ವಿವೇಕಾನಂದರ ವೈಚಾರಿಕತೆ ಸ್ಫೂರ್ತಿ: ಡಾ.ವೀರೇಶಾನಂದ ಸರಸ್ವತಿ ಸ್ವಾಮೀಜಿ
ತುಮಕೂರು: ಸ್ವಾಮಿ ವಿವೇಕಾನಂದರ ವೈಚಾರಿಕ ಚಿಂತನೆಗಳು ಮಹಾತ್ಮ ಗಾಂಧಿ, ರವೀಂದ್ರನಾಥ ಠಾಗೂರ್, ಜೆಮ್ಶೆಡ್ಜೀ ಟಾಟಾ ಮುಂತಾದವರಿಗೆ ಸ್ಫೂರ್ತಿದಾಯಕ ಪ್ರೇರಣೆ ನೀಡಿವೆ ಎಂದು ತುಮಕೂರಿನ ಶ್ರೀ ರಾಮಕೃಷ್ಣ- ವಿವೇಕಾನಂದ ಆಶ್ರಮದ ಅಧ್ಯಕ್ಷ ಡಾ. ವೀರೇಶಾನಂದ ಸರಸ್ವತಿ ಸ್ವಾಮೀಜಿ ಹೇಳಿದರು. ತುಮಕೂರಿನ ಜ್ಞಾನ ಬುತ್ತಿ ಸತ್ಸಂಗ ಕೇಂದ್ರದಲ್ಲಿ ಆಯೋಜಿಸಿದ್ದ ಸಾಪ್ತಾಹಿಕ ಉಪನ್ಯಾಸ ಕಾರ್ಯಕ್ರಮದಲ್ಲಿ ಸ್ವಾಮಿ ವಿವೇಕಾನಂದರ ವೈಚಾರಿಕತೆ ಎಂಬ ವಿಷಯದ ಬಗ್ಗೆ ಮಾತನಾಡಿ, ಸ್ವಾಮಿ ವಿವೇಕಾನಂದರು ಭಗವಂತನನ್ನು ಕೇಂದ್ರವಾಗಿಟ್ಟುಕೊಳ್ಳದೇ ಧರ್ಮವನ್ನು ಕೇಂದ್ರವಾಗಿಟ್ಟುಕೊಂಡು ಬೋಧಿಸಿದರು. ತ್ಯಾಗ ಮತ್ತು ಸೇವೆ ವಿವೇಕಾನಂದರ ಆದರ್ಶಗಳಾಗಿದ್ದವು. ದೀನರು ನಿಮ್ಮ ದೇವರಾಗಲಿ, ದರಿದ್ರರು ನಿಮ್ಮ ದೇವರಾಗಲಿ, ಆಶಕ್ತರು ನಿಮ್ಮ ದೇವರಾಗಲಿ ಇಂತಹ ಆದರ್ಶ ಪರಿಕಲ್ಪನೆಗಳನ್ನು ವಿವೇಕಾನಂದರು ಸಮಾಜಕ್ಕೆ ಕೊಟ್ಟರು ಎಂದರು. ಮನುಷ್ಯನ ಬಾಹ್ಯವನ್ನು ನೋಡಿ ಗೌರವಿಸುವುದಕ್ಕಿಂತ ಅವನ ಆಂತರ್ಯದ ದಿವ್ಯತೆಯನ್ನು ಗುರುತಿಸು ಪೂಜಿಸು ಎಂಬುದು ಅವರ ಸಂದೇಶವಾಗಿದೆ ಎಂದರು. ಶ್ರೀ ಭಗವತಿ ಭಗವಾನ್ ರೈಸ್ ಇಂಡಸ್ಟ್ರೀಸ್ ಉದ್ಯಮಿ ಹಾಗೂ ಆಧ್ಯಾತ್ಮಿಕ ಚಿಂತಕ ಆರ್.ಎಲ್. ರಮೇಶ್ ಬಾಬುರವರ ಸನಾತನ ಚಾರಿಟಬಲ್ ಫೌಂಡೇಷನ್ ಸಂಸ್ಥೆಯನ್ನು ನೋಟ್ ಪುಸ್ತಕಗಳ ಅನಾವರಣಗೊಳಿಸುವುದರ ಮೂಲಕ ವೀರೇಶಾನಂದ ಸರಸ್ವತಿ ಸ್ವಾಮೀಜಿಯವರು ಉದ್ಘಾಟಿಸಿದರು. ಉದ್ಯಮಿ ಆರ್.ಎಲ್. ರಮೇಶ್ ಬಾಬುರವರು ಉಪಸ್ಥಿತರಿದ್ದರು. ಈ ಸತ್ಸಂಗ ಕೇಂದ್ರದ ಪ್ರಧಾನ ಕಾರ್ಯದರ್ಶಿ ಮಿಮಿಕ್ರಿ ಈಶ್ವರಯ್ಯ ಪ್ರಾರ್ಥಿಸಿದರು. ಅಧ್ಯಕ್ಷ ಡಾ ಎಸ್.ಪಿ ಪದ್ಮಪ್ರಸಾದ್ ಸ್ವಾಗತಿಸಿದರು. ಮಿಮಿಕ್ರಿ ಈಶ್ವರಯ್ಯ ವಂದಿಸಿದರು. ಮಾಜಿ ಅಧ್ಯಕ್ಷ ಟಿ.ಮುರುಳಿ ಕೃಷ್ಣಪ್ಪ ನಿರೂಪಿಸಿದರು.