇ “¾ÚáÛ}æÃ¾Úß ºÛVÚÀ’¥ÚÆÇ¥Û§Áæ ಎನ್ನಲಾಗಿದೆ.
ಕಳೆದ ವಿಧಾನ ಸಭಾ ಚುನಾವಣೆಯಲ್ಲಿ 63 ಸಾವಿರ ಮತಗಳಿಸಿದ್ದ ಜೆಡಿಎಸ್ ಲೋಕಸಭಾ ಚುನಾವಣೆಯಲ್ಲಿ ತಾಲೂಕಿನಲ್ಲಿ ಕೇವಲ 33 ಸಾವಿರ ಮತಗಳನ್ನು ಗಳಿಸಿತ್ತು. ಇದು ಶಾಸಕ ಎಂ.ಟಿ.ಕೃಷ್ಣಪ್ಪ ಅವರಿಗೆ ಘಾಸಿ ತಂದಿದೆ. ಈ ತಾಪಂ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ಪ್ರತಿಷ್ಠೆಯ ಪ್ರಶ್ನೆಯಾಗಿರುವುದರಿಂದ ತಮ್ಮ ಬಣದವರನ್ನೇ ಅಧ್ಯಕ್ಷರನ್ನಾಗಿ ಮಾಡಲು ಕಸರತ್ತು ನಡೆಸಿದ್ದಾರೆ. ಇತ್ತ ಕಾಂಗ್ರೆಸ್ ಶೂನ್ಯದಿಂದ ಸಂಪಾದನೆ ಎನ್ನುವಂತೆ ಜೆಡಿಎಸ್ನ ಬಂಡಾಯ ಸದಸ್ಯರನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡು ಕಾಂಗ್ರೆಸ್ ಬಾವುಟ ಏರಿಸಿಯೇ ಬಿಡಬೇಕು ಎಂದು ತೆರೆಮರೆಯಲ್ಲಿ ಹೋರಾಡುತ್ತಿದೆ.