ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

108 ಆ್ಯಂಬುಲೆನ್ಸ್ ಸೇವೆ ವ್ಯತ್ಯಯ

Rashmi Kasaragodu
Updated On : 8 Jul 2014, 2:07 am

ಕುಣಿಗಲ್: ತಾಲೂಕಿನಾದ್ಯಂತ 108 ತುರ್ತು ಸೇವಾ ವಾಹನಗಳ ಸೇವೆ ಭಾನುವಾರದಿಂದ ವ್ಯತ್ಯಯಗೊಂಡಿದೆ. ಸಂಬಂಧಪಟ್ಟ ಇಲಾಖೆಯವರು ಕೂಡಲೇ ಅಗತ್ಯ ಕ್ರಮ ಕೈಗೊಂಡು ಸೇವೆಯು ಮುಂದುವರಿಕೆಗೆ ಕ್ರಮ ಕೈಗೊಳ್ಳುವಂತೆ ನಾಗರೀಕರು ಆಗ್ರಹಿಸಿದ್ದಾರೆ.
ತಾಲೂಕಿನಲ್ಲಿ ಕುಣಿಗಲ್, ಹುಲಿಯೂರು ದುರ್ಗ ಹಾಗೂ ಅಮೃತೂರಿನಲ್ಲಿ ತಲಾ ಒಂದು 108 ತುರ್ತು ವಾಹನಗಳಿವೆ. ಹದಿಮೂರಕ್ಕೂ ಹೆಚ್ಚು ಸಿಬ್ಬಂದಿಗಳಿದ್ದಾರೆ. ದಿನವೊಂದಕ್ಕೆ ಮೂರು ವಾಹನಗಳಿಂದ ಸರಾಸರಿ 12ರಿಂದ 16 ಆರೋಗ್ಯ ತುರ್ತು ಕರೆಗಳಿಗೆ ಸ್ಪಂದಿಸುತ್ತಿದ್ದಾರೆ. ರೋಗಿಗಳ, ಗರ್ಭಿಣಿಯರು ಸೇರಿದಂತೆ ಅಪಘಾತದಲ್ಲಿ ಗಾಯಗೊಂಡವರಿಗೆ ಸ್ಪಂದಿಸುತ್ತಾ ಜೀವ ಸಂರಕ್ಷಣೆಯಲ್ಲಿ ಪರಿಣಾಮಕಾರಿ ಕೊಡುಗೆ ನೀಡುತ್ತಿದ್ದಾರೆ.
ಇಂಧನ ಇಲ್ಲ: ವಾಹನಗಳಿಗೆ ಇಂಧನ ವ್ಯವಸ್ಥೆಗೆ ಗುತ್ತಿಗೆ ಸಂಸ್ಥೆ ಸ್ಮಾರ್ಟ್ಕಾರ್ಡ್ ನೀಡುತ್ತಿದ್ದಾರೆ. ಆ ಮೂಲಕ ಪೆಟ್ರೋಲ್ ಬಂಕ್ಗಳಲ್ಲಿ ಇಂಧನ ತುಂಬಿಸಿಕೊಂಡು ವಾಹನಗಳು ಸಾರ್ವಜನಿಕ ಸೇವೆಯಲ್ಲಿದ್ದವು. ಆದರೆ, ಇಂಧನ ವೆಚ್ಚಕ್ಕಾಗಿರುವ ಸ್ಮಾರ್ಟ್ಕಾರ್ಡ್ಗೆ ಅನುದಾನ ಬಿಡುಗಡೆಯಾಗದ ಕಾರಣ, ವಾಹನವಿದ್ದರೂ ಇಂಧನವಿಲ್ಲದೆ 108 ವಾಹನಗಳು ತುರ್ತು ಕರೆ ಬಂದರೂ ಸ್ಪಂದಿಸದ ಅಸಹಾಯಕ ಸ್ಥಿತಿಯಲ್ಲಿವೆ.
ಆದರೆ, ಈ ಬಗ್ಗೆ ತಾಲೂಕು ಆರೋಗ್ಯಾಧಿಕಾರಿಗಳನ್ನು ಪ್ರಶ್ನಿಸಿದರೆ, ಆರೋಗ್ಯಾಧಿಕಾರಿ ಶಾಂತಲಾ, 108 ತುರ್ತುಸೇವಾ ವಾಹನಗಳು ಸಂಪೂರ್ಣ ಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದು ಆ ಏಜೆನ್ಸಿಗೆ ಸಂಬಂಧಪಟ್ಟ ವಿಷಯವಾಗಿದೆ. ನಾವೇನು ಮಾಡಲಾಗದು ಎನ್ನುತ್ತಾರೆ.
ತುರ್ತು ಸೇವೆ: ಮೊದಲೇ ಅಪಘಾತಗಳ ತಾಣವಾದ ರಾಷ್ಟ್ರೀಯ ಹೆದ್ದಾರಿ 75 ತಾಲೂಕಿನಲ್ಲಿ ಹಾದು ಹೋಗಿದ್ದು, ಯಾವುದೇ ಅನಾಹುತಗಳು ಸಂಭವಿಸಿದರೆ ತಕ್ಷಣ ಸ್ಪಂದಿಸಲು ತುರ್ತು ಸೇವಾ ವಾಹನಗಳ ಸೇವೆ ಅಗತ್ಯವಾಗಿದೆ. ಸಂಬಂಧಪಟ್ಟ ಇಲಾಖಾಧಿಕಾರಿಗಳು ಇನ್ನಾದರೂ ಎಚ್ಚೆತ್ತು 108 ತುರ್ತು ಸೇವಾ ವಾಹನಗಳ ಸೇವೆ ಎಂದಿನಂತೆ ಸಾರ್ವಜನಿಕರಿಗೆ ಲಭ್ಯವಾಗುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ನಾಗರಿಕರು ಆಗ್ರಹಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement