ಅಡಕೆ ದರ ಏರಿಕೆ: ಹೆಚ್ಚಿನ ಮೊತ್ತ ಕೊಡಿಸಲು ಆಗ್ರಹ
ತುರುವೇಕೆರೆ: ಅಡಿಕೆ ಬೆಳೆಗಾರರು ಈ ಹಿಂದೆ ಚೇಣಿದಾರರಿಗೆ ಕ್ವಿಂಟಲ್ಗೆ 12ರಿಂದ 18 ಸಾವಿರದಂತೆ ತಮ್ಮ ಅಡಕೆ ಮಾರಿದ್ದಾರೆ. ಈಗ ಅಡಕೆ ಬೆಲೆ ಒಂದು ಲಕ್ಷದವರೆಗೂ ಮುಟ್ಟಿದೆ. ಹಾಗಾಗಿ, ಬೆಳೆಗಾರರಿಗೆ ಹೆಚ್ಚಿನ ಮೊತ್ತವನ್ನು ಚೇಣಿದಾರರಿಂದ ಕೊಡಿಸಬೇಕು ಎಂದು ಅಡಿಕೆ ಬೆಳೆಗಾರರು ಜಿಪಂ ಸದಸ್ಯ ಶ್ರೀನಿವಾಸ್ ಅವರನ್ನು ಒತ್ತಾಯಿಸಿದ್ದಾರೆ. ಅಡಿಕೆ ಬೆಳೆಗಾರರು ಕಳೆದ ಹತ್ತಾರು ವರ್ಷಗಳಿಂದಲೂ ತಮಗೆ ವಿಶ್ವಾಸವಿರುವ ಚೇಣಿದಾರರಲ್ಲಿ ಅಡಿಕೆಯನ್ನು ವಾರ್ಷಿಕ ಗುತ್ತಿಗೆ ಅನುಸಾರ ನೀಡುತ್ತಾ ಬಂದಿದ್ದಾರೆ. ಚೇಣಿದಾರರಿಗೆ ತಮ್ಮ ಫಸಲಿನಲ್ಲಿ ನಷ್ಟ ಉಂಟಾದ ಸಂದರ್ಭದಲ್ಲಿ ರೈತರು ಅವರಿಂದ ಕಡಿಮೆ ಹಣವನ್ನು ಪಡೆದಿರುವ ಉದಾಹರಣೆಗಳೂ ಸಹ ಇವೆ. ಚೇಣಿದಾರರು ಒಟ್ಟಿಗೆ ಗುತ್ತಿಗೆ ಹಣವನ್ನು ನೀಡದೇ ಕಂತು ಕಂತಾಗಿ ಹಣ ನೀಡುವುದು ವಾಡಿಕೆ. ಇಂತಹ ಸಂದರ್ಭದಲ್ಲಿ ಈಗ ಮಳೆ ಇಲ್ಲ. ಹಗಲಿರುಳೆನ್ನದೇ ರೈತರು ಚೇಣಿದಾರರ ಪರವಾಗಿ ದುಡಿದಿರುತ್ತಾರೆ. ಈಗ ರೈತರ ಬದುಕು ಮೂರಾಬಟ್ಟೆಯಾಗಿದೆ. ಆದ್ದರಿಂದ ಅಡಿಕೆ ಚೇಣಿದಾರರು ರೈತರಿಗೆ ಹೆಚ್ಚಿಗೆ ಹಣ ನೀಡಬೇಕು ಎಂದು ಜಿ.ಪಂ.ಸದಸ್ಯ ಶ್ರೀನಿವಾಸ್ ಅವರ ಬಳಿ ತಮ್ಮ ಅಳಲು ವ್ಯಕ್ತಪಡಿಸಿದರು. ಶ್ರೀನಿವಾಸ್ ಮಾತನಾಡಿ, ಚೇಣಿದಾರರು ರೈತರಿಗೆ ಹೆಚ್ಚುವರಿ ಹಣ ನೀಡುವುದು ಧರ್ಮ. ಮುಂದಿನ ದಿನಗಳಲ್ಲಿ ತಮ್ಮ ವ್ಯಾಪ್ತಿಯ ಎಲ್ಲಾ ಅಡಿಕೆ ಬೆಳೆಗಾರರು ಹಾಗೂ ಚೇಣಿದಾರರನ್ನು ಒಂದೆಡೆ ಕಲೆ ಹಾಕಿ ಈರ್ವರಿಗೂ ಅನ್ಯಾಯವಾಗದ ರೀತಿ ಮಾತುಕತೆ ನಡೆಸುವುದಾಗಿ ಅವರು ತಿಳಿಸಿದರು. ರೈತ ಮುಖಂಡರಾದ ನಾರಾಯಣಪ್ಪ, ಗಂಗಶೆಟ್ಟರು, ಮರಿತಮ್ಮಯ್ಯ, ತಮ್ಮಯ್ಯಣ್ಣ, ರುದ್ರಪ್ಪ, ರಾಜಣ್ಣ, ಚಂದ್ರಪ್ಪ, ಶೇಖರಯ್ಯ, ಹಾಲಪ್ಪ, ಪಾಂಡುರಂಗಯ್ಯ, ಗೋವಿಂದರಾಜು, ಮಂಜಣ್ಣ ಮೊದಲಾದವರಿದ್ದರು.