ತುಮಕೂರು: ಬೆಂಗಳೂರು ಗ್ರಾಮಾಂತರ ಪ್ರದೇಶದಲ್ಲಿರುವ ನೆಲಮಂಗಲ ತಾಲೂಕು ಅರಿಶಿನಕುಂಟೆಯ ರುಡ್ಸೆಟ್ ಸಂಸ್ಥೆಯು ನಿರುದ್ಯೋಗಿಗಳಿಗೆ ಉಚಿತ ಕಂಪ್ಯೂಟರ್ ತರಬೇತಿ ಆಯೋಜಿಸಿದೆ. ತರಬೇತಿ ಅವಧಿಯು 45 ದಿನಗಳಾಗಿದೆ. ವಸತಿಯುತ ತರಬೇತಿ ನೀಡಲಾಗುವುದು. ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ರಾಮನಗರ ಮತ್ತು ತುಮಕೂರು ಜಿಲ್ಲೆ ವ್ಯಾಪ್ತಿಯಲ್ಲಿರುವ 18 ರಿಂದ 45 ವರ್ಷದೊಳಗಿನಳಗಿನವರು ಅರ್ಜಿ ಸಲ್ಲಿಸಬಹುದಾಗಿದೆ. ಕನ್ನಡ ಓದಲು ಮತ್ತು ಬರೆಯಲು ಬಲ್ಲ ಆಸಕ್ತ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಜು.18ರಂದು ಬೆಳಗ್ಗೆ 11 ಗಂಟೆಗೆ ನೇರವಾಗಿ ರುಡ್ಸೆಟ್ ಕಚೇರಿಗೆ ಹಾಜರಾಗಬಹುದು. ಹೆಚ್ಚಿನ ಮಾಹಿತಿಗೆ ದೂ.080-27728166, ಮೊ.9741129429, 9481778047 ಸಂಪರ್ಕಿಸುವಂತೆ ಸಂಸ್ಥೆಯ ನಿರ್ದೇಶಕ ಜಿ.ವಿ. ಶಿವಣ್ಣ ತಿಳಿಸಿದ್ದಾರೆ.
ಹರಿದಾಸ ಕೀರ್ತನಾ ಶಿಬಿರ
ತುಮಕೂರು: ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯು ರಾಜ್ಯದ ಸರ್ಕಾರಿ ಹಾಗೂ ಅನುದಾನಿತ ಪ್ರೌಢಶಾಲೆಗಳ ಕನ್ನಡ ಶಿಕ್ಷಕ, ಶಿಕ್ಷಕಿಯರಿಗಾಗಿ ಆ.4 ಮತ್ತು 5ರಂದು ಗಮಕ ವಾಚನ ಹಾಗೂ ಹರಿದಾಸ ಕೀರ್ತನಾ ಶಿಬಿರವನ್ನು ಹಮ್ಮಿಕೊಂಡಿದೆ. ಶಿಬಿರ ಉಚಿತವಾಗಿದ್ದು, ಹರಿಹರದ ರಾಘವೇಂದ್ರ ಸ್ವಾಮಿ ವೃಂದಾವನ ಟ್ರಸ್ಟ್ನ ಸಹಯೋಗದಲ್ಲಿ ಆಯೋಜಿಸಲಾಗಿದೆ. ಪ್ರಾಥಮಿಕ ಸಂಗೀತ ಜ್ಞಾನವುಳ್ಳವರು ಶಿಬಿರದಲ್ಲಿ ಭಾಗವಹಿಸಬಹುದಾಗಿದೆ. ಆಯ್ಕೆಯಾದವರಿಗೆ ಓಓಡಿ ಸೌಲಭ್ಯ ನೀಡಲಾಗುವುದು. ಶಿಬಿರದಲ್ಲಿ ಪಾಲ್ಗೊಳ್ಳ ಬಯಸುವವರು ತಮ್ಮ ಸ್ವವಿವರ (ಹೆಸರು, ಶಾಲಾ ವಿಳಾಸ, ದೂರವಾಣಿ, ಮೊಬೈಲ್ ನಂ.)ವನ್ನು ಜು.21ರೊಳಗಾಗಿ ರಿಜಿಸ್ಟ್ರಾರ್, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ, ಕನ್ನಡ ಭವನ, 2ನೇ ಮಹಡಿ, ಜೆ.ಸಿ.ರಸ್ತೆ, ಬೆಂಗಳೂರು-2 ಇವರಿಗೆ ಸಲ್ಲಿಸಬೇಕೆಂದು ಅಕಾಡೆಮಿ ರಿಜಿಸ್ಟ್ರಾರ್, ಟಿ.ಜಿ. ನರಸಿಂಹಮೂರ್ತಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ದೂ.080-22215072 ಸಂಪರ್ಕಿಸಿ.
ಹಾಸ್ಟೆಲ್ಗೆ ಅರ್ಜಿ ಆಹ್ವಾನ
ತುಮಕೂರು: ಗುಬ್ಬಿ ನಗರದಲ್ಲಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯಗಳ ಪ್ರವೇಶಕ್ಕೆ ಅರ್ಜಿ ಕರೆಯಲಾಗಿದೆ. ಹಿಂದುಳಿದ ವರ್ಗ 1, 2, 2ಬಿ, 3ಎ, 3ಬಿ, ಪ.ಜಾ,ಪ.ವರ್ಗಗಳಿಗೆ ಸೇರಿದ ಎಸ್ಎಸ್ಎಲ್ಸಿ ನಂತರದ ಯಾವುದೇ ಕೋರ್ಸ್ಗಳಲ್ಲಿ ವ್ಯಾಸಂಗ ಮಾಡುತ್ತಿರುವವರು ಅರ್ಜಿ ಸಲ್ಲಿಸಬಹುದಾಗಿದೆ. ವಾರ್ಷಿಕ ಆದಾಯವು ಪಜಾ, ಪವರ್ಗಗಳಿಗೆ 2 ಲಕ್ಷ, ಪ್ರ.ವರ್ಗ-1ಕ್ಕೆ ಸೇರಿದವರಿಗೆ 2.5 ಲಕ್ಷ ಹಾಗೂ ಇತರೆ ವರ್ಗದವರಿಗೆ 1 ಲಕ್ಷಕ್ಕಿಂತ ಕಡಿಮೆಯಿರಬೇಕು. ವಿದ್ಯಾರ್ಥಿ ವಾಸಸ್ಥಳಕ್ಕೂ ವಿದ್ಯಾಭ್ಯಾಸ ಮಾಡುವ ಶೈಕ್ಷಣಿಕ ಸಂಸ್ಥೆಗೂ 5 ಕಿಮೀ ಅಂತರವಿರಬೇಕು. ಆಸಕ್ತರು ಭರ್ತಿ ಮಾಡಿದ ತಮ್ಮ ಅರ್ಜಿಗಳನ್ನು ಜು.19ರೊಳಗಾಗಿ ಆಯಾ ವಿದ್ಯಾರ್ಥಿ ನಿಲಯಗಳಿಗೆ ಸಲ್ಲಿಸಬೇಕು. ಅರ್ಜಿಯೊಂದಿಗೆ ಇತ್ತೀಚಿನ 4 ಭಾವಚಿತ್ರ (ಪಾಸ್ಪೋರ್ಟ್ ಅಳತೆ) ಹಿಂದಿನ ತರಗತಿಯಲ್ಲಿ ತೇರ್ಗಡೆಯಾದ ಅಂಕಪಟ್ಟಿ, ಪ್ರಾಂಶುಪಾಲರಿಂದ ಪಡೆದ ದೃಢೀಕೃತ ಹಾಜರಾತಿ ಪ್ರಮಾಣಪತ್ರ, ಜಾತಿ ಮತ್ತು ಆದಾಯ ಪ್ರಮಾಣಪತ್ರ, ಆಧಾರ್ ಕಾರ್ಡ್, ವಾಸಸ್ಥಳಕ್ಕೂ, ಶೈಕ್ಷಣಿಕ ಸಂಸ್ಥೆಗೂ ಇರುವ ಅಂತರದ ಬಗ್ಗೆ ಗ್ರಾಪಂ ಕಾರ್ಯದರ್ಶಿಯಿಂದ ಪಡೆದ ಪ್ರಮಾಣ ಪತ್ರವನ್ನು ಲಗತ್ತಿಸಬೇಕು. ಹೆಚ್ಚಿನ ಮಾಹಿತಿಗಾಗಿ ತಾಲೂಕು ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿಗಳು, ಗುಬ್ಬಿ ಇವರನ್ನು ಸಂಪರ್ಕಿಸಿ.
ಪ್ರೋತ್ಸಾಹ ಧನ: ಅರ್ಜಿ ಕರೆ
ತುಮಕೂರು: ಜಿಲ್ಲಾ ಹಿಂದುಳಿದ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು ಮತೀಯ ಅಲ್ಪಸಂಖ್ಯಾತ ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸವನ್ನು ಮುಂದುವರೆಸಲು ಉತ್ತೇಜನ ನೀಡುವ ಸಲುವಾಗಿ ಪ್ರೋತ್ಸಾಹಧನ ನೀಡಲು ಅರ್ಹರಿಂದ ಅರ್ಜಿ ಆಹ್ವಾನಿಸಿದೆ. ಜಿಲ್ಲೆಯ ಮತೀಯ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಮುಸ್ಲಿಂ, ಜೈನ್, ಕ್ರಿಶ್ಚಿಯನ್, ಸಿಖ್, ಪಾರ್ಸಿ, ಆಂಗ್ಲೋ ಇಂಡಿಯನ್ ಮತ್ತು ಬೌದ್ಧ ಮತೀಯರು ಅರ್ಜಿ ಸಲ್ಲಿಸಬಹುದಾಗಿದೆ. ವೃತ್ತಿಪರ ಕೋರ್ಸ್ ಹೊರತುಪಡಿಸಿ ಎಸ್ಎಸ್ಎಲ್ಸಿ, ಪಿಯುಸಿ, ಬಿಎ, ಬಿಎಸ್ಸಿ, ಬಿಕಾಂ, ಬಿಬಿಎಂ, ಬಿಬಿಎ, ಸ್ನಾತಕೋತ್ತರ ಕೋರ್ಸ್ಗಳಲ್ಲಿ ವ್ಯಾಸಂಗ ಮಾಡುತ್ತಿರುವವರು ಅರ್ಹರಾಗಿದ್ದಾರೆ. ಕುಟುಂಬದ ಆದಾಯ ಮಿತಿ ವಾರ್ಷಿಕ 2 ಲಕ್ಷ ಒಳಗಿರಬೇಕು. ವಿದ್ಯಾರ್ಥಿಗಳು ರಾಷ್ಟ್ರೀಕೃತ ಬ್ಯಾಂಕ್ನಲ್ಲಿ ಖಾತೆ, ಆಧಾರ ಸಂಖ್ಯೆ ಹೊಂದಿರಬೇಕು. ಅರ್ಹ ವಿದ್ಯಾರ್ಥಿಗಳು ಭರ್ತಿ ಮಾಡಿದ ತಮ್ಮ ಅರ್ಜಿಗಳನ್ನು ಸೆ.15ರೊಳಗಾಗಿ ಸಂಬಂಧಿಸಿದ ಕಾಲೇಜಿನ ಪ್ರಾಂಶುಪಾಲರಿಗೆ ಸಲ್ಲಿಸಬೇಕು. ವಿದ್ಯಾರ್ಥಿಗಳಿಂದ ಸ್ವೀಕರಿಸಿದ ಅರ್ಜಿಗಳನ್ನು ಪ್ರಾಂಶುಪಾಲರು ಸೆ.30ರೊಳಗಾಗಿ ಜಿಲ್ಲಾ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ತುಮಕೂರು ಇವರಿಗೆ ಸಲ್ಲಿಸಬೇಕು.