ಯೋಜಿತ ಪರಿವಾರದಿಂದ ಸಂತೋಷ
ತುಮಕೂರು: ಜಿಲ್ಲೆಯ ಜನಸಂಖ್ಯೆ ಹೆಚ್ಚಾಗಿದ್ದು ಇದನ್ನು ನಿಯಂತ್ರಿಸುವ ಪ್ರಯತ್ನ ನಮ್ಮದಾಗಬೇಕು ಎಂದು ತುಮಕೂರು ಶಾಸಕ ಡಾ. ರಫೀಕ್ ಅಹಮದ್ ಸಲಹೆ ನೀಡಿದರು.
ನಗರದ ಸಿದ್ಧಿ ವಿನಾಯಕ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶ್ವ ಜನಸಂಖ್ಯಾ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಿಲ್ಲೆಯ ಭೌಗೋಳಿಕ ವಿಸ್ತೀರ್ಣ ಸುಮಾರು 10,591 ಚದುರ ಮೀಟರ್ ಇದ್ದು, 26 ಲಕ್ಷ ಜನಸಂಖ್ಯೆ ಹೊಂದಿದೆ. ಯಾವುದೇ ಪ್ರದೇಶ ಅಭಿವೃದ್ಧಿ ಕಾಣಬೇಕಾದರೆ ಅಲ್ಲಿನ ಭೌಗೋಳಿಕ ವಿಸ್ತೀರ್ಣಕ್ಕನುಗುಣವಾಗಿ ಜನಸಂಖ್ಯೆ ಹೊಂದಿರಬೇಕು. ಜಿಲ್ಲೆಯ ಅಂಕಿ-ಅಂಶವನ್ನು ಅವಲೋಕಿಸಿದಾಗ ಜನಸಂಖ್ಯೆ ಹೆಚ್ಚಾಗಿದ್ದು, ನಿಯಂತ್ರಿಸುವ ಪ್ರಯತ್ನ ನಮ್ಮದಾಗಬೇಕು. ಈ ನಿಟ್ಟಿನಲ್ಲಿ ಎಲ್ಲಾ ಅಧಿಕಾರಿಗಳು ಜನಜಾಗೃತಿ ಮೂಡಿಸುವ ಮೂಲಕ ಸಹಕರಿಸಬೇಕೆಂದರು.
ಕಾರ್ಯಕ್ರಮ ಉದ್ಘಾಟಿಸಿದ ಜಿಪಂ ಸಿಇಒ ಗೋವಿಂದರಾಜು ಮಾತನಾಡಿ, ಜನಸಂಖ್ಯೆ ಪ್ರಮಾಣ ಹೀಗೆ ಬೆಳೆಯುತ್ತಿದ್ದರೆ ಅಭಿವೃದ್ಧಿ ಕಷ್ಟಸಾಧ್ಯ. ಸರ್ಕಾರ ಜನಸಂಖ್ಯೆ ನಿಯಂತ್ರಿಸುವ ಕುರಿತು ಅರಿವು ಮೂಡಿಸುವ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು, ಕುಟುಂಬ ಕಲ್ಯಾಣ ಯೋಜನೆಗಳನ್ನು ಆಶಾ ಕಾರ್ಯಕರ್ತೆಯರು, ಅಂಗನವಾಡಿ ಸಹಾಯಕಿಯರು, ಎಎನ್ಎಂಗಳ ಮೂಲಕ ಪ್ರತಿ ಮನೆ ಮನೆಗೂ ಭೇಟಿ ನೀಡಿ ತಿಳಿ ಹೇಳಲಾಗುತ್ತಿದೆ. ಗ್ರಾಮಮಟ್ಟದಲ್ಲಿ ಕಾರ್ಯನಿರ್ವಹಿಸುವ ಎಲ್ಲಾ ಕಾರ್ಯಕರ್ತೆಯರ ಸೇವೆ ಶ್ಲಾಘನೀಯ ಎಂದರು. ಕುಟುಂಬ ಕಲ್ಯಾಣ ಯೋಜನೆಗಳಡಿ ಜನಸಂಖ್ಯಾ ನಿಯಂತ್ರಣಕ್ಕಾಗಿ ಅರ್ಹ ದಂಪತಿ ಆಯ್ಕೆ ಮಾಡಿ ಸಂತಾನಹರಣ ಶಸ್ತ್ರಚಿಕಿತ್ಸೆಗೊಳಗಾಗಲು ಅರಿವು ಮೂಡಿಸಲಾಗುತ್ತಿದೆ. ಇತ್ತೀಚಿನ ಅಂಕಿ-ಅಂಶಗಳ ಪ್ರಕಾರ ಶೇ.50ರಿಂದ 60 ಅರ್ಹ ದಂಪತಿ ಶಸ್ತ್ರಚಿಕಿತ್ಸೆಗೊಳಗಾಗಿದ್ದಾರೆ. ಯೋಜಿತ ಪರಿವಾರ- ಸುಖ ಸಂತೋಷ ಅಪಾರ ಎನ್ನುವ ಈ ವರ್ಷದ ಘೋಷಣೆಯಂತೆ ದಂಪತಿಗಳು ತಮ್ಮ ಪರಿವಾರವನ್ನು ಯೋಜಿತ ರೀತಿಯಲ್ಲಿ ರೂಪಿಸಿ ಉತ್ತಮ ನಿರ್ಧಾರ ಕೈಗೊಳ್ಳುವುದರಿಂದ ಜನಸಂಖ್ಯೆ ಏರಿಕೆಯನ್ನು ನಿಯಂತ್ರಿಸಬಹುದು ಎಂದರು. ಪಾಲಿಕೆ ಮಹಾಪೌರರಾದ ಗೀತಾ ರುದ್ರೇಶ್ ಮಾತನಾಡಿ, ಜನಸಂಖ್ಯಾ ಸ್ಫೋಟದಿಂದ ಪ್ರತಿ ಮಗುವಿಗೆ ಮೂಲಭೂತ ಸೌಲಭ್ಯ ಒದಗಿಸುವಲ್ಲಿ ಯಶಸ್ಸು ಕಾಣಲು ಸಾಧ್ಯವಿಲ್ಲ. ಈ ದಿಶೆಯಲ್ಲಿ ಜನರು ಪ್ರಜ್ಞಾವಂತರಾಗಿ ಅಭಿವೃದ್ಧಿಗೆ ಪೂರಕವಾಗಬೇಕೆಂದರು.
ವಿಶೇಷ ಉಪನ್ಯಾಸ ನೀಡಿದ ಎಸ್ಎಸ್ಎಂಸಿ ಸಮುದಾಯ ವೈದ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಎಂ.ಎಸ್. ರಾಜಣ್ಣ ಮಾತನಾಡಿ, ಜನಸಂಖ್ಯೆಯಲ್ಲಿ ದೇಶವು ಜಗತ್ತಿನಲ್ಲಿ 2ನೇ ಸ್ಥಾನದಲ್ಲಿದ್ದು, ಪ್ರತಿ 3 ಸೆಕೆಂಡಿಗೆ ಒಂದು ಮಗು ಜನನವಾಗುತ್ತಿದೆ ಎಂದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಚನ್ನಮಲ್ಲಯ್ಯ ಸ್ವಾಗತಿಸಿದರು. ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಗುರುಸಿದ್ದಯ್ಯ ನಿರೂಪಿಸಿದರು. ಜಿಲ್ಲಾ ಕುಟುಂಬ ಕಲ್ಯಾಣಧಿಕಾರಿ ಡಾ. ಪ್ರಶಾಂತ ವಂದಿಸಿದರು. ಹನುಮಂತರಾಯ ಪ್ರಾರ್ಥಿಸಿದರು. ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಈಶ್ವರಯ್ಯ, ರೋಟರಿ ಸಂಸ್ಥೆ ಅಧ್ಯಕ್ಷ ಸಾಗರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ನಂಜೇಗೌಡ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಈಶ್ವರಯ್ಯ, ವಿವಿಧ ನರ್ಸಿಂಗ್ ಕಾಲೇಜಿನ ಬೋಧಕರು, ವಿದ್ಯಾರ್ಥಿಗಳು, ದಾನಿ ಫೌಂಡೇಷನ್ ಮುಖ್ಯಸ್ಥರು, ಆಶಾ ಕಾರ್ಯಕರ್ತೆಯರು ಇದ್ದರು.
-