ವಿದ್ಯಾರ್ಥಿ ಹಂತದಿಂದಲೇ ಕಾನೂನಿನ ಅರಿವು ಅಗತ್ಯ: ನ್ಯಾ.ಎನ್. ವೀಣಾ
ಹುಳಿಯಾರು: ಕಾನೂನಿನ ಅರಿವಿಲ್ಲದೆ ತಪ್ಪೆಸಗಿದರೂ ಅಪರಾಧವಾಗಿದ್ದು, ವಿದ್ಯಾರ್ಥಿ ಹಂತದಿಂದಲೇ ಕಾನೂನು ಪಾಲನೆ ಬಗ್ಗೆ ಮಾಹಿತಿಯನ್ನು ಮಕ್ಕಳಿಗೆ ತಿಳಿಸುವುದರಿಂದ ಅವರು ಮುಂದಿನ ದಿನಗಳಲ್ಲಿ ಕಾನೂನಿನ ಉಲ್ಲಂಘನೆ ಮಾಡುವುದನ್ನು ತಪ್ಪಿಸಬಹುದಾಗಿದೆ ಎಂದು ಸಿವಿಲ್ನ್ಯಾಯಾಧೀಶೆ ಎನ್. ವೀಣಾ ತಿಳಿಸಿದರು.
ಹುಳಿಯಾರಿನ ವಿದ್ಯಾವಾರಿಥಿ ಇಂಟರ್ ನ್ಯಾಷನಲ್ ಸ್ಕೂಲ್ನಲ್ಲಿ ಚಿಕ್ಕನಾಯಕನಹಳ್ಳಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ತಾಪಂ, ಪೊಲೀಸ್ ಇಲಾಖೆ, ಕಂದಾಯ ಇಲಾಖೆ ಸಹಯೋಗದಲ್ಲಿ ಕಾನೂನು ಸಾಕ್ಷರಥ ಸಂಚಾರದ ಕಾನೂನು ಅರಿವು-ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ತಪ್ಪು ಮಾಡಿದವರಿಗೆ ಕಾನೂನಿನ ಚೌಕಟ್ಟಿನಲ್ಲಿ ತಕ್ಕಶಿಕ್ಷೆ ವಿಧಿಸಲಾಗುತ್ತದೆ. ದೇಶದ ಮುಂದಿನ ಪ್ರಜೆಗಳಾದ ಮಕ್ಕಳಿಗೆ ಕಾನೂನು ಪಾಲನೆ ಬಗ್ಗೆ ಶಿಕ್ಷಕರು ತಿಳಿಸುವ ಮುಖಾಂತರ ಅವರನ್ನು ಉತ್ತಮ ವ್ಯಕ್ತಿಗಳನ್ನಾಗಿಸ ಬೇಕೆಂದರು. ಅಪರ ಸಿವಿಲ್ನ್ಯಾಯಾಧೀಶ ಸೋಮನಾಥ್ ಮಾತನಾಡಿ, ಮಕ್ಕಳ ಮೇಲಾಗುತ್ತಿರುವ ದೌರ್ಜನ್ಯ, ಬಾಲಕಾರ್ಮಿಕ ಪದ್ಧತಿ ಸೇರಿದಂತೆ ಅನೇಕ ಕಾರ್ಯಗಳಲ್ಲಿ ಮಕ್ಕಳನ್ನು ತೊಡಗಿಸಿಕೊಳ್ಳುವುದು ಕಾನೂನುರಿತ್ಯಾ ಅಪರಾಧವಾಗಿದ್ದು ಮಕ್ಕಳ ಹಕ್ಕುಗಳ ರಕ್ಷಣೆ ಕಾಯ್ದೆಯಡಿ ಅಂತಹವರಿಗೆ ಶಿಕ್ಷೆವಿಧಿಸಬಹುದಾಗಿದೆ ಎಂದರು.
ಹಿರಿಯ ವಕೀಲ ಎಸ್.ಎಚ್. ಚಂದ್ರಶೇಖರಯ್ಯ ಬಾಲ್ಯ ವಿವಾಹ ನಿಷೇಧ ಕಾಯ್ದೆ ಕುರಿತು, ವಕೀಲ ಸಿ. ರಾಜಶೇಖರ್ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಕುರಿತು ಉಪನ್ಯಾಸ ನೀಡಿದರು. ವಿದ್ಯಾವಾರಿಥಿ ಶಾಲೆಯ ಕಾರ್ಯದರ್ಶಿ ಕವಿತಾ ಕಿರಣ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಎಪಿಪಿ ರವಿಚಂದ್ರ, ತಾಲೂಕು ವಕೀಲರ ಸಂಘದ ಅಧ್ಯಕ್ಷ ಸಿ.ಎನ್. ಕೃಷ್ಣಮೂರ್ತಿ, ಕಾರ್ಯದರ್ಶಿ ಎಚ್.ಟಿ. ಹನುಮಂತಯ್ಯ, ಕೆ.ಸಿ. ವಿಶ್ವನಾಥ್, ಪಿಎಸ್ಐ ವೈ. ಘೋರ್ಪಡೆ ಇದ್ದರು.