ತುಮಕೂರು: ರಾಜ್ಯ ಕಾಂಗ್ರೆಸ್ ಸರ್ಕಾರ ತನ್ನ ಪ್ರಣಾಳಿಕೆಯಲ್ಲಿ ಹೇಳಿದಂತೆ ರಾಜ್ಯಾದ್ಯಾಂತ ಇರುವ 40 ಸಾವಿರಕ್ಕೂ ಹೆಚ್ಚು ಗುತ್ತಿಗೆ ಪೌರಕಾರ್ಮಿಕರ ಸೇವೆಯನ್ನು ಕಾಯಂ ಮಾಡುವಂತೆ ಸಿಐಟಿಯು ಒತ್ತಾಯಿಸಿದೆ.
ಈ ಕುರಿತು ತುಮಕೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಸಿಐಟಿಯು ಮುಖಂಡರು, ರಾಜ್ಯಾದ್ಯಂತ ಇರುವ 228 ಕ್ಕೂ ಹೆಚ್ಚು ನಗರ ಸ್ಥಳೀಯ ಸಂಸ್ಥೆಗಳಾದ ಪಪಂ, ಪುರಸಭೆ, ನಗರಸಭೆ, ಮಹಾನಗರ ಪಾಲಿಕೆಗಳಲ್ಲಿ ಸುಮಾರು 40 ಸಾವಿರಕ್ಕೂ ಹೆಚ್ಚು ಗುತ್ತಿಗೆ ಪೌರಕಾರ್ಮಿಕರು ಕಳೆದ 15-20 ವರ್ಷಗಳಿಂದ ವಾಟರ್ಮನ್, ಡ್ರೈವರ್, ಎಸ್ಎಎಸ್ ನೌಕರರು, ಕಚೇರಿ ಸಹಾಯಕರು, ಕಂಪ್ಯೂಟರ್ ಆಪರೇಟರ್ಗಳು ಮತ್ತಿತರೆ ಹುದ್ದೆಗಳಲ್ಲಿ ಅತ್ಯಲ್ಪ ವೇತನಕ್ಕೆ ಯಾವುದೇ ಕಾರ್ಮಿಕ ಕಾನೂನುಗಳ ಪ್ರಯೋಜನವಿಲ್ಲದೆ ದುಡಿಯುತ್ತಾ ಬಂದಿದ್ದಾರೆ. ಈ ನಿಟ್ಟಿನಲ್ಲಿ ಈ ಕಾರ್ಮಿಕರ ಸೇವೆಯನ್ನು ಖಾಯಂಗೊಳಿಸಲು ನೂರಾರು ಹೋರಾಟಗಳು ರಾಜ್ಯದ್ಯಂತ ನಡೆಯುತ್ತಲೇ ಬಂದಿದೆ.
ಕಾಯಂಗೊಳಿಸಿ: ಕಳೆದ ವಿಧಾನಸಭಾ ಚುನಾವಣಾ ಪ್ರಣಾಳಿಕೆಯಲ್ಲಿ ಕಾಂಗ್ರೆಸ್, ಗುತ್ತಿಗೆ ಪೌರಸೇವಾ ನೌಕರರನ್ನು ಟೆಂಡರ್ ಪ್ರಕ್ರಿಯೆಯಿಂದ ಮುಕ್ತಗೊಳಿಸುವುದಾಗಿ ಘೋಷಿಸಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2013ರಲ್ಲಿ ಮಂಡಿಸಿದ ಬಜೆಟ್ನಲ್ಲಿ ಗುತ್ತಿಗೆ ಪದ್ಧತಿಯನ್ನು ರದ್ದುಪಡಿಸುವುದಾಗಿ ಘೋಷಿಸಿದ್ದರು. ಈ ಹಿನ್ನೆಲೆಯಲ್ಲಿ ಹಾಗೂ ರಾಜ್ಯ ಕಾರ್ಮಿಕ ಸಂಘಗಳು ನಡೆಸಿದ ಹೋರಾಟಗಳು ಇದಕ್ಕೆ ಪೂರಕವಾಗಿ ರಾಜ್ಯ ಹೈಕೋರ್ಟ್ನಲ್ಲಿ ಮಾಜಿ ಮೇಯರ್ ನಾರಾಯಣ್ ಅವರು ಸಲ್ಲಿಸಿದ್ದ ಅರ್ಜಿಯಲ್ಲಿ ಹೈಕೋರ್ಟ್ ನೀಡಿದ ನಿರ್ದೇಶನದಂತೆ ಗುತ್ತಿಗೆ ಕಾರ್ಮಿಕ ಪದ್ಧತಿಯನ್ನು ಹಂತ ಹಂತವಾಗಿ ಮುಕ್ತಾಯಗೊಳಿಸಬೇಕಾಗಿ ಹಾಗೂ ಗುತ್ತಿಗೆ ಕಾರ್ಮಿಕರಾಗಿ ದುಡಿದ ಎಲ್ಲರ ಸೇವೆಯನ್ನು ಕಾಯಂಗೊಳಿಸಬೇಕಾಗಿದೆ.
ಹಕ್ಕೊತ್ತಾಯಗಳು ಹೀಗಿವೆ: ಬಿಬಿಎಂಪಿಯಲ್ಲಿ ಹೊಸದಾಗಿ 4 ಸಾವಿರ ಪೌರ ಕಾರ್ಮಿಕರ ನೇಮಕಾತಿ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿ, ಈಗಾಗಲೇ ಗುತ್ತಿಗೆ ಆಧಾರದಲ್ಲಿ ದುಡಿಯುತ್ತಿರುವವರನ್ನು ಕಾಯಂಗೊಳಿಸುವುದು. ಕಾಯಂ ಆಗುವವರೆಗೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡುವುದು. ಪೊಲೀಸ್ ಮಾದರಿಯಲ್ಲಿ ಪೌರಕಾರ್ಮಿಕರ ಜಿಲ್ಲಾ ಕೇಂದ್ರಗಳಲ್ಲಿ ಅಗತ್ಯ ವಸ್ತುಗಳು ರಿಯಾಯಿತಿಯಲ್ಲಿ ದೊರೆಯುವಂತೆ ಸರ್ಕಾರಿ ಕ್ಯಾಂಟೀನ್ ಆರಂಭಿಸುವುದು. ದಲಿತರಲ್ಲಿ ಒಂದು ನಿರ್ದಿಷ್ಟ ಜನಾಂಗ ತಲತಲಾಂತರದಿಂದ ಈ ವೃತ್ತಿಯನ್ನು ನಿರ್ವಹಿಸುವುದನ್ನು ತಪ್ಪಿಸುವ ಸಲುವಾಗಿ ವಿದ್ಯಾವಂತ ಪೌರಕಾರ್ಮಿಕರ ಮಕ್ಕಳಿಗೆ ವೃತ್ತಿ ಶಿಕ್ಷಣ ತರಬೇತಿ, ಉದ್ಯೋಗದಲ್ಲಿ ಹಾಗೂ ಪ್ರಾಥಮಿಕ ಹಂತದಿಂದ ಪದವಿವರೆಗೆ ಉಚಿತ ವಸತಿ ಶಿಕ್ಷಣ ಕೇಂದ್ರಗಳನ್ನು ಜಿಲ್ಲಾ ಕೇಂದ್ರಗಳಲ್ಲಿ ಆರಂಭಿಸುವುದು. ಐಪಿಡಿ ಸಾಲಪ್ಪ ವರದಿಯ ಸಕಾರಾತ್ಮಕ ಶಿಫಾರಸುಗಳನ್ನು ಜಾರಿಗೆ ತರುವುದು. ಸುದ್ದಿಗೋಷ್ಠಿಯಲ್ಲಿ ಸಿ. ವೆಂಕಟೇಶ್, ಸೈಯದ್ ಮುಜೀಬ್, ಎನ್.ಕೆ. ಸುಬ್ರಹ್ಮಣ್ಯಂ, ಎಸ್.ಎಚ್. ಚಂದ್ರಪ್ಪ ನಾಗರಾಜು ಕೊರಟಗೆರೆ, ರವಿಕುಮಾರ್ ಮಧುಗಿರಿ, ಕೃಷ್ಣಪ್ಪ ಕುಣಿಗಲ್, ಗಂಗಾಧರ್ ಇದ್ದರು.