ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಭಾರತೀಯ ಚಿಂತನೆಯಲ್ಲಿ ಮನುಷ್ಯ ವಿಕಾಸ

Vishwanath S
Updated On : 22 Jul 2014, 12:51 pm

ತುಮಕೂರು: ಮನುಷ್ಯನನ್ನು ವಿಕಾಸಗೊಳಿಸುವ ವಿಚಾರ ಭಾರತೀಯ ಚಿಂತನೆಯಲ್ಲಿದೆ ಎಂದು ಗದಗ-ಬಿಜಾಪುರ ರಾಮಕೃಷ್ಣ ವಿವೇಕಾನಂದ ಆಶ್ರಮದ ಸ್ವಾಮಿ ನಿರ್ಭಯಾನಂದ ಸರಸ್ವತಿಗಳು ಅಭಿಪ್ರಾಯಪಟ್ಟರು.
ತುಮಕೂರಿನ ವಾಸವಿ ದೇವಾಲಯದಲ್ಲಿ ನಡೆದ ಗಮಕ ಹಬ್ಬ ಕಾರ್ಯಕ್ರಮದ ಸಮಾರೋಪದಲ್ಲಿ ಮಾತನಾಡಿ, ಇಂದು ಮನುಷ್ಯ ಸಾತ್ವಿಕ ಗುಣಗಳನ್ನು ಕಳೆದುಕೊಂಡು ಸ್ಪರ್ಧಾತ್ಮಕ ಮನೋಭಾವ ಬೆಳೆಸಿಕೊಳ್ಳುತ್ತಿದ್ದಾನೆ. ಆನಂದ ಕೇವಲ ಭೋಗದಲ್ಲಿಲ್ಲ, ಇಂದ್ರಿಯಗಳಲ್ಲೂ ಇಲ್ಲ. ಭಾರತೀಯ ಜೀವನದ ಶೈಲಿಯಲ್ಲಿದೆ. ನಾವೆಲ್ಲರು ಪ್ರಕೃತಿಯ ಸ್ಥಿತಿಯಲ್ಲದ್ದೇವೆ. ನಮ್ಮ ಹೃದಯ ಭಾಗ, ಭಾವ ಸಾಗರ, ಅದ್ಭುತವಾದ ಬುದ್ಧಿಯನ್ನು ಉಪಯೋಗಿಸಿಕೊಂಡು ಮಾನವನಾಗಬೇಕು ಎಂದು ಬೇಡನಾಗಿದ್ದ ವಾಲ್ಮೀಕಿ ಮಹರ್ಷಿಯಾಗಿದ್ದ ಎಂದರು.
ಗಮಕ ಸಾಹಿತ್ಯ ಮಕ್ಕಳನ್ನು ಬೆಳೆಸುವ ಬಗ್ಗೆ ತಿಳಿಸುತ್ತದೆ. ಇಂದು ತಂದೆ-ತಾಯಿಗಳು ಮಕ್ಕಳು ಅಂಕದಲ್ಲಿ ಬುದ್ಧಿವಂತರಾಗುವತ್ತ ಗಮನ ಹರಿಸುವದಷ್ಟೇ ಅಲ್ಲದೆ ಸಂಸ್ಕಾರವನ್ನೂ ದೊರಕಿಸುಕೊಡುವಲ್ಲಿ ಗಂಭೀರವಾಗಿ ಗಮನಹರಿಸಬೇಕು. ಮಾನವ ಹಕ್ಕುಗಳು ಬೇಕೆನ್ನುವವರು ಸಮಾಜದಲ್ಲಿ ಶಾಪಗ್ರಸ್ತರಾಗಿ ರಾಕ್ಷಸರಂತೆ ಬದುಕುತ್ತಿದ್ದಾರೆ. ಇಂದು ಸಮಾಜದಲ್ಲಿ ಉನ್ನತವಾದ ಸಾಹಿತ್ಯಗಳು ಬರಬೇಕು ಎಂದರು.
ಗಮಕ ಅದ್ಭುತವಾದ ಕಲೆ. ಭಾವನೆಗಳನ್ನು ಉದಾತ್ತೀಕರಿಸುವ ಶಕ್ತಿ ಗಮಕ ಕಲೆಗೆ ಇದೆ. ಮನುಷ್ಯ ಜೀವನದ ಗುರಿ ಹೊರಗಡೆ ಒಳಗಡೆ ಇರುವ ಪ್ರಕೃತಿ ನಿಯಂತ್ರಣದಲ್ಲಿರಬೇಕು. ದಿವ್ಯತೆಯನ್ನು ಜಾಗ್ರತೆಗೊಳಿಸಬೇಕು. ಸಂಗೀತವೆಂಬುದು ಶಬ್ಧ, ವ್ಯಕ್ತ ಪರಮಾತ್ಮ ವರ್ಣಮಾಲೆಯಲ್ಲಿ ಮನುಷ್ಯನ ಜೀವನಕ್ಕೆ ಬೇಕಾದ ಸಾಧನೆಗಳು ಇದೆ ಎಂದರು.
ಇದೇ ಸಂದರ್ಭದಲ್ಲಿ ಸಂಸ್ಕಾರ ಭಾರತೀ, ತುಮಕೂರು ಶಾಖೆ ಟಿ.ಎಲ್. ನರಸಿಂಹಯ್ಯ, ಎನ್. ನರಸಿಂಹರೆಡ್ಡಿ ಅವರನ್ನು ಗೌರವಿಸಲಾಯಿತು. ಸಂಕ್ಷಿಪ್ತ ರಾಮಾಯಣ ಕಥಾ ಭಾಗವನ್ನು ಶೃತಿ ಮಂಜುನಾಥ್ ವಾಚಿಸಿದರೆ, ವ್ಯಾಖ್ಯಾನವನ್ನು ಚಿನ್ಮಯ ಗೌತಮ್ ನಡೆಸಿಕೊಟ್ಟರು. ಬಾಲ ಪ್ರತಿಭೆ ಅನಘಪ್ರಸಾದ್ ಅವರಿಂದ ಭಕ್ತ ಸುಧಾಮ ಎಂಬ ಹರಿಕಥೆಯನ್ನು ಏರ್ಪಡಿಸಲಾಗಿತ್ತು.
ಕಾರ್ಯಕ್ರಮದಲ್ಲಿ ರಾಮಕೃಷ್ಣ ವಿವೇಕಾನಂದ ಆಶ್ರಮದ ವೀರೇಶಾನಂದ ಸರಸ್ವತಿ ಸ್ವಾಮಿಗಳು, ಪರಮಪೂಜ್ಯ ಧೀರಾನಂದಜಿ ಸ್ವಾಮಿಗಳು ಆಗಮಿಸಿದ್ದು ವಿಶೇಷವಾಗಿತ್ತು. ಸಂಸ್ಕಾರ ಭಾರತೀ, ಕರ್ನಾಟಕ ಪ್ರಾಂತದ ಮಹಾಮಂತ್ರಿ ಅ.ಚಾ. ಅಶೋಕಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಸಂಸ್ಕಾರ ಭಾರತೀ, ತುಮಕೂರು ನಗರಾಧ್ಯಕ್ಷ ಅನಂತರಾಮಯ್ಯನವರು ಗಮಕ ಹಬ್ಬದ ವರದಿಯನ್ನು ಓದಿದರು. ಗ.ಸೀ. ಅನಂತರಾಮು, ಡಾ. ಪಾವಗಡ ರೇಣುಕಾ ಪ್ರಸಾದ್ ಸಭೆಯಲ್ಲಿ ಉಪಸ್ಥಿತರಿದ್ದರು. ನಾ.ವೆಂಕಟೇಶ್ ಜೋಯಿಸ್ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement