ಪ್ರಾಣಿಬಲಿ ಕಾರಣ ಕೇಳಿ ನೊಟೀಸ್ ಜಾರಿ
ಕುಣಿಗಲ್: ತಾಲೂಕಿನ ಪ್ರಸಿದ್ಧ ಶಕ್ತಿದೇವತೆ ದೇವಾಲಯ ಜಲಧಿಗೆರೆ ಅಮ್ಮನ ದೇವಾಲಯದಲ್ಲಿ ಪ್ರಾಣಿಬಲಿ ನಿಷೇಧಿಸಿದ್ದರೂ, ದೇವಾಲಯ ಆಡಳಿತ ಮಂಡಳಿ ಪ್ರಾಣಿಬಲಿ ನಿಯತ್ರಿಸುವಲ್ಲಿ ವಿಫಲರಾದ ಹಿನ್ನೆಲೆಯಲ್ಲಿ, ತಹಸೀಲ್ದಾರ್ ಆಡಳಿತ ಮಂಡಳಿಗೆ ಕಾರಣ ಕೇಳಿ ನೊಟೀಸ್ ಜಾರಿ ಮಾಡಿದ್ದಾರೆ.
ಎಡೆಯೂರು ಹೋಬಳಿಯ ಜಲಧಿಗೆರೆ ಅಮ್ಮನವರ ದೇವಾಲಯಕ್ಕೆ ರಾಜ್ಯದ ವಿವಿಧೆಡೆಯಿಂದ ಅಸಂಖ್ಯಾತ ಭಕ್ತರು ಭೇಟಿ ನೀಡಿ ಪೂಜೆ ಸಲ್ಲಿಸುತ್ತಾರೆ. ದೇವಾಲಯ ಆವರಣದಲ್ಲಿ ಪ್ರಾಣಿ ಬಲಿ ನಿಷೇಧಿಸಿ, ಮಾನ್ಯ ನ್ಯಾಯಾಲಯದ ಆದೇಶದ ಮೇರೆಗೆ ಈ ಹಿಂದೆಯೇ ಕ್ರಮ ಕೈಗೊಳ್ಳಲಾಗಿತ್ತು. ದೇವಾಲಯ ಆಡಳಿತ ಮಂಡಳಿಗೂ ಪ್ರಾಣಿಬಲಿ ನಿಷೇಧಿಸುವ ದಿಸೆಯಲ್ಲಿ ಕ್ರಮ ಕೈಗೊಳ್ಳುವಂತೆ ಕಟ್ಟುನಿಟ್ಟಿನ ಸೂಚನೆಯನ್ನು ತಾಲೂಕು ಆಡಳಿತ ನೀಡಿತ್ತು. ಆದರೆ ಇತ್ತೀಚೆಗೆ ಹಲವಾರು ಗ್ರಾಮಸ್ಥರು ದೇವಾಲಯ ಆವರಣದಲ್ಲಿ ಪ್ರಾಣಿ ಬಲಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ತಹಸೀಲ್ದಾರ್ರಿಗೆ ದೂರು ನೀಡಿದ ಮೇರೆಗೆ, ತಹಸೀಲ್ದಾರ್ ಶಂಭುಲಿಂಗಯ್ಯ ಇತ್ತೀಚೆಗೆ ದೇವಾಲಯಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ನಂತರ ಪ್ರಾಣಿಬಲಿ ನಡೆದಿರುವ ಹಿನ್ನೆಲೆಯಲ್ಲಿ ದೇವಾಲಯ ಆಡಳಿತ ಮಂಡಳಿಗೆ ಕಾರಣ ಕೇಳಿ ನೊಟೀಸ್ ಜಾರಿ ಮಾಡಿದ್ದಾರೆ.