ಅಪಘಾತ: 11ಮಂದಿಗೆ ಗಾಯ
ನಾಗಮಂಗಲ: ರಸ್ತೆ ಅಪಘಾತದಲ್ಲಿ ಪಿ.ಎಸ್.ಐ, ಮುಖ್ಯಪೇದೆ ಸೇರಿದಂತೆ ಹನ್ನೊಂದು ಮಂದಿ ಗಾಯಗೊಂಡಿರುವ ಘಟನೆ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 75ರ ಗೊಂದಿಹಳ್ಳಿ ಸಮೀಪ ಭಾನುವಾರ ರಾತ್ರಿ ಸಂಭವಿಸಿದೆ.
ಮಾಗಡಿ ತಾಲೂಕಿನ ತಾವರೆಕೆರೆ ಸಂತೆಯಲ್ಲಿ ವ್ಯಾಪಾರ ಮುಗಿಸಿಕೊಂಡು ಊರಿಗೆ ವಾಪಸ್ ತೆರಳುತ್ತಿದ್ದ ಕೂಲಿಕಾರ್ಮಿಕರನ್ನು ಹೊತ್ತಿದ್ದ ಗೂಡ್ಸ್ ಆಟೋ, ಚಲಿಸುತ್ತಿದ್ದ ಟ್ರಾಕ್ಟರ್ಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ, ಗೂಡ್ಸ್ ಆಟೋದಲ್ಲಿದ್ದ ಸಂತೆ ವ್ಯಾಪಾರಿಗಳಾದ ತಾಲೂಕಿನ ತಿರುಮಲಾಪುರದ ಶರತ್ ಕುಮಾರ್ (19) ಗುರುನಾಯಕ (23) ಮಂಜುನಾಥ (23) ಹಾಗೂ ಗೂಡ್ಸ್ ಆಟೋಚಾಲಕ ಶಿವಮೂರ್ತಿ (29) ಹಾಗೂ ಗರುಡನಹಳ್ಳಿ ಗ್ರಾಮದ ಟ್ರ್ಯಾಕ್ಟರ್ ಚಾಲಕ ವೆಂಕಟೇಶ (55) ಹಾಗೂ ಹನುಮಯ್ಯ (55) ಎಂಬುವರಿಗೆ ಗಾಯಗಳಾಗಿವೆ. ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಬೆಳ್ಳೂರು ಪೊಲೀಸರು ಗಾಯಾಳುಗಳನ್ನು ಟ್ರಾಕ್ಟರ್ ಮತ್ತು ಗೂಡ್ಸ್ ಆಟೋವನ್ನು ತೆರವುಗೊಳಿಸುವ ವೇಳೆ ಬೆಂಗಳೂರಿನಿಂದ ಹಾಸನ ಕಡೆಗೆ ವೇಗವಾಗಿ ಸಂಚರಿಸುತ್ತಿದ್ದ ಜಲ್ಲಿ ತುಂಬಿದ ಲಾರಿ ವಾಹನ ದಟ್ಟಣೆ ನಿಯಂತ್ರಣ ಕಾರ್ಯದಲ್ಲಿ ತೊಡಗಿದ್ದ ಬೆಳ್ಳೂರು ಪಿ.ಎಸ್.ಐ. ನಿರಂಜನ್, ಮುಖ್ಯ ಪೇದೆ ಶ್ರೀಧರಸ್ವಾಮಿ, ಗೊಂದಿಹಳ್ಳಿ ಗ್ರಾಮದ ಕುಮಾರ್, ಬೀರಗಾನಹಳ್ಳಿಯ ಪ್ರದೀಪ್, ಕಲ್ಲಹಳ್ಳಿಯ ಪರಮೇಶ ಎಂಬುವರಿಗೆ ಡಿಕ್ಕಿಹೊಡೆದಿದೆ.ಈ ಅವಘಡದಲ್ಲಿ ಪಿ.ಎಸ್.ಐ. ನಿರಂಜನ್ ಬೆನ್ನಿಗೆ ತೀವ್ರ ಗಾಯವಾಗಿ ಆದಿಚುಂಚನಗಿರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಮುಖ್ಯ ಪೇದೆ ಶ್ರೀಧರಸ್ವಾಮಿಯನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದ ಮೂವರು ಇನ್ನಿತರೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅರ್ಜಿ ಆಹ್ವಾನ
ಮಂಡ್ಯ: ಜಿಲ್ಲಾ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವತಿಯಿಂದ ಐಎಎಸ್, ಕೆಎಎಸ್ ಮತ್ತು ಬ್ಯಾಂಕಿಂಗ್ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತವಾಗಿ ಪರೀಕ್ಷಾ ಪೂರ್ವ ತರಬೇತಿ ನೀಡಲು ರಾಜ್ಯದ ಹಿಂದುಳಿದ ವರ್ಗಗಳ ಪ್ರವರ್ಗ -1, ಪ್ರವರ್ಗ -2ಎ, 3ಎ ಹಾಗೂ 3ಬಿ ಸೇರಿದ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಅರ್ಜಿಯನ್ನು ಆನ್ಲೈನ್ ಮೂಲಕ ಸಲ್ಲಿಸಲು ಜುಲೈ 23 ಕೊನೆಯ ದಿನಾಂಕವಾಗಿದ್ದು, ಹೆಚ್ಚಿನ ವಿವರಗಳಿಗಾಗಿ ಇಲಾಖಾ ವೆಬ್ಸೈಟ್ ಅಥವಾ ಮೊ.9480818013, 9480818010 ಅನ್ನು ಸಂಪರ್ಕಿಸುವಂತೆ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.