ಆರ್ಥಿಕ ಸಬಲತೆ ಸಾಧಿಸಿ: ರಾಜ್ಕುಮಾರ್
ಚಿಕ್ಕನಾಯಕನಹಳ್ಳಿ: ಯಾವುದೇ ಜನಾಂಗ ಪ್ರಗತಿ ಹೊಂದಬೇಕಾದರೆ ಶೈಕ್ಷಣಿಕವಾಗಿ ಹಾಗೂ ಆರ್ಥಿಕವಾಗಿ ಸಬಲರಾಗಬೇಕು ಎಂದು ಬ್ಯಾಂಕ್ ನಿರ್ದೇಶಕ ಸಿಂಗದಹಳ್ಳಿ ರಾಜ್ಕುಮಾರ್ ಹೇಳಿದರು.
ಪಟ್ಟಣದಲ್ಲಿ ತಾಲೂಕು ವಾಲ್ಮೀಕಿ ಸಮಾಜ ಪ್ರಾರಂಭಿಸಿರುವ ವಾಲ್ಮೀಕಿ ಪತ್ತಿನ ಸಹಕಾರ ಸಂಘವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಪೋಷಕರು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸುವುದು ಮೊದಲ ಕರ್ತವ್ಯವಾಗಬೇಕು. ಅದಕ್ಕಾಗಿ ಅವರು ಸಹಕಾರ ಸಂಘಗಳಿಂದ ಸಾಲ ಪಡೆದು, ತ್ವರಿತವಾಗಿ ಆದಾಯ ತರುವ ಹೈನುಗಾರಿಕೆ ಮ್ತತು ಕುರಿ ಸಾಕಾಣಿಕೆಯಂಥ ಉದ್ಯೋಗ ಕೈಗೊಳ್ಳಬೇಕು. ಆ ಮೂಲಕ ಮಕ್ಕಳಿಗೆ ಯೋಗ್ಯ ಶಿಕ್ಷಣ ಕೊಡಿಸಬೇಕು ಎಂದರು. ನೂತನ ಸಹಕಾರ ಸಂಘದ ಕಾರ್ಯಕಾರಿ ಮಂಡಳಿಯನ್ನು ಅವಿರೋಧವಾಗಿ ರಚಿಸಲಾಯಿತು. ಅಧ್ಯಕ್ಷರಾಗಿ ಕ್ಯಾತನಾಯಕನಹಳ್ಲಿ ರಂಗಸ್ವಾಮಿ, ಉಪಾಧ್ಯಕ್ಷರಾಗಿ ಕಮಲಮ್ಮ ರಾಜ್ಕುಮಾರ್, ಸದಸ್ಯರಾಗಿ ಜಯಣ್ಣ, ದುರ್ಗರಾಜ್, ಶಿವಲಿಂಗಯ್ಯ, ಬಸವರಾಜು, ಕಮಲಮ್ಮ, ಲೀಲಾವತಿ, ಲಕ್ಷ್ಮಯ್ಯ, ರಂಗಸ್ವಾಮಿ, ಆನಂದ ಆಯ್ಕೆಯಾದರು.