ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ರೈಲು ಯೋಜನೆಗೆ ಸಿಎಂ ಅಡ್ಡಗಾಲು

Vishwanath S
Updated On : 17 Jul 2014, 1:10 am

ತುಮಕೂರು: ತುಮಕೂರು ಚಿತ್ರದುರ್ಗ, ದಾವಣಗೆರೆ ನೇರ ರೈಲು ಮಾರ್ಗ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಡ್ಡಗಾಲು ಹಾಕುತ್ತಿದ್ದಾರೆ ಎಂದು ರೈಲ್ವೆ ಅಭಿವೃದ್ಧಿ ಕ್ರಿಯಾ ಸಮಿತಿ ಆರೋಪಿಸಿದೆ.
ಈ ಸಂಬಂಧ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿ ಅಧ್ಯಕ್ಷ ಆರ್.ವಿ. ಪುಟ್ಟಕಾಮಣ್ಣ, ಕರ್ನಾಟಕದ ರೈಲ್ವೆ ಯೋಜನೆಗಳಿಗೆ ಉಚಿತ ಭೂಮಿ ಮತ್ತು ಹಣ ಕೊಡಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿಗಳು ಹೇಳುವ ಮೂಲಕ ಈ ಹಿಂದೆ ಮಾಡಿಕೊಂಡಿದ್ದ ಒಪ್ಪಂದವನ್ನು ಮುರಿಯುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ನಂಜುಂಡಪ್ಪ ಅವರ ವರದಿ ಪ್ರಕಾರ ತುಮಕೂರು, ಚಿತ್ರದುರ್ಗ, ದಾವಣಗೆರೆ ಹಿಂದುಳಿದ ಜಿಲ್ಲೆಯಾಗಿದೆ. ಈಗ ಈ ನೇರ ರೈಲು ಮಾರ್ಗದ ಯೋಜನೆಗೆ ಮುಖ್ಯಮಂತ್ರಿಗಳು ಅಡ್ಡಗಾಲು ಹಾಕಲು ಹೊರಟಿರುವುದು ಈ ಪ್ರದೇಶದ ಜನರ ಆಸೆಗೆ ತಣ್ಣೀರೆರಚಿದಂತಾಗಿದೆ. ಈ ಯೋಜನೆಯು ಮೂರು ಜಿಲ್ಲೆಗಳ ಜನರ ಬಹು ದಿನಗಳ ಬೇಡಿಕೆಯಾಗಿದೆ. ಸಾರ್ವಜನಿಕರು, ರೈಲ್ವೆ ಹೋರಾಟ ಕ್ರಿಯಾ ಸಮಿತಿಗಳ ಪರಿಶ್ರಮದಿಂದ ಹೋರಾಟದ ಮೂಲಕ ಈ ಯೋಜನೆ ಪಡೆದುಕೊಂಡಿದ್ದೆವು. ಆದರೆ ರಾಜ್ಯ ಸರ್ಕಾರದ ಧೋರಣೆಯಿಂದ ಈ ಯೋಜನೆಗೆ ಹಿನ್ನೆಡೆಯಾಗುತ್ತಿದೆ ಎಂದರು. ಈ ಯೋಜನೆಗೆ ಹೆಚ್ಚಿನ ಮಹತ್ವವಿದೆ. ಇದು ರಾಜ್ಯದ ಹೃದಯಭಾಗದಲ್ಲಿ ಹಾದುಹೋಗಿರುವುದರಿಂದ ಉತ್ತರ ಕರ್ನಾಟಕದ ಜನರಿಗೆ ಮಹತ್ವದ ಕೊಂಡಿಯಾಗಿದೆ ಎಂದಿದ್ದಾರೆ.
ಅಲ್ಲದೇ ರಾಷ್ಟ್ರೀಯ ಉತ್ಪಾದನಾ ಘಟಕ ನಿಯಮ 2011 ರಡಿಯಲ್ಲಿ ಕೇಂದ್ರ ಸರ್ಕಾರ ಹಲವಾರು ಕೈಗಾರಿಕೆ ಹೂಡಿಕೆ ವಲಯಗಳನ್ನು ಸ್ಥಾಪಿಸಲು ಅನುಮೋದನೆ ಸಿಕ್ಕಿದೆ. ಈ ನೇರ ರೈಲು ಮಾರ್ಗದ ಅನುಷ್ಠಾನದಿಂದ ಮಧ್ಯಮ ಕರ್ನಾಟಕದ ಬಹುತೇಕ ಜಿಲ್ಲೆಗಳು ರಾಜಧಾನಿಗೆ ನೇರ ಸಂಪರ್ಕ ಪಡೆಯುತ್ತದೆ ಎಂದಿದ್ದಾರೆ. ಈ ಮಾರ್ಗದ ನಿರ್ಮಾಣದಿಂದ 70 ಕಿ.ಮೀ. ದೂರ ಕಡಿಮೆಯಾಗುತ್ತದೆ. ಕಾಲ, ಹಣ, ಶ್ರಮ, ಇಂಧನದ ವೆಚ್ಚ ಕೂಡ ಉಳಿತಾಯವಾಗುತ್ತದೆ. ಈ ಮಾರ್ಗ ಚನ್ನೈ, ಬೆಂಗಳೂರು, ಚಿತ್ರದುರ್ಗ ಕೈಗಾರಿಕಾ ಕಾರಿಡಾರ್‌ಗೆ ಪೂರಕವಾಗುವ ಯೋಜನೆಯಾಗಿದೆ. ಆದ್ದರಿಂದ ಸರ್ಕಾರ ಈ ಕೂಡಲೇ ತನ್ನ ನಿರ್ಧಾರ ಮರುಪರಿಶೀಲಿಸಿ ನೂತನ ನೇರ ರೈಲು ಮಾರ್ಗ ನಿರ್ಮಾಣಕ್ಕೆ ಭೂಸ್ವಾಧೀನ ಪ್ರಕ್ರಿಯೆ ಮಾಡಿಕೊಟ್ಟು ಭೂಮಿಯನ್ನು ರೈಲ್ವೆ ಇಲಾಖೆಗೆ ಹಸ್ತಾಂತರಿಸುವಂತೆ ಸಮಿತಿ ಆಗ್ರಹಿಸಿದೆ. ಇದೇ ತಿಂಗಳ 30 ರೊಳಗೆ ರಾಜ್ಯ ಸರ್ಕಾರ ಸೂಕ್ತ ನಿರ್ಧಾರ ಕೈಗೊಂಡು ಭೂಸ್ವಾಧೀನ ಪ್ರಕ್ರಿಯೆ ಮಾಡಿಕೊಟ್ಟು ಭೂಮಿಯನ್ನು ರೈಲ್ವೆ ಇಲಾಖೆಗೆ ಹಸ್ತಾಂತರಿಸದೇ ಹೋದಲ್ಲಿ ಹೋರಾಟದ ಮಾರ್ಗ ಹಿಡಿಯುವುದು ಅನಿವಾರ್ಯ ಎಂದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement