ಸಂಸ್ಕೃತಿ ಇಲಾಖೆ ಕಟ್ಟಡಕ್ಕೆ 70 ಲಕ್ಷ ಬಿಡುಗಡೆ: ಸತ್ಯಮೂರ್ತಿ
ತುಮಕೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಚೇರಿ ನಿರ್ಮಾಣಕ್ಕೆ ಸರ್ಕಾರದಿಂದ 70 ಲಕ್ಷ ರು. ಬಿಡುಗಡೆಯಾಗಿದೆ. ಕಾಮಗಾರಿಯನ್ನು ಶೀಘ್ರ ಆರಂಭಿಸುವ ಸಲುವಾಗಿ ಜಿಲ್ಲಾ ಉಸ್ತುವಾರಿ ಸಚಿವರಿಂದ ಶಂಕುಸ್ಥಾಪನೆ ನೆರವೇರಿಸುವ ಇಂಗಿತವನ್ನು ಜಿಲ್ಲಾಧಿಕಾರಿ ಸತ್ಯಮೂರ್ತಿ ತಿಳಿಸಿದ್ದಾರೆ. ಈ ಸಂಬಂಧ ಜಿಲ್ಲೆಯ ವಿವಿಧ ತಾಲೂಕಿನಲ್ಲಿ ಸರ್ಕಾರದಿಂದ ಕೈಗೊಂಡಿರುವ ಕಟ್ಟಡ ಕಾಮಗಾರಿಗಳ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. ಶಂಕುಸ್ಥಾಪನೆ ನೆರವೇರಿಸಿ ಆದಷ್ಟು ಬೇಗ ಇಲಾಖೆ ಕಟ್ಟಡ ನಿರ್ಮಿಸುವ ಸಂಬಂಧ ಶಂಕುಸ್ಥಾಪನೆ ನೆರವೇರಿಸಲು ಕ್ರಮ ಕೈಗೊಳ್ಳುವಂತೆ ನಿರ್ಮಿತಿ ಕೇಂದ್ರದ ಯೋಜನಾ ವ್ಯವಸ್ಥಾಪಕರಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು. ಕನ್ನಡ ಸಾಹಿತ್ಯ ಭವನಕ್ಕೆ 10 ಲಕ್ಷ ರು. ಬಿಡುಗಡೆಯಾಗಿದ್ದು, ಸದರಿ ಅನುದಾನದಲ್ಲಿ ಕಟ್ಟಡ ಕಾಮಗಾರಿಯನ್ನು 3 ತಿಂಗಳೊಳಗೆ ಪೂರೈಸಿ ಹಣ ಬಳಕೆ ಪತ್ರವನ್ನು ತಾಂತ್ರಿಕ ವರದಿಯೊಂದಿಗೆ ಸಲ್ಲಿಸಬೇಕು ಎಂದು ನಿರ್ಮಿತಿ ಕೇಂದ್ರಕ್ಕೆ ಸೂಚಿಸಿದರು. ಜಿಲ್ಲೆಯಲ್ಲಿ ವಿವಿಧ ಸಂಸ್ಥೆಗಳ ವತಿಯಿಂದ ಕೈಗೆತ್ತಿಕೊಂಡಿರುವ 18 ಸಾಂಸ್ಕೃತಿಕ ಭವನ, ಒಂದು ಸಾಂಸ್ಕೃತಿಕ ಸಮುಚ್ಚಯ, 4 ಬಯಲು ರಂಗಮಂದಿರ, ಒಂದು ರಂಗಮಂದಿರ ಕಟ್ಟಡಗಳ ಕಾಮಗಾರಿಗಳು ವಿವಿಧ ಹಂತದಲ್ಲಿ ಪ್ರಗತಿಯಲ್ಲಿದ್ದು, ಆದಷ್ಟು ಶೀಘ್ರ ಪೂರ್ಣಗೊಳಿಸಬೇಕೆಂದು ಸೂಚಿಸಿದರು. ಅನುದಾನದ ಕೊರತೆಯಿದ್ದಲ್ಲಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ತಿಳಿಸಿದರು. ಸಭೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಸವರಾಜು, ವಿವಿಧ ಅಧಿಕಾರಿಗಳು, ವಿವಿಧ ಸಂಸ್ಥೆಗಳ ಪದಾಧಿಕಾರಿಗಳು ಹಾಜರಿದ್ದರು.
ಚಿತ್ರ ಬಿಡಿಸುವ ಸ್ಪರ್ಧೆ
ತುಮಕೂರು: ನಗರದ ಕಣ್ಮುಚ್ಚು ಶಾಲೆ ಮಕ್ಕಳ ಗುಂಪಿನ ವತಿಯಿಂದ 19ನೇ ವರ್ಷದ ಜಿಲ್ಲಾ ಮಟ್ಟದ ಅಂಚೆ ಕಾರ್ಡ್ನಲ್ಲಿ ಗಣಪ ಚಿತ್ರ ಬಿಡಿಸುವ ಸ್ಪರ್ಧೆಯನ್ನು ಜಿಲ್ಲೆಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ಮಕ್ಕಳಿಗೆ ಆಯೋಜಿಸಿದೆ. ಪ್ರವೇಶ ಶುಲ್ಕವಿಲ್ಲದ ಈ ಗಣಪ ಚಿತ್ರಗಳನ್ನು ಶಾಲಾ ಮಕ್ಕಳು ಅಂಚೆ ಕಾರ್ಡ್ನಲ್ಲಿ ಎಷ್ಟು ಬೇಕಾದರೂ ಕಳುಹಿಸಬಹುದು. ಪ್ರಥಮ, ದ್ವಿತೀಯ ಬಹುಮಾನ ಹಾಗೂ ತೃತೀಯ, ಏಳು ಸಮಾಧಾನಕರ ಹಾಗೂ 40 ಮೆಚ್ಚುಗೆ ಬಹುಮಾನ ಮತ್ತು ಅರ್ಹತಾ ಪತ್ರಗಳನ್ನು ನಾಡಿನ ಹೆಸರಾಂತ ಸಾಹಿತಿಗಳು, ಗಣ್ಯರಿಂದ ವಿತರಿಸಲಾಗುವುದು. ಇದೇ ಸಂದರ್ಭದಲ್ಲಿ 2014-15ನೇ ಸಾಲಿನ ಶಿಕ್ಷಣ, ಸಂಗೀತ, ಕಲೆ, ಚಿತ್ರಕಲೆ ಕ್ಷೇತ್ರಗಳಲ್ಲಿ ಅಪ್ರತಿಮೆ ಸಾಧನೆ ಮಾಡಿ ಎಲೆಮರೆ ಕಾಯಿಯಂತಿರುವ ಜಿಲ್ಲೆಯ 8 ಶಾಲಾ ಮಕ್ಕಳನ್ನು ಗುರುತಿಸಿ ಸನ್ಮಾನಿಸಲಾಗುವುದು. ಆದ್ದರಿಂದ ಗಣಪನ ಚಿತ್ರಗಳನ್ನು ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳ ಪರಿಚಯವನ್ನು ಶಾಲೆಯ ಮುಖ್ಯೋಪಾಧ್ಯಾಯರ ಮೂಲಕ ಅಂಚೆ ಕಾರ್ಡಿನಲ್ಲಿ ಸಿದ್ಧರಾಜ್ ಐವಾರ್, ಪ್ರಧಾನ ಕಾರ್ಯದರ್ಶಿ ಕಣ್ಮುಚ್:ಾಲೆ ಮಕ್ಕಳ ಗುಂಪು, 2ನೇ ತಿರುವು, ಸಿದ್ಧಗಂಗಾ ಬಡಾವಣೆ, ತುಮಕೂರು ಈ ವಿಳಾಸಕ್ಕೆ ಕಳುವಹಿಸಬೇಕು. ಕಡೆ ದಿನಾಂಕ ಆಗಸ್ಟ್ 28.
ಬೆಂಗಳೂರು ಚಲೋ 21ಕ್ಕೆ
ತುಮಕೂರು: ಅಂಗನವಾಡಿ ಕಾರ್ಯಕರ್ತೆಯರನ್ನು ಕೇಂದ್ರ ಸರ್ಕಾರ ಕಡೆಗಣಿಸಿದೆ ಎಂದು ಆರೋಪಿಸಿ ಇದೇ ತಿಂಗಳ 21 ರ ಸೋಮವಾರ ಅಂಗನವಾಡಿ ಕೇಂದ್ರಗಳನ್ನು ಬಂದ್ ಮಾಡಿ ಬೆಂಗಳೂರು ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಎಐಟಿಯುಸಿ ರಾಜ್ಯ ಸಮಿತಿ ಸದಸ್ಯೆ ಕಲಾವತಿ ತಿಳಿಸಿದ್ದಾರೆ. ಅಂಗನವಾಡಿ ಉದ್ಯೋಗಿಗಳು ಇಲಾಖೆ ಸಭೆಗಳಿಗೆ ಹಾಜರಾದಾಗ ಬಸ್ ಪ್ರಯಾಣ ದರ, ಊಟ, ತಿಂಡಿ ಖರ್ಚಿಗೆ ಈಗ ಕೊಡುತ್ತಿರುವ ಹಣ ಸಾಕಾಗುತ್ತಿಲ್ಲ. ಆದ್ದರಿಂದ ನಗರ, ಪಟ್ಟಣ, ಗ್ರಾಮೀಣ ಪ್ರದೇಶಗಳಿಂದ ಬಂದು ಸಭೆಗೆ ಹಾಜರಾಗುವ ಎಲ್ಲಾ ಉದ್ಯೋಗಿಗಳಿಗೆ 200 ರು. ಭತ್ಯೆ ನೀಡಬೇಕೆಂದು ಆಗ್ರಹಿಸಿದ್ದಾರೆ. ಅಂಗನವಾಡಿ ಕೇಂದ್ರಗಳು ಸಂಜೆ 4 ರ ವರೆಗೆ ನಡೆಸುತ್ತಿರುವುದರಿಂದ ಮಕ್ಕಳಿಗೆ ಕೊಡುವ ಪೌಷ್ಟಿಕ ಆಹಾರದ ಪ್ರಮಾಣವನ್ನು ಹೆಚ್ಚಿಸಬೇಕು. ಹಾಗೂ ಮಕ್ಕಳಿಗೆ ಒಂದು ಜೊತೆ ಸಮವಸ್ತ್ರ ಕೊಡಬೇಕು ಎಂದು ಆಗ್ರಹಿಸಿದ್ದಾರೆ. ಅಂಗನವಾಡಿ ಕಾರ್ಯಕರ್ತೆ ಸಹಾಯಕಿಯರನ್ನು ಇಎಸ್ಐ, ಪಿಎಫ್ ಯೋಜನೆಗೆ ಒಳಪಡಿಸಬೇಕು ಎಂದಿದ್ದಾರೆ. ಮಿನಿ ಅಂಗನವಾಡಿ ಕಾರ್ಯಕರ್ತೆಯರಿಗೆ ಸಮಾನ, ಸಂಭಾವನೆ ಕೊಡಬೇಕು ಮತ್ತು ಸಹಾಯಕಿಯರನ್ನು ನೇಮಿಸಬೇಕು ಎಂದಿದ್ದಾರೆ. ಇನ್ನು ಹತ್ತು ಹಲವಾರು ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದಿದ್ದಾರೆ. ಸುದ್ದಿಗೋಷ್ಠಿಯಲ್ಲಿ ರಾಜಮ್ಮ, ಗಿರೀಶ್, ವನಜಾಕ್ಷಿ, ಮೀನಾಕ್ಷಿ ಇದ್ದರು.
ಜೀವನದಲ್ಲಿ ಸದ್ಗುಣಗಳಿರಬೇಕು
ಹುಳಿಯಾರು: ಸಂಸ್ಕಾರವಂತ ಮನುಷ್ಯ ತನ್ನ ಜೀವನದಲ್ಲಿ ಏನೆಲ್ಲಾ ಅನುಭವಿಸಲು ಮುಂದಾಗುತ್ತಾನೆ. ಆದರೆ, ಮನಸ್ಸು ಪರಿಶುದ್ಧವಿಲ್ಲದೆ ಯಾವುದನ್ನು ಅನುಭವಿಸಿದರೂ ಅದರಿಂದ ಯಾವುದೇ ರೀತಿಯ ತೃಪ್ತಿ ಸಿಗುವುದಿಲ್ಲ. ಆದ್ದರಿಂದ ಮಾನವ ತನ್ನ ಜೀವನದಲ್ಲಿ ಸದ್ಗುಣಗಳನ್ನು ಹೊಂದಿ ಪರಿಶುದ್ಧ ಮನಸ್ಸಿನಿಂದ ಸಾಗಬೇಕು ಎಂದು ಡಾ.ಗೋಪಾಲಕೃಷ್ಣ ತಿಳಿಸಿದರು. ದಿ. ಎಚ್.ಎ.ಭಾಸ್ಕರಾಚಾರ್ ಅವರ ಸ್ಮರಣಾರ್ಥ ಹುಳಿಯಾರಿನ ಸನ್ಮಾರ್ಗ ಥಿಯಸಾಫಿಕಲ್ ಸೊಸೈಟಿಯಲ್ಲಿ ಬುಧವಾರ ಸಂಜೆ ಆಯೋಜಿಸಿದ್ದ ನಿತ್ಯ ಜೀವನದ ಪರಿಶುದ್ಧತೆಗೆ ಸಪ್ತ ಸೂತ್ರಗಳ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಎಂ.ಆರ್.ಗೋಪಾಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವೆಂಕಟಾದ್ರಿ ಭಜನಾಮಂಡಳಿಯ ಮಹಿಳೆಯರು ಸಂಕೀರ್ತನಾ ಕಾರ್ಯಕ್ರಮ ನಡೆಸಿಕೊಟ್ಟರು. ಮಹೇಶಾಚಾರ್ ಸ್ವಾಗತಿಸಿ, ಶಿಕ್ಷಕ ಜಗದೀಶ್ ನಿರೂಪಿಸಿ, ಕಾರ್ಯದರ್ಶಿ ಸತೀಶ್ ವಂದಿಸಿದರು.
ನಿರ್ವಾಹಕನ ಕಾರ್ಯವೈಖರಿ ಖಂಡಿಸಿ ಪ್ರತಿಭಟನೆ
ಕುಣಿಗಲ್: ಕುಣಿಗಲ್ ಮಾರ್ಗವಾಗಿ ಹೋಗುವ ಸಾರಿಗೆ ಸಂಸ್ಥೆ ಬಸ್ಸಿನ ನಿರ್ವಾಹಕ ಪ್ರಯಾಣಿಕರನ್ನು ಚನ್ನರಾಯಪಟ್ಟಣದಲ್ಲಿ ಹತ್ತಿಸಿಕೊಳ್ಳಲು ನಿರಾಕರಿಸಿದ್ದನ್ನು ವಿರೋಧಿಸಿ ಸಾರ್ವಜನಿಕರು ಬಸ್ ತಡೆದು ಪ್ರತಿಭಟನೆ ನಡೆಸಿದ ಘಟನೆ ಪಟ್ಟಣದಲ್ಲಿ ನಡೆದಿದೆ.
ಪಟ್ಟಣ ಸೇರಿದಂತೆ ತಾಲೂಕಿನ ಕೆಲ ಪ್ರಯಾಣಿಕರು ಚನ್ನರಾಯಪಟ್ಟಣದಿಂದ ಕುಣಿಗಲ್ ಕಡೆಗೆ ಬರಲು, ಬಾಗೇಪಲ್ಲಿ ಘಟಕದ ಸಾರಿಗೆ ಸಂಸ್ಥೆಯ ಧರ್ಮಸ್ಥಳ-ಬೆಂಗಳೂರು-ಬಾಗೇಪಲ್ಲಿ ಬಸ್ಸನ್ನು ಏರಿದ್ದು, ನಿಯಮಾನುಸಾರ ಬಸ್ಸು ಕುಣಿಗಲ್ ಪಟ್ಟಣದಲ್ಲೆ ಹಾದು ಹೋಗಬೇಕಿದೆ. ಆದರೆ ನಿರ್ವಾಹಕ, ಪ್ರಯಾಣಿಕರನ್ನು ಹತ್ತಿಸಿಕೊಳ್ಳಲು ನಿರಾಕರಿಸಿದ. ಇದನ್ನು ಲೆಕ್ಕಿಸದ ಬಸ್ಸಿನಲ್ಲಿ ಹತ್ತಿ ಕುಳಿತ ಪ್ರಯಾಣಿಕರೊಂದಿಗೆ ಅಸಭ್ಯವಾಗಿ ವರ್ತಿಸಿದ ನಿರ್ವಾಹಕ ಬೈಪಾಸ್ನಲ್ಲಿ ಇಳಿಸುವ ಬೆದರಿಕೆ ಹಾಕಿದ್ದರಿಂದ ಪ್ರಯಾಣಿಕರು ಪಟ್ಟಣದ ಹುಚ್ಚಮಾಸ್ತಿಗೌಡ ವೃತ್ತದಬಳಿ ಬಸ್ನ್ನು ತಡೆದಾಗ ನಿರ್ವಾಹಕ ಉದ್ದಟತನದಿಂದ ವರ್ತಿಸಿದ ಎನ್ನಲಾಗಿದೆ.
ಘಟಕ ವ್ಯವಸ್ಥಾಪಕ ಪುರುಷೋತ್ತಮ್ ಸಮ್ಮುಖದಲ್ಲೆ ನಿರ್ವಾಹಕನನ್ನು ತರಾಟೆಗೆ ತೆಗೆದುಕೊಂಡು, ನಿರ್ವಾಹಕ, ಚಾಲಕನ ವಿರುದ್ಧ ಶಿಸ್ತು ಕ್ರಮಕ್ಕೆ ಆಗ್ರಹಿಸಿ ಧರಣಿಗೆ ಇಳಿದರು. ವ್ಯವಸ್ಥಾಪಕ ಸಿಬ್ಬಂದಿಗಳ ವಿರುದ್ಧ ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಿ, ಶಿಸ್ತುಕ್ರಮಕ್ಕೆ ಶಿಫಾರಸ್ಸು ಮಾಡುವ ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆದರು.
ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಆಹ್ವಾನ
ತುಮಕೂರು: ಶಿರಾ ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ರಾಜ್ಯ ಸರ್ಕಾರದ ಮೆಟ್ರಿಕ್ಪೂರ್ವ ವಿದ್ಯಾರ್ಥಿ ವೇತನ ಹಾಗೂ ಕೇಂದ್ರ ಪುರಸ್ಕೃತ ವಿದ್ಯಾರ್ಥಿ ವೇತನ ನೀಡಲು ಅರ್ಹ ಪ್ರವರ್ಗ-1, 2ಎ, 3ಎ ಮತ್ತು 3ಬಿ ವರ್ಗದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ವಿದ್ಯಾರ್ಥಿ ವೇತನ ಪಡೆಯುವ ಅಭ್ಯರ್ಥಿಗಳು ಸರ್ಕಾರದಿಂದ ಮಾನ್ಯತೆ ಪಡೆದ ಅನುದಾನಿತ, ಅನುದಾನರಹಿತ ಶಾಲೆಗಳಲ್ಲಿ 5 ರಿಂದ 10 ನೇ ತರಗತಿವರೆಗೆ ವ್ಯಾಸಂಗ ಮಾಡುತ್ತಿದ್ದು, ಕುಟುಂಬದ ವಾರ್ಷಿಕ ಆದಾಯ 44500 ರು. ಗಳ ಮಿತಿಯೊಳಗಿರಬೇಕು. ಸರ್ಕಾರದ, ಸರ್ಕಾರ ಅನುದಾನಿತ ವಿದ್ಯಾರ್ಥಿ ನಿಲಯ, ವಸತಿ ಶಾಲೆಗಳಲ್ಲಿ ಓದುತ್ತಿರುವವರು ಹಾಗೂ ಹಿಂದಿನ ತರಗತಿಯಲ್ಲಿ ಅನುತ್ತೀರ್ಣ ಹೊಂದಿದವರು ಈ ವೇತನಕ್ಕೆ ಅರ್ಹರಿರುವುದಿಲ್ಲ. ಹಿಂದಿನ ತರಗತಿಯಲ್ಲಿ ಶೇ.75 ಕ್ಕಿಂತ ಹೆಚ್ಚು ಹಾಜರಾತಿ ಹೊಂದಿರಬೇಕು. ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ 250 ರು., ಪ್ರೌಢಶಾಲೆಯ ಬಾಲಕರಿಗೆ 500 ರು. ಹಾಗೂ ಬಾಲಕಿಯರಿಗೆ 600 ರು. ವಿದ್ಯಾರ್ಥಿ ವೇತನ ನೀಡಲಾಗುವುದು. ಆಸಕ್ತರು ತಮ್ಮ ಅರ್ಜಿಯನ್ನು ಅಗತ್ಯ ದಾಖಲೆಗಳೊಂದಿಗೆ ಸೆ. 15 ರೊಳಗಾಗಿ ತಮ್ಮ ಶಾಲೆಯ ಮುಖ್ಯೋಪಾಧ್ಯಾಯರಿಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಶಿರಾ ತಾಲೂಕು ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿಗಳನ್ನು ಸಂಪರ್ಕಿಸಬಹುದೆಂದು ಪ್ರಕಟಣೆ ತಿಳಿಸಿದೆ.
ಉಚಿತ ಕಾನೂನು ಅರಿವು, ಸದುಪಯೋಗ ಪಡೆಯಿರಿ
ಕೊರಟಗೆರೆ: ಗ್ರಾಮೀಣ ಪ್ರದೇಶದ ಜನಸಾಮಾನ್ಯರಿಗೆ ಉಚಿತ ಕಾನೂನು ಅರಿವು ಮೂಡಿಸಲು ಸರ್ಕಾರ ಲಕ್ಷಾಂತರ ರು. ವೆಚ್ಚ ಮಾಡಿ ಅಧಿಕಾರಿಗಳ ಸಮೇತ ಇಡೀ ನ್ಯಾಯಾಂಗವನ್ನೇ ಗ್ರಾಮಗಳಿಗೆ ಕಳುಹಿಸಿ ಕಾನೂನಿನ ಬಗ್ಗೆ ಅರಿವು ಮೂಡಿಸುತ್ತಿರುವದು ಶ್ಲಾಘನೀಯವಾಗಿದ್ದು ಇದರ ಸದುಪಯೋಗ ಪಡೆಯುವಂತೆ ಕೊರಟಗೆರೆ ಸಿವಿಲ್ ನ್ಯಾಯಾಧೀಶ ಡಿ. ರಾಘವೇಂದ್ರ ತಿಳಿಸಿದರು. ಅವರು ತಾಲೂಕಿನ ವಿವಿಧ ಸ್ಥಳಗಳಲ್ಲಿ ನಡೆಯಲಿರುವ ಕಾನೂನು ಅರಿವು-ನೆರವು, ರಥ ಹಾಗೂ ಸಂಚಾರಿ ಜನತಾ ನ್ಯಾಯಾಲಯ ಕಾರ್ಯಕ್ರಮವನ್ನು ನ್ಯಾಯಾಲಯದ ಆವರಣದಲ್ಲಿ ಸಾಕ್ಷರತಾ ರಥಕ್ಕೆ ಚಾಲನೆ ನೀಡಿ ಮತ್ತು ಹೊಳವನಹಳ್ಳಿ ಗ್ರಾಮದಲ್ಲಿ ಉಚಿತ ಕನೂನು ಅರಿವು-ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಹುಟ್ಟಿದಾಗಿನಿಂದ ಸಾಯುವವರೆಗೂ ಕಾನೂನಿನ ಅಡಿಯಲ್ಲೇ ಮನುಷ್ಯ ಬದುಕಬೇಕು. ಹೀಗಾಗಿ ಜನನ ಮರಣ ಪ್ರಮಾಣ ಪತ್ರ ಪಡೆಯಬೇಕು. ಗ್ರಾಮೀಣ ಪ್ರದೇಶಗಳಲ್ಲಿನ ಜನರು ಶೋಷಣೆಗೆ ಒಳಗಾಗಿರುವಂತ ಮಹಿಳೆಯರು, ದೀನ ದಲಿತರು ಅನುಕೂಲಕ್ಕಾಗಿ ಸರ್ಕಾರ ಒಂದು ವ್ಯವಸ್ಥಿತ ಬಸ್ ನೀಡಿದ್ದು ಸದರಿ ವಾಹನದಲ್ಲಿ ಆಯಾ ತಾಲೂಕಿನಲ್ಲಿರುವ ನ್ಯಾಯಾಧೀಶರು ಹಾಗೂ ನ್ಯಾಯವಾದಿಗಳ ಜೊತೆಯಲ್ಲಿ ತಾಲೂಕು ಮಟ್ಟದ ಅಧಿಕಾರಿಗಳ ಸಮೇತ ಗ್ರಾಮಗಳಿಗೆ ಭೇಟಿ ನೀಡಿ ಪ್ರತಿಯೊಬ್ಬ ಜನಸಾಮಾನ್ಯರೂ ಕಾನೂನಿನ ಬಗ್ಗೆ ಅರಿವು ಅರಿತುಕೊಳ್ಳುವಂತೆ ಮಾಡಲಾಗುತ್ತಿದೆ ಎಂದರು.
ಹೊಳವನಹಳ್ಳಿಯಲ್ಲಿ ನಡೆದ ಸಭೆಯಲ್ಲಿ ವಕೀಲ ಕೃಷ್ಣಮೂರ್ತಿ ಬಾಲ್ಯ ವಿವಾಹದ ತಡೆ ಕಾಯ್ದೆ ಬಗ್ಗೆ ಮಾತನಾಡಿ ಹೆಣ್ಣುಮಕ್ಕಳು 18 ವರ್ಷ ಹಾಗೂ ಗಂಡು ಮಕ್ಕಳು 21 ವರ್ಷ ತುಂಬಿದ ಮೇಲೆ ಮದುವೆಯಾಗಬೇಕು ಅದಕ್ಕೂ ಮುನ್ನ ವಿವಾಹವಾಗುವುದು ಅಪರಾಧ ಎಂದ ಅವರು 10 ವರ್ಷ ತುಂಬಿದ ವಿದ್ಯಾರ್ಥಿಗಳು ಬ್ಯಾಂಕ್ನಲ್ಲಿ ವ್ಯವಹಾರ ನಡೆಸಬಹುದು ಎಂದರು. ಸಭೆಯಲ್ಲಿ ಗ್ರಾಪಂ ಅಧ್ಯಕ್ಷೆ ರತ್ನಮ್ಮ, ತಾ.ಪಂ. ಅಧ್ಯಕ್ಷ ಪ್ರಕಾಶ್, ಸಹಾಯಕ ಸರ್ಕಾರಿ ಅಭಿಯೋಜಕ ಷೇಕ್ಮಹಮದ್ಆಲಿ, ಬಿಇಓ ಮಹೇಶ್ ಇದ್ದರು.
ಶಿಕ್ಷಕರ ಸಂಘಕ್ಕೆ ಆಯ್ಕೆ
ಕುಣಿಗಲ್: ತಾಲೂಕು ಪ್ರೌಢ ಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷರಾಗಿ ರಾಮಚಂದ್ರ, ಉಪಾಧ್ಯಕ್ಷ - ಜೀವಂದರ್ ಕುಮಾರ್, ಕಾರ್ಯದರ್ಶಿ- ಬಿ.ಆರ್. ಗಂಗಾಧರ್, ಖಜಾಂಚಿ - ಹೊನ್ನಯ್ಯ, ರಾಜ್ಯ ಪರಿಷತ್ ಸದಸ್ಯರಾಗಿ - ಮಹಮದ್ ಇಸ್ಮಾಯಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಚುನಾವಣಾ ಅಧಿಕಾರಿಗಳಾಗಿ ಹೊನ್ನೆಗೌಡ ಕಾರ್ಯ ನಿರ್ವಹಿಸಿದರು.
ಕೊರಟಗೆರೆ ತಾ. ಪ್ರೌಢಶಾಲಾ ಸಹ ಶಿಕ್ಷಕರ ಸಂಘಕ್ಕೆ 10 ಶಿಕ್ಷಕರ ಅವಿರೋಧ ಆಯ್ಕೆ
ಕೊರಟಗೆರೆ: ತಾಲೂಕಿನ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ನೂತನ ಪದಾಧಿಕಾರಿಗಳಾಗಿ 10 ಶಿಕ್ಷಕರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ತಾಲೂಕಿನಲ್ಲಿ 10 ಪದಾಧಿಕಾರಿಗಳಿಗೆ ಅವಕಾಶವಿದ್ದು 28 ಶಿಕ್ಷಕರು ನಾಮಪತ್ರ ಸಲ್ಲಿಸಿದ್ದರು. ನಂತರ ಮೂಡಿದ ಸಹಮತ ಸಭೆಯಲ್ಲಿ 18 ಮಂದಿ ನಾಮಪತ್ರ ವಾಪಸ್ ಪಡೆದು ಹೊಳವನಹಳ್ಳಿ ಶಾಲೆ ಶಿಕ್ಷಕರಾದ ಕೆ.ಎನ್. ಸುರೇಶ್, ಹನುಮಂತರಾಯಪ್ಪ, ಐ.ಕೆ. ಕಾಲೋನಿಯ ನಾಗರಾಜು, ಬುಕ್ಕಪಟ್ಟಣದ ಲಕ್ಷ್ಮೀಪುತ್ರ, ಕೊರಟಗೆರೆಯ ಬಾಲಕಿಯರ ಪ್ರೌಢಶಾಲೆಯ ರಮೇಶ್, ಕಾಳಿದಾಸ ಪ್ರೌಢಶಾಲೆಯ ವೈ.ಸಿ. ಸ್ವಾಮಿ, ದುಡ್ಡನಹಳ್ಳಿಯ ಚಿಕ್ಕಪಯ್ಯ, ಎಲಚಿಗೆರೆಯ ಹನುಮಂತರಾಯಪ್ಪ, ಬಿ.ಡಿ.ಪುರದ ಸಚ್ಚಿದಾನಂದ, ತೋವಿನಕೆರೆಯ ಎಂ.ಪಿ. ಮೋಹನ್,10 ಶಿಕ್ಷಕರನ್ನು ಸದಸ್ಯರನ್ನಾಗಿ ಘೋಷಿಸಲಾಯಿತು. ಬಳಿಕ ಸರ್ಕಾರಿ ನೌಕರ ಸಂಘದ ಕಟ್ಟಡದಲ್ಲಿ ನಡೆದ ಸಭೆಯಲ್ಲಿ ಕೊರಟಗೆರೆ ಪಟ್ಟಣದ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ರಮೇಶ್ ಅವರನ್ನು ತಾಲೂಕಿನ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ನೂತನ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಯಿತು. ನೂತನ ಅಧ್ಯಕ್ಷ ರಮೇಶ್ ಮಾತನಾಡಿ ಈ ಅವಿರೋಧ ಆಯ್ಕೆಗೆ ಸಹಕರಿಸಿ ಸ್ಥಾನವನ್ನು ತ್ಯಾಗ ಮಾಡಿ ಸ್ಪರ್ದೆಯಿಂದ ನಾಮ ಪತ್ರವನ್ನು ವಾಪಸ್ ಪಡೆದ 18 ಶಿಕ್ಷಕರಿಗೆ ಋಣಿಯಾಗಿದ್ದು ಶಿಕ್ಷಕರ ಹಿತ ಕಾಪಾಡಲು ಸದಾ ದುಡಿಯುತ್ತೇನೆ ಎಂದರು. ಸರ್ಕಾರಿ ನೌಕರ ಸಂಘದ ವಿ.ಕೆ. ವೀರಕ್ಯಾತಯ್ಯ ಮಾತನಾಡಿ ಸಂಘದಲ್ಲಿ ಜಾತಿಯ ಮನೋಭಾವವಿಲ್ಲದೆ ಎಲ್ಲರನ್ನು ಒಗ್ಗೂಡಿಸಿಕೊಂಡು ಹೋಗುವುದು ಅಧ್ಯಕ್ಷರ ಕರ್ತವ್ಯವಾಗಿದ್ದು, ತ್ಯಾಗದ ಭಾವನೆ ಅಗತ್ಯ ಎಂದರು. ಸಭೆಯಲ್ಲಿ ನೌಕರ ಸಂಘದ ಟಿ.ಕೆ. ವಿಜಯನರಸಿಂಹ, ಆರಾಧ್ಯಾ, ಎಲ್. ಕಾಮಯ್ಯ, ಪಿ.ಸಿ. ನಾರಾಯಣಪ್ಪ, ಬೊಮ್ಮಣ್ಣ, ಶಿಕ್ಷಕರ ಸಂಘದ ಪಾಂಡುರಂಗ, ವೆಂಕಟರಾಮು, ರಂಗನಾಥ, ಹನುಮಂತರೆಡ್ಡಿ, ಆನಂದ್ ಹಾಜರಿದ್ದರು.