ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಕಸವಿಲೇವಾರಿ: ಯಥಾಸ್ಥಿತಿಗೆ ಸೂಚನೆ

Rashmi Kasaragodu
Updated On : 9 Jul 2014, 1:59 am

ತುಮಕೂರು: ನಗರದ ಕಸವಿಲೇವಾರಿಗೆ ಸಂಬಂಧಿಸಿ ರೈತರು ಮತ್ತು ನಗರಪಾಲಿಕೆ ನಡುವೆ ಉಂಟಾಗಿದ್ದ ವಿವಾದ ಬಗೆಹರಿಸುವ ನಿಟ್ಟಿನಲ್ಲಿ ಮಂಗಳವಾರ ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ. ಜಯಚಂದ್ರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಯಥಾಸ್ಥಿತಿ ಕಾಪಾಡಿಕೊಳ್ಳಲು ತೀರ್ಮಾನಿಸಲಾಯಿತು.
ಬೆಂಗಳೂರಿನ ವಿಧಾನಸೌಧದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿಯಲ್ಲಿ ನಡೆದ ಪೌರಾಡಳಿತ ಸಚಿವರು, ಜನಪ್ರತಿನಿಧಿಗಳು, ರೈತರು ಮತ್ತು ಅಧಿಕಾರಿಗಳ ಸಭೆಯಲ್ಲಿ ಈ ತೀರ್ಮಾನಕ್ಕೆ ಬರಲಾಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಅಧಿಕಾರಿಗಳು ಮತ್ತು ಜಿಲ್ಲೆಯ ಶಾಸಕರನ್ನೊಳಗೊಂಡ ಸಭೆಯನ್ನು ಮಂಗಳವಾರ ನಡೆಸುವಂತೆ ಸೂಚಿಸಿದ ಹಿನ್ನೆಲೆಯಲ್ಲಿ ಈ ಸಭೆ ನಡೆಯಿತು.
ಮಂಗಳವಾರ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ. ಜಯಚಂದ್ರ, ಪೌರಾಡಳಿತ ಸಚಿವ ವಿನಯಕುಮಾರ್ ಸೊರಕೆ ಅವರು, ಕಾನೂನು ಸಚಿವರ ಕಚೇರಿಯಲ್ಲಿ ರೈತರು, ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ತ್ರಿಪಕ್ಷೀಯ ಮಾತುಕತೆಯಲ್ಲಿ ಈ ನಿರ್ಧಾರಕ್ಕೆ ಬರಲಾಯಿತು. ಸಭೆಯಲ್ಲಿ ರೈತರು ತಮ್ಮ ವಾದ ಮುಂದಿಟ್ಟು ಸರ್ಕಾರ ಯಾವುದೇ ಕಾರಣಕ್ಕೂ ಕಸವನ್ನು ಅಜ್ಜಗೊಂಡನಹಳ್ಳಿಯಲ್ಲಿ ಹಾಕಲು ಬಿಡುವುದಿಲ್ಲ. ಒಂದು ವೇಳ ಹಾಕುವುದಿದ್ದರೆ ನಮ್ಮ ಜೀವ ಭೂಮಿಗೆ ಹೋದ ನಂತರ ಎಂದು ತಮ್ಮ ಹಿಂದಿನ ನಿರ್ಧಾರಕ್ಕೆ ಅಂಟಿಕೊಂಡರು.
ಶಾಸಕರಾದ ಸುಧಾಕರ್ ಲಾಲ್ ಮತ್ತು ಬಿ. ಸುರೇಶ್ಗೌಡ ಅವರು ರೈತರ ಪರ ನಿಂತಿದ್ದು, ನಗರದ ಕಸವನ್ನು ಗ್ರಾಮಾಂತರ ಕ್ಷೇತ್ರದ ಜಾಗಕ್ಕೆ ಹಾಕಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದರು. ಈ ವೇಳೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗಾದರೆ ಕಸ ಎಲ್ಲಿ ಹಾಕುವುದು ಎಂಬ ಪ್ರಶ್ನೆಗೆ ಎಲ್ಲಿಯಾದರೂ ಹಾಕಿಕೊಳ್ಳಿ ನಮಗೂ ಅದಕ್ಕೂ ಸಂಬಂಧವಿಲ್ಲ. ಅದು ಜಿಲ್ಲಾಡಳಿತಕ್ಕೆ, ಸರಕಾರಕ್ಕೆ ಬಿಟ್ಟ ವಿಚಾರ ಎಂದು ಸುರೇಶ್ಗೌಡ ತಿಳಿಸಿದರು.
ತುಮಕೂರು ಶಾಸಕ ಡಾ. ರಫಿಕ್ ಅಹಮದ್ ಮಾತನಾಡಿ, ತುಮಕೂರು ನಗರದಲ್ಲಿ ಕಸದ ಸಮಸ್ಯೆ ತುಂಬಾ ಹೆಚ್ಚಾಗಿದ್ದು, ಕಸದ ಸಮಸ್ಯೆ ಬಗೆಹರಿಸುವುದು ಒಂದು ಸವಾಲಿನ ಪ್ರಶ್ನೆಗೆಯಾಗಿದೆ. ರೈತರು ಒಂದು ವರ್ಷ ಕಾಲ ಸಮಯ ನೀಡಿದರೆ ಅತ್ಯಂತ ವೈಜ್ಞಾನಿಕವಾಗಿ ಕಸವಿಲೇವಾರಿ ಮಾಡಿ ತೋರಿಸುತ್ತೇವೆ. ಆಗಲೂ ನಿಮಗೆ ಒಪ್ಪಿಗೆಯಾಗದಿದ್ದರೆ ಬೇರೆ ಕಡೆಗೆ ಸ್ಥಳಾಂತರಿಸುತ್ತೇವೆ ಎಂದು ಭರವಸೆ ನೀಡಿದರೂ ರೈತರು ಒಪ್ಪದ ತಮ್ಮ ಹಳೆಯ ನಿರ್ಧಾರಕ್ಕೆ ಬದ್ದರಾದರು.
ತ್ರಿಪಕ್ಷಿಯ ಸಭೆಯಲ್ಲಿ ಒಮ್ಮತಕ್ಕೆ ಬರಲು ಸಾಧ್ಯವಾಗದ ಹಿನ್ನೆಲೆಯಲ್ಲಿ ರೈತರು ಮತ್ತು ನಗರಪಾಲಿಕೆ ಸದಸ್ಯರನ್ನು ಹೊರಗಿಟ್ಟು ಶಾಸಕರು, ಅಧಿಕಾರಿಗಳು ಮತ್ತು ಸಚಿವರು ಮಂತ್ರಿಗಳ ಅಂಟಿ ಚೇಂಬರ್ನಲ್ಲಿ ಕೆಲ ಕಾಲ ಮಾತುಕತೆ ನಡೆಸಿದ್ದು, ಅಂತಿಮವಾಗಿ ವಿಧಾನಸಭಾ ಅಧಿವೇಶನ ಮುಗಿಯುವವರೆಗೂ ಯಥಾಸ್ಥಿತಿ ಕಾಪಾಡಿಕೊಂಡು ಬರಲು ತೀರ್ಮಾನಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ತಿಳಿಸಿದರು.
ಸಭೆಯಲ್ಲಿ ಶಾಸಕರಾದ ಡಾ. ರಫೀಕ್ ಅಹಮದ್,  ಸುಧಾಕರಲಾಲ್, ಬಿ. ಸುರೇಶ್ಗೌಡ ,ಕೆ.ಎನ್. ರಾಜಣ್ಣ, ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್, ಜಿಲ್ಲಾಡಳಿತದ ಪರ ಜಿಲ್ಲಾಧಿಕಾರಿ ಕೆ.ಎಸ್. ಸತ್ಯಮೂರ್ತಿ, ನಗರಪಾಲಿಕೆ ಪರವಾಗಿ ಮೇಯರ್ ಗೀತಾ ರುದ್ರೇಶ್ ಸೇರಿದಂತೆ 15 ಜನ ಸದಸ್ಯರು, ಆಯುಕ್ತ ಆಶಾದ್ ಆರ್. ಷರೀಪ್, ರೈತರ ಪರವಾಗಿ ಮಲ್ಲಿಕಾರ್ಜುನ ಮೇಳೆಹಳ್ಳಿ, ಕೋರ ಗ್ರಾಪಂ ಅಧ್ಯಕ್ಷೆ ಕಲ್ಪನ, ಸದಸ್ಯರಾದ ಸೌಭಾಗ್ಯ, ಡಮರುಗ ಉಮೇಶ್, ಶಾಂತಕುಮಾರ್ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement