ಹಫ್ತಾ ಪದ ಬಳಸಿದ್ದಕ್ಕೆ ಕ್ಷಮೆ ಕೇಳಿದ ಕಾಂಗ್ರೆಸ್ ಸದಸ್ಯ ಸುಧೀಶ್ವರ್
ತುಮಕೂರು ನಗರ ಶಾಸಕ ಡಾ. ರಫೀಕ್ ಅಹಮದ್ ವಿರುದ್ಧ ಹಫ್ತಾ ವಸೂಲಿ ಆರೋಪ ಮಾಡಿದ್ದ ವಿಷಯಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಪಾಲಿಕೆ ಸದಸ್ಯ ಸುಧೀಶ್ವರ್ ಶನಿವಾರ ನಡೆದ ತುಮಕೂರು ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಕ್ಷಮೆಯಾಚಿಸಿದರು. ಈ ಕುರಿತು ಮಾತನಾಡಿದ ಸುಧೀಶ್ವರ್, ಹಿಂದಿನ ಸಭೆಯಲ್ಲಿ ಏರುಧನಿಯಲ್ಲಿ ಮಾತನಾಡುವ ವೇಳೆ ಹಫ್ತಾ ಪದ ಬಳಸಿರಬಹುದು. ಪದ ಬಳಕೆಯಲ್ಲಿ ಏರುಪೇರಾಗಿದೆ. ತಾವು ಉದ್ದೇಶಪೂರ್ವಕವಾಗಿ ಬಳಸಿಲ್ಲ. ಶಾಸಕ ರಫೀಕ್ ಅಹಮದ್ ಹಾಗೂ ಮೇಯರ್ ಗೀತಾ ರುದ್ರೇಶ್ ಅವರಿಗೆ ನೋವಾಗಿದ್ದರೆ ಕ್ಷಮೆಯಾಚಿಸುವೆ ಎಂದು ಸಭೆಗೆ ತಿಳಿಸಿದರು.
ಹುಲುಸಾಗಿ ಬೆಳೆದಿರುವ ಹಲಸಿಗೆ ಡಿಮ್ಯಾಂಡೇ ಇಲ್ಲ!
ತುರುವೇಕೆರೆ: ಈ ಬಾರಿ ಹಲಸಿನ ಬೆಳೆ ಬಂಪರ್ ಆಗಿ ಬಂದಿದೆ. ಸಾಮಾನ್ಯವಾಗಿ ನಲವತ್ತು, ಐವತ್ತು ಕಾಯಿ ಬಿಡುತ್ತಿದ್ದ ಮರ ಈ ಬಾರಿ ನೂರಾರು ಹಣ್ಣು ಬಿಟ್ಟಿದೆ. ಒಣ ಭೂಮಿ ಪ್ರದೇಶಗಳಾದ ತಾಲೂಕಿನ ಕಸಬಾ, ದಬ್ಬೇಘಟ್ಟ, ಮಾಯಸಂದ್ರ ಹೋಬಳಿಯಲ್ಲಿ ಈ ಬಾರಿ ಹೆಚ್ಚು ಬೆಳೆ ಬಂದಿದೆ. ನೀರಾವರಿ ಪ್ರದೇಶವಾಗಿರುವ ದಂಡಿನಶಿವರ ಹೋಬಳಿಯಲ್ಲಿ ಸಾಮಾನ್ಯ ಫಲ ನೀಡಿದೆ. ತಾಲೂಕಿನಲ್ಲಿ ಸುಮಾರು 3 ಸಾವಿರಕ್ಕೂ ಹೆಚ್ಚು ಹಲಸಿನ ಮರಗಳಿವೆ. ನಿರೀಕ್ಷೆಗಿಂತಲೂ ಹೆಚ್ಚು ಬೆಳೆಯೇನೋ ಬಂದಿದೆ. ಆದರೆ ಕೈಗೆ ಕಾಸಿಲ್ಲ ಎಂಬ ಸ್ಥಿತಿ ರೈತರಿಗಿದೆ. ಹಣ್ಣನ್ನು ಕಿತ್ತು ಊರಿನಿಂದ ಪಟ್ಟಣಕ್ಕೆ ತರಲು ವಾಹನಕ್ಕೆ ನೀಡುವ ಬಾಡಿಗೆಯೂ ದೊರೆಯುತ್ತಿಲ್ಲ ಎಂಬುದು ರೈತರ ಅಳಲು. ಆರಂಭದಲ್ಲಿ 100ಗಿಂತಲೂ ಹೆಚ್ಚು ಬೆಲೆಗೆ ಮಾರಾಟವಾಗುತ್ತಿದ್ದ ಹಲಸು ಈಗ ಕೇವಲ 20ರಿಂದ 25ಕ್ಕೆ ಮಾರಾಟವಾಗುತ್ತಿದೆ. ಹುಲುಸಾಗಿ ಬೆಳೆದ ಹಲಸಿನಿಂದ ರೈತ ಲಾಭ ಮಾಡದಿದ್ದರೂ, ಜನರು ಮಾತ್ರ ಕಡಿಮೆ ಬೆಲೆಗೆ ಸಿಕ್ಕ ಹಲಸನ್ನು ತಿಂದು ಖುಷಿ ಪಟ್ಟಿದ್ದಾರೆ ಎನ್ನುತ್ತಾರೆ ತೋಟಗಾರಿಕಾ ಇಲಾಖಾ ಸಹಾಯಕ ನಿರ್ದೇಶಕ ಗಂಗಾಧರ್.
ಗ್ರಾಮಲೆಕ್ಕಿಗ ಲೋಕಾ ಬಲೆಗೆ
ಹೆಬ್ಬೂರು: ಖಾತೆ ಬದಲಾವಣೆಗೆ ರೈತರೊಬ್ಬರಿಂದ ಹಣ ಪಡೆಯುತ್ತಿದ್ದ ಸಂದರ್ಭದಲ್ಲಿ ಲೋಕಾಯುಕ್ತರು ದಾಳಿ ನಡೆಸಿ ಗ್ರಾಮಲೆಕ್ಕಿಗರೊಬ್ಬರನ್ನು ಬಂಧಿಸಿರುವ ಘಟನೆ ನಡೆದಿದೆ. ಖಾತೆ ಬದಲಾವಣೆಗೆ ಗ್ರಾಮಲೆಕ್ಕಿಗ ಮಲ್ಲಿಕಾರ್ಜುನ್ ಎಂಬುವರು ಹೊನ್ನೇಗೌಡನ ಮೂಲಕ ಗಂಗಹನುಮಯ್ಯ ಎಂಬ ರೈತನಿಂದ ಹಣ ಪಡೆಯುತ್ತಿದ್ದ ಸಂದರ್ಭದಲ್ಲಿ ಲೋಕಾಯುಕ್ತ ಸಿಪಿಐ ಗಂಗಲಿಂಗಯ್ಯ ಮತ್ತು ತಂಡ ದಾಳಿ ನಡೆಸಿ ಗ್ರಾಮಲೆಕ್ಕಿಗನನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸಮುದಾಯ ಭವನಕ್ಕೆ ನೆರವು
ತುಮಕೂರು: ತುರುವೇಕೆರೆ ತಾಲೂಕು ತೊರೆಮಾವಿನಹಳ್ಳಿ ಮಾಳೆಯಲ್ಲಿ ಶ್ರೀ ರೇಣುಕ ಯಲ್ಲಮ್ಮ, ಮಸ್ಸಿಯಮ್ಮ ಮತ್ತು ದೆದೊಡ್ಡಮ್ಮ ದೇವಸ್ಥಾನದ ಆವರಣದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಿಂದ ಅನುದಾನ ನೀಡುವ ಭರವಸೆಯನ್ನು ಸಂಸದ ಎಸ್.ಪಿ. ಮುದ್ದಹನುಮೇಗೌಡ ನೀಡಿದರು. ಅವರು ತುರುವೇಕೆರೆ ತಾಲೂಕಿನ ತೊರೆಮಾವಿನಹಳ್ಳಿ ಮಾಳೆಯಲ್ಲಿ ಶ್ರೀರೇಣುಕ ಯಲ್ಲಮ್ಮ, ಮಸ್ಸಿಯಮ್ಮ ಮತ್ತು ದೊಡ್ಡಮ್ಮ ದೇವರ ಮಂಡಲ ಪೂಜೆ ಹಬ್ಬದ ಅಂಗವಾಗಿ ಶ್ರೀ ಆದಿಶಕ್ತಿ ಕೃಪಾಪೋಷಿತ ನಾಟಕ ಮಂಡಳಿ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಕುರುಕ್ಷೇತ್ರ ನಾಟಕ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು. ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಮಾಳೆ ಕೃಷ್ಣಪ್ಪ, ಮುಖಂಡರಾದ ಭೈರಪ್ಪ, ಎಸ್. ಶಿವಲಿಂಗಯ್ಯ, ರಾಮಣ್ಣ, ಅಮಾನಿಕೆರೆ ಮಂಜಣ್ಣ, ಬೋರೇಗೌಡ ಇತರರು ಇದ್ದರು.