ಸಿರಿ ಉತ್ಪನ್ನ ಮಾರಾಟ ಮೇಳ
ಪಾಂಡವಪುರ: ಪಟ್ಟಣದ ಕನ್ನಿಕಾ ಪರಮೇಶ್ವರಿ ಕಲ್ಯಾಣ ಮಂದಿರದಲ್ಲಿ ಸಿರಿ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮೇಳ ನಡೆಯಿತು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಸಂಸ್ಥೆ ತಾಲೂಕು ಯೋಜನಾಧಿಕಾರಿ ಎನ್. ಮೇದಪ್ಪ ಮಾತನಾಡಿ, ತಾಲೂಕಿನಲ್ಲಿ ಕಳೆದ ಒಂದು ವರ್ಷದಿಂದ ಸಂಸ್ಥೆ ಜನರಿಗೆ ಉಪಯೋಗವಾಗುವಂತಹ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದು ತಿಳಿಸಿದರು.ಗ್ರಾಮೀಣ ಮಟ್ಟದಲ್ಲಿ ಗಾಂಧೀಜಿ ಕಂಡ ಕನಸು ಗ್ರಾಮ ಸ್ವರಾಜ್ಯ ಮಾದರಿಯಾಗಿಟ್ಟುಕೊಂಡು ಯೋಜನೆಯು ಗ್ರಾಮೀಣ ಸಂಪನ್ಮೂಲ ಕೇಂದ್ರಗಳಲ್ಲಿ ವಿವಿಧ ಉತ್ಪನ್ನಗಳ ತಯಾರಿಕೆಗೆ ಪ್ರೋತ್ಸಾಹ ನೀಡುತ್ತಿದೆ. ಮಹಿಳೆಯರಿಗೆ ತರಬೇತಿ ನೀಡಿ ಕಚ್ಚಾ ಸಾಮಗ್ರಿ ಒದಗಣೆ, ಗುಣಮಟ್ಟ ವಸ್ತುಗಳ ಉತ್ಪಾದನೆ, ಪ್ಯಾಕಿಂಗ್ ಮತ್ತು ಮಾರಾಟ ಮಾಡುವ ಸಲುವಾಗಿ ಸಂಸ್ಥೆ ಗ್ರಾಮೋದ್ಯೋಗ ಸಂಸ್ಥೆಯನ್ನು ಸ್ಥಾಪಿಸಿದೆ ಎಂದರು.ಸಂಸ್ಥೆ ಮುಖೇನ ಮಹಿಳೆಯರಿಗೆ ಉದ್ಯೋಗ ದೊರೆತಿದೆ. ಈ ವಸ್ತುಗಳನ್ನು ಸಿರಿ ಎಂಬ ಹೆಸರಿನಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದರು.