ಸತ್ಸಂಗಗಳ ಸಹವಾಸದಿಂದ ಆತ್ಮೋದ್ಧಾರ ಸಾಧ್ಯ
ತುಮಕೂರು: ಜ್ಞಾನಬುತ್ತಿ ಸತ್ಸಂಗ ಕೇಂದ್ರಗಳ ಸಹವಾಸದಿಂದ ಆತ್ಮೋದ್ಧಾರ ಸಾಧ್ಯ. ಇದರಿಂದ ನಮ್ಮ ಮನಸ್ಸು ಪವಿತ್ರವಾಗುತ್ತದೆ ಎಂದು ಪ್ರಾಚೀನ ಕಾವ್ಯಗಳ ಪ್ರವಚನಕಾರ ಹಾಗೂ ಜ್ಞಾನಬುತ್ತಿ ಸತ್ಸಂಗ ಕೇಂದ್ರದ ಮಾಜಿ ಅಧ್ಯಕ್ಷ ಟಿ. ಮುರಳಿಕೃಷ್ಣಪ್ಪ ಹೇಳಿದರು.
ತುಮಕೂರಿನ ಜ್ಞಾನಬುತ್ತಿ ಸತ್ಸಂಗ ಕೇಂದ್ರ ವಿದ್ಯಾವಾಹಿನಿ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಿದ್ದ 261ನೇ ಸಾಪ್ತಾಹಿಕ ಉಪನ್ಯಾಸ ಕಾರ್ಯಕ್ರಮದಲ್ಲಿ ಡಿವಿಜಿಯವರ ಮಂಕುತಿಮ್ಮನ ಕಗ್ಗದಲ್ಲಿ ಮನುಷ್ಯ ಮತ್ತು ಮನಸ್ಸು ಎಂಬ ವಿಷಯದ ಬಗ್ಗೆ ಮಾತನಾಡಿದರು.
ಮನಸ್ಸು ಮರ್ಕಟ: ನಮ್ಮ ಕನ್ನಡ ಸಾಹಿತ್ಯ ಲೋಕದ ದಾರ್ಶನಿಕ ಕವಿ ಡಿವಿಜಿಯವರು ತಮ್ಮ ಅನುಭವದ ರಸಪಾಕವಾದ ಮೇರುಕೃತಿ ಮಂಕುತಿಮ್ಮನ ಕಗ್ಗದಲ್ಲಿ ಹೇಳಿದಂತೆ ಮನಸ್ಸೆಂಬುದು ಮನುಷ್ಯನ ಅಂಗವಲ್ಲ. ರಾಗ, ದ್ವೇಷಗಳಿಂದ ತುಂಬಿದ ಉಗ್ರಾಣವಾಗಿದೆ. ಮನುಷ್ಯನ ಮನಸ್ಸು ತಣ್ಣಗೆ ಮಲಗುವಂತದ್ದಲ್ಲ ಎಂದರು.
ಮತ್ಸರಗಳಿಂದ ತುಂಬಿದ್ದು, ತಲೆಯಲ್ಲಿ ಚಿಂತೆಗಳೆಂಬ ನೂರಾರು ಹಕ್ಕಿಗಳು ಕಿರುಚುತ್ತಿವೆ ಹಾಗೂ ನಿದ್ದೆಗೆಡಿಸುತ್ತಿವೆ. ಈ ಜಗತ್ತಿನಲ್ಲಿ ಮತ್ಸರವಿಲ್ಲದ ಮನುಷ್ಯರೇ ಇಲ್ಲ. ಡಿವಿಜಿ ಹೇಳಿದಂತೆ ಹೊಟ್ಟೆಕಿಚ್ಚು ಉರಿಯುತ್ತಿದೆ. ಆರಿಸಲು ನೀರೆಲ್ಲಿ? ನಾವು ಶಾಂತವಾಗಿರಬೇಕಾದರೆ ನಮ್ಮ ಮನಸ್ಸು ಪ್ರಶಾಂತವಾಗಿರಬೇಕು ಎಂದರು.
ಸತ್ಸಂಗದ ಆಸ್ತಿ: ಅಧ್ಯಕ್ಷತೆ ವಹಿಸಿದ್ದ ಜ್ಞಾನಬುತ್ತಿ ಸತ್ಸಂಗ ಕೇಂದ್ರದ ಅಧ್ಯಕ್ಷ ಹಾಗೂ ವಿದ್ವಾಂಸ ಡಾ. ಎಸ್.ಪಿ. ಪದ್ಮಪ್ರಸಾದ್ ಮಾತನಾಡಿ, ಹರಿಶ್ಚಂದ್ರ ಕಾವ್ಯ, ಜೈಮಿನಿ ಭಾರತ, ರನ್ನನ ಗದಾಯುದ್ಧ, ಮಂಕುತಿಮ್ಮನ ಕಗ್ಗ ಮುಂತಾದ ಕಾವ್ಯಗಳನ್ನು ನಿರಂತರವಾಗಿ ಅಧ್ಯಯನ ಮಾಡಿ ಕಾವ್ಯಗಳ ಮೇಲಿನ ಪ್ರಭುತ್ವ ಸಾಧಿಸಿರುವ ಪ್ರಾಚೀನ ಕಾವ್ಯಗಳ ಪ್ರವಚನಕಾರರಾಗಿ ಹೆಸರು ಗಳಿಸಿರುವ ಟಿ. ಮುರಳಿಕೃಷ್ಣಪ್ಪ ನಮ್ಮ ಜ್ಞಾನಬುತ್ತಿ ಸತ್ಸಂಗದ ಆಸ್ತಿಯಾಗಿದ್ದಾರೆ. ಇವರ ಉಪನ್ಯಾಸಗಳು ಎಲ್ಲರ ಮನಸ್ಸನ್ನು ತಟ್ಟಿವೆ ಎಂದು ಹೇಳಿದರು.
ಎಚ್. ಲೋಕೇಶ್ ಅಗ್ರಹಾರ ಪ್ರಾರ್ಥಿಸಿದರು. ಈ ಜ್ಞಾನಬುತ್ತಿ ಸತ್ಸಂಗ ಕೇಂದ್ರದ ಕಾರ್ಯದರ್ಶಿ ಮಿಮಿಕ್ರಿ ಈಶ್ವರಯ್ಯ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.