ತುರುವೇಕೆರೆ: ತಾಲೂಕನ್ನು ಸಂಪೂರ್ಣ ಶೌಚ ಮುಕ್ತವನ್ನಾಗಿಸುತ್ತೇವೆ. ಪ್ರತಿಯೊಬ್ಬರಿಗೂ ಶುಚಿತ್ವ ಕಲ್ಪಿಸುತ್ತೇವೆ. ಎಲ್ಲರೂ ಶುಚಿತ್ವ ಕಾಪಾಡಿಕೊಳ್ಳಿ ಎಂದು ಉಪದೇಶ ಮಾಡುವ ತಾಲೂಕು ಕಚೇರಿಯೇ ಅವ್ಯವಸ್ಥೆಗಳ ಆಗರವಾಗಿದೆ. ಒಮ್ಮೆ ತಾಲೂಕು ಕಚೇರಿಯ ಒಳಗೆ ತಿರುಗಾಡಿ ಬಂದರೆ ವಾಂತಿ ಬರುವುದಂತೂ ಖಂಡಿತ. ಕೆಳ ಮತ್ತು ಮೇಲಂತಸ್ತಿನಲ್ಲಿ ಪುರುಷರಿಗೆ ಹಾಗೂ ಮಹಿಳೆಯರಿಗೆ ಎಂದು ಶೌಚಾಲಯ ನಿರ್ಮಿಸಲಾಗಿದೆ. ಆದರೆ ಅವುಗಳು ಉಪಯೋಗಕ್ಕೆ ಬಾರದಂತಾಗಿ ವರ್ಷಗಳೇ ಕಳೆದಿವೆ. ಆದರೂ ಅವುಗಳನ್ನು ರಿಪೇರಿ ಮಾಡಿಸುವ ಗೋಜಿಗೆ ಹೋಗಿಲ್ಲ. ಈ ಆವರಣದಲ್ಲಿ ತಾಲೂಕು ಕಚೇರಿ, ಖಜಾನೆ, ಚುನಾವಣಾ ವಿಭಾಗ, ಅಬಕಾರಿ, ಉಪನೋಂದಣಾಧಿಕಾರಿಗಳ ಕಚೇರಿ, ವಿಧಾನ ಪರಿಷತ್ ಸದಸ್ಯ ಎಂ.ಡಿ.ಲಕ್ಷ್ಮೀನಾರಾಯಣ್ ಅವರ ಕಾರ್ಯಾಲಯ, ದಾಖಲಾತಿಗಳ ಕಚೇರಿ, ಆಹಾರ ಮತ್ತು ನಾಗರಿಕ ಇಲಾಖೆ, ಪಹಣಿ ವಿತರಣಾ ಕೇಂದ್ರ ಸೇರಿದಂತೆ ಹತ್ತಾರು ಸರ್ಕಾರಿ ಕಚೇರಿಗಳಿವೆ. ಪ್ರತಿ ಇಲಾಖೆಗೂ ತಾಲೂಕಿನ ಜನತೆ ಆಗಮಿಸಿ ತಮ್ಮ ಕಾರ್ಯಗಳನ್ನು ಮಾಡಿಸಿಕೊಳ್ಳಬೇಕಿದೆ. ಅಲ್ಲದೇ ಎಲ್ಲಾ ಇಲಾಖೆಗಳಿಂದ ಸುಮಾರು ಇನ್ನೂರಕ್ಕೂ ಹೆಚ್ಚು ಮಂದಿ ನೌಕರರಿದ್ದಾರೆ. ಇಲ್ಲಿಯ ಶೌಚಾಲಯದ ದುರವಸ್ಥೆಯಿಂದ ಸಾರ್ವಜನಿಕರಿಗಿರಲಿ ಅಲ್ಲಿಯ ನೌಕರರಿಗೇ ಶೌಚಾಲಯ ಇಲ್ಲದಂತಾಗಿದೆ. ಹೀಗಾಗಿ ಶೀಘ್ರವೇ ಎಲ್ಲವನ್ನೂ ಸರಿಪಡಿಸಿ.
- ಎಸ್.ನಾಗಭೂಷಣ್
ಡೆಂಘೀ: ಸ್ಪಂದಿಸಿದ ವೈದ್ಯರು
ಶಿರಾ: ತಾಲೂಕಿನ ಮೊಸರಕುಂಟೆ ಗ್ರಾಮದಲ್ಲಿ ಒಂದು ತಿಂಗಳಿಂದ ಜ್ವರಪೀಡಿತರ ಸಂಖ್ಯೆ ಹೆಚ್ಚಾಗಿದ್ದು, ಈವರೆಗೆ ವಿವಿಧ ಆಸ್ಪತ್ರೆಗಳಲ್ಲಿ 60ಕ್ಕೂ ಹೆಚ್ಚು ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗ್ರಾಮಸ್ಥರು ಡೆಂಘಿ ಇರಬಹುದು ಎಂದು ಆತಂಕಗೊಂಡಿದ್ದಾರೆ.
ಹಲವು ದಿನಗಳಿಂದ ಜ್ವರದ ಬಾದೆಯಿಂದ ನರಳುತ್ತಿದ್ದರೂ ಆರೋಗ್ಯ ಇಲಾಖೆಯ ಯಾರೂ ಕೂಡ ಇತ್ತ ಗಮನಹರಿಸುತ್ತಿಲ್ಲ ಎಂದು ಬೇಸತ್ತ ಕೆಲ ಗ್ರಾಮಸ್ಥರು ತಾಲೂಕು ದಂಡಾಧಿಕಾರಿ ಪದ್ಮನಾಭಶಾಸ್ತ್ರಿಗಳನ್ನು ದೂರವಾಣಿ ಮೂಲಕ ಸಂದಿಸಿದಾಗ ತಕ್ಷಣ ಪ್ರವೃತ್ತರಾದ ದಂಡಾಧಿಕಾರಿಗಳು ತಾಲೂಕು ವೈದ್ಯಾಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳುವಂತೆ ತಿಳಿಸಿದ್ದಾರೆ.
ತಪಾಸಣೆ: ತಾಲೂಕು ವೈದ್ಯಾಧಿಕಾರಿ ಡಾ. ತಿಮ್ಮರಾಜು ಸೇರಿದಂತೆ ಆರೋಗ್ಯ ಇಲಾಖೆಯ ಸಿಬ್ಬಂದಿ ತಕ್ಷಣ ಮೊಸರುಕುಂಟೆ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರನ್ನು ತಪಾಸಣೆಗೊಳಪಡಿಸಿ ತಕ್ಷಣವೆ ಹತ್ತಿರದಲ್ಲಿದ್ದ ತಾವರೆಕರೆ ಆಸ್ಪತ್ರೆಗೆ ಆಂಬುಲೆನ್ಸ್ ಮೂಲಕ ಚಿಕಿತ್ಸೆಗಾಗಿ ಕಳುಹಿಸಿದ್ದಾರೆ. ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ತಾಲೂಕು ವೈದ್ಯಾಧಿಕಾರಿ ಡಾ.ತಿಮ್ಮರಾಜು, ಗ್ರಾಮದಲ್ಲಿ ಸುಮಾರು 70ಮಂದಿಯ ರಕ್ತ ಪರೀಕ್ಷೆ ಮಾಡಲಾಗಿತ್ತು. ಈ ಪೈಕಿ 5 ಮಂದಿಗೆ ಶಂಕಿತ ಡೆಂಘಿ ಕಂಡು ಬಂದಿದೆ. ಈ 5 ಮಂದಿಯಲ್ಲಿ ವೃಂದಮ್ಮ ಎನ್ನುವ ಮಹಿಳೆಗೆ ಮಾತ್ರ ಡೆಂಘಿ ದೃಢಪಟ್ಟಿದ್ದು, ಈಗ ಗುಣಮುಖರಾಗುತ್ತಿದ್ದಾರೆ ಎಂದರು.
ಪರಿಶೀಲನೆ: ತಾವರೆಕೆರೆ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಡಾ.ಭಾನುಪ್ರಕಾಶ್ರನ್ನು ನಿತ್ಯ ಭೇಟಿ ನೀಡಿ ಪರಿಶೀಲಿಸುವಂತೆ ನಿಯೋಜಿಸಲಾಗಿದೆ. ಸ್ಥಳಕ್ಕೆ ತಹಸೀಲ್ದಾರ್ ಪದ್ಮನಾಭ ಶಾಸ್ತ್ರಿ, ರಕ್ಷಣಾ ವೇದಿಕೆಯ ಮಹೇಶ್, ಜಿಲ್ಲಾ ಬಿಜೆಪಿ ಹಿಂದುಳಿದ ವರ್ಗಗಳ ಅಧ್ಯಕ್ಷ ಬಿ.ಕೆ. ಮಂಜುನಾಥ್, ಆಸ್ಪತ್ರೆ ಸಿಬ್ಬಂದಿ ಮತ್ತಿತರರು ಭೇಟಿ ನೀಡಿದ್ದರು.