ರೈತರ ಮೇಲೆ ದೌರ್ಜನ್ಯವೆಸಗಿದರೆ ಕಾಂಗ್ರೆಸ್ ಪತನ
ಕುಣಿಗಲ್: ಕಾಂಗ್ರೆಸ್ ಸರ್ಕಾರ ರೈತರ ಮೇಲೆ ಲಾಠಿಪ್ರಹಾರ, ಗೋಲಿಬಾರ್ನಂತಹ ಕೃತ್ಯ ನಿಲ್ಲಿಸಬೇಕು. ಇಲ್ಲವಾದಲ್ಲಿ 1983ರಲ್ಲಿ ಕಾಂಗ್ರೆಸ್ ಧೂಳೀ ಪಟವಾದ ಘಟನೆ ಪುನಾರವರ್ತನೆಯಾಗುತ್ತದೆ ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಎಚ್ಚರಿಸಿದರು.
ಪಟ್ಟಣದಲ್ಲಿ ರಾಜ್ಯ ರೈತಸಂಘ ಹಾಗೂ ಹಸಿರುಸೇನೆ ತಾಲೂಕು ಘಟಕದ ಕಾರ್ಯಾಲಯ ಉದ್ಘಾಟಿಸಿ ಮಾತನಾಡಿ, ಕೂಡಗಿಯಲ್ಲಿ ನಡೆದ ಘಟನೆಯನ್ನು ಖಂಡಿಸಿ, ಉಷ್ಣವಿದ್ಯುತ್ ಸ್ಥಾವರ ಜಗತ್ತಿನಾದ್ಯಂತ ಸಂಪೂರ್ಣ ವಿಫಲವಾದ ಯೋಜನೆಯಾಗಿದೆ.
ಈ ಯೋಜನೆ ಅಭಿವೃದ್ಧಿಗೊಳಿಸಿ, ಸಂಶೋಧನೆ ನೆಪದಲ್ಲಿ ಸ್ಥಾಪಿಸಲು ಹೊರಟಿರುವುದು ಖಂಡನೀಯ. ವಿದ್ಯುತ್ ಉತ್ಪಾದನೆಗೆ ಹಲವಾರು ಪರ್ಯಾಯ ಮಾರ್ಗಗಳ ಬಗ್ಗೆ ಯೋಚಿಸದ ರಾಜ್ಯ ಸರ್ಕಾರ ಫಲವತ್ತಾದ ರೈತರ ನೆಲದಲ್ಲಿ ಸ್ಥಾಪಿಸಲು ಮುಂದಾಗಿರುವುದು ರೈತವಿರೋಧಿ ಧೋರಣೆಯಾಗಿದೆ ಎಂದರು. ಬಹುಸಂಖ್ಯಾತ ರೈತರ ಮನವಿಗೆ ಮನ್ನಣೆಕೊಟ್ಟು ರಾಜ್ಯ ಸರ್ಕಾರ ಕೂಡಗಿ ಉಷ್ಣವಿದ್ಯುತ್ ಯೋಜನೆ ಕೈಬಿಡಬೇಕು, ಗೋಲಿಬಾರ್, ಲಾಠಿಪ್ರಹಾರದಲ್ಲಿ ಗಾಯಗೊಂಡಿರುವ ರೈತರಿಗೆ ತಲಾ ಐದುಲಕ್ಷ ಪರಿಹಾರ ನೀಡಬೇಕೆಂದು ಆಗ್ರಹಿಸಿದರು.
ಕಿತ್ತನಾಗಮಂಗಲ ಅರೇಶಂಕರಮಠದ ಸಿದ್ದರಾಮಚೈತನ್ಯ ಸ್ವಾಮಿಜಿ ಮಾತನಾಡಿ, ತಾಲೂಕಿನ ರೈತರ ಸಮಸ್ಯೆಗಳ ಪರಿಹಾರಕ್ಕೆ ರೈತಸಂಘ ಪ್ರಾರಂಭವಾಗಿರುವುದು ಸ್ವಾಗತಾರ್ಹ, ಘಟಕ ರಾಜಕೀಯ ಪ್ರಭಾವಕ್ಕೆ ಒಳಗಾಗದೆ ರೈತಪರ ಸಮಸ್ಯೆ ನಿವಾರಿಸುವಲ್ಲಿ ಪ್ರಾಮಾಣಿಕಪಾತ್ರ ವಹಿಸಬೇಕೆಂದರು. ಬೆಂಗಳೂರು ಹಂಗರಳ್ಳಿ ಚುಂಚನಗಿರಿ ಶಾಖಾಮಠದ ಬಾಲಮಂಜುನಾಥ ಸ್ವಾಮಿಜಿ ಮಾತನಾಡಿದರು.
ರೈತರ ಸಂಘದ ಜಿಲ್ಲಾಧ್ಯಕ್ಷ ದೇವರಾಜು, ತಾಲೂಕು ಅಧ್ಯಕ್ಷ ಅನಂದಪಟೇಲ, ಪದಾಧಿಕಾರಿಗಳಾದ ದಿನೇಶ್ ಕುಮಾರ್, ಸತೀಶ್, ನಿಡಸಾಲೆಪ್ರಸಾದ್ ಇದ್ದರು.