ಕರೆಂಟ್ ಹೊಡೆದು ಅಂಗನವಾಡಿ ಅಡುಗೆ ಸಹಾಯಕಿ ಸಾವು
ಭಾರತೀನಗರ: ಅಂಗನವಾಡಿಯಲ್ಲಿ ಅಡುಗೆ ಸಹಾಯಕಿಯೊಬ್ಬಳು ಕೆಲಸ ನಿರ್ವಹಿಸುತ್ತಿದ್ದಾಗ ಕರೆಂಟ್ ಹೊಡೆದು ಸಾವನ್ನಪ್ಪಿರುವ ಘಟನೆ ಇಲ್ಲಿಗೆ ಸಮೀಪದ ದೇವೇಗೌಡನದೊಡ್ಡಿ ಗ್ರಾಮದಲ್ಲಿ ನಡೆದಿದೆ. ದೇವೇಗೌಡನದೊಡ್ಡಿ ಗ್ರಾಮದ ಬಸವೇಗೌಡರ ಪತ್ನಿ ಗೀತಾ (35) ಎಂಬ ಮಹಿಳೆಯೇ ಸಾವನ್ನಪ್ಪಿದ ದುರ್ದೈವಿ. ಇಂದು ಎಂದಿನಂತೆ ಕೆಲಸಕ್ಕೆ ಹಾಜರಾಗಿ ಎಲ್ಲಾ ಕೆಲಸವನ್ನು ಮುಗಿಸಿ ಮಧ್ಯಾಹ್ನ 3.30 ರ ಸಮಯದಲ್ಲಿ ತಕ್ಕಡಿ ಹಿಡಿಯಲು ಹೋದಾಗ ಈ ಘಟನೆ ಸಂಭವಿಸಿದೆ. ಅಂಗನವಾಡಿ ಕೊಠಡಿಯಲ್ಲಿ ನೀರನ್ನು ಸರಬರಾಜು ಮಾಡಿಕೊಳ್ಳಲು ಮೋಟಾರ್ ಅನ್ನು ಅಳವಡಿಸಲಾಗಿದ್ದು, ಮೋಟಾರ್ ತಗಲುವಂತೆ ಸರಳನ್ನು ಕಟ್ಟಿ ಅದಕ್ಕೆ ತಕ್ಕಡಿಯನ್ನು ಕಟ್ಟಲಾಗಿತ್ತು ಎನ್ನಲಾಗಿದೆ. ತಕ್ಕಡಿಯನ್ನು ಹಿಡಿದ ಕೂಡಲೇ ಕರೆಂಟ್ ಹೊಡೆದು ಕೆಳಕ್ಕೆ ಬಿದಿದ್ದಾರೆ. ತಕ್ಷಣ ಅವರನ್ನು ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆ ಕೊಡಿಸುವಷ್ಟರಲ್ಲಿ ಕೊನೆಯುಸಿರೆಳೆದಿದ್ದಾಳೆ. ಈ ಸಂಬಂಧ ಭಾರತೀನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ.
ಆಗ್ರಹ: ಅಂಗನವಾಡಿ ಸಹಾಯಕಿ ಗೀತಾ ಕೆಲಸ ನಿರ್ವಹಿಸುತ್ತಿದ್ದಾಗ ಆಕಸ್ಮಿಕವಾಗಿ ಕರೆಂಟ್ ಹೊಡೆದು ಸಾವನ್ನಪ್ಪಿರುವುದರಿಂದ ಸಂಬಂಧಿಸಿದ ಇಲಾಖೆ ಅವರ ಕುಟುಂಬಕ್ಕೆ ಪರಿಹಾರ ನೀಡಬೇಕೆಂದು ಮೆಣಸಗೆರೆ ರಾಜಣ್ಣ, ಸೊತ್ತೇಗೌಡ, ರಾಜೇಗೌಡ, ರಾಜಪ್ಪ, ಗಿರೀಶ್, ಗ್ರಾ.ಪಂ ಸದಸ್ಯ ಮಧು ಒತ್ತಾಯಿಸಿದ್ದಾರೆ.
ಸೌಹಾರ್ದ ಕ್ರಿಕೆಟ್ ಪಂದ್ಯಾವಳಿ
ಶ್ರೀರಂಗಪಟ್ಟಣ: ಪತ್ರಿಕಾ ದಿನಾಚರಣೆ ಅಂಗವಾಗಿ ಜು.13 ರಂದು ಪಟ್ಟಣದ ಶ್ರೀರಂಗನಾಥ ತಾಲೂಕು ಕ್ರೀಡಾಂಗಣದಲ್ಲಿ ಸೌಹಾರ್ದ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ. ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ, ತಾಲೂಕು ವಕೀಲರ ಸಂಘ, ತಾಲೂಕು ಶಿಕ್ಷಕರ ಸಂಘ, ಪಟ್ಟಣ ಪುರಸಭೆ ಅಧಿಕಾರಿಗಳು ಮತ್ತು ಪುರಸಭಾ ಸದಸ್ಯರುಗಳನ್ನೊಳಗೊಂಡ ತಂಡಗಳ ನಡುವೆ ಪಂದ್ಯಾವಳಿ ನಡೆಯಲಿದೆ. ಪಂದ್ಯಾವಳಿಗೆ ಶಾಸಕ ರಮೇಶ್ ಬಂಡಿಸಿದ್ದೇಗೌಡ ಚಾಲನೆ ನೀಡುವರು. ಎಂದು ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಜಿ.ಎನ್. ರವೀಶ್ ಗೌಡ ತಿಳಿಸಿದ್ದಾರೆ.