ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ವಿಧಾನಸೌಧಕ್ಕೆ ಗ್ರಾಮ ಸಹಾಯಕರಿಂದ ನಾಳೆ ಮುತ್ತಿಗೆ ಕಾಯಂ!

Vishwanath S
Updated On : 22 Jul 2014, 12:51 pm

ತುಮಕೂರು: ರಾಜ್ಯದಲ್ಲಿ ಅತ್ಯಂತ ಕಡಿಮೆ ವೇತನಕ್ಕೆ ದುಡಿಯುತ್ತಿರುವ ಗ್ರಾಮ ಸಹಾಯಕರನ್ನು ಕಾಯಂಗೊಳಿಸಿ, ಅವರನ್ನು ಸರಕಾರದ ಡಿ ದರ್ಜೆ ನೌಕರರೆಂದು ಪರಿಗಣಿಸಬೇಕು ಎಂದು ಒತ್ತಾಯಿಸಿ ಜು. 23ರಂದು ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ರಾಜ್ಯ ಕಂದಾಯ ಇಲಾಖಾ ಗ್ರಾಮ ಸಹಾಯಕರ ಸಂಘದ ಜಿಲ್ಲಾಧ್ಯಕ್ಷ ಲಕ್ಷೀನಾರಾಯಣ ತಿಳಿಸಿದ್ದಾರೆ.
ತುಮಕೂರಿನ ಮಂಡಿಪೇಟೆಯಲ್ಲಿರುವ ಸಂಘದ ಜಿಲ್ಲಾ ಕಚೇರಿಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿ, ಕಂದಾಯ ಇಲಾಖೆಯಲ್ಲಿ 1977-78 ರಿಂದಲೂ ಸುಮಾರು 10450 ಗ್ರಾಮ ಸಹಾಯಕರು 100 ಸಂಬಳದಿಂದ ದುಡಿಯುತ್ತಿದ್ದು, ದಿನದ 24 ಗಂಟೆ ಸರಕಾರಿ ಕೆಲಸದಲ್ಲಿ ತೊಡಗಿದ್ದರೂ ಸರಕಾರ ನಮ್ಮನ್ನು ಡಿ.ದರ್ಜೆ ನೌಕರರೆಂದು ಪರಿಗಣಿಸುವಲ್ಲಿ ತಾರತಮ್ಯ ಎಸಗುತ್ತಿದೆ ಎಂದು ಆರೋಪಿಸಿದರು.
ಅತ್ಯಂತ ಕಡಿಮೆ ಸಂಬಳಕ್ಕೆ ಕಂದಾಯ ಇಲಾಖೆಯಲ್ಲಿ ಜೀತದಾಳುಗಳಂತೆ ದುಡಿಯುತ್ತಿರುವ ಗ್ರಾಮ ಸಹಾಯಕರ ಅಗತ್ಯ ಸರಕಾರಕ್ಕೆ ಇದೆ ಎಂಬುದನ್ನು 2007ರಲ್ಲಿ ಸರ್ಕಾರವೇ ಒಪ್ಪಿಕೊಂಡು ಕಾಯಂಗೊಳಿಸಿದೆ  ಆದರೂ ಇದುವರೆಗೂ ನಮ್ಮ ವೇತನ ಪರಿಷ್ಕರಣೆಗೊಂಡಿಲ್ಲ. 35 ವರ್ಷಗಳಿಂದಲೂ ದುಡಿಯುತ್ತಿರುವ ಎಲ್ಲಾ ಗ್ರಾಮಸಹಾಯಕರನ್ನು ಕಾಯಂಗೊಳಿಸಬೇಕು ಎಂಬುದು ನಮ್ಮ ಬೇಡಿಕೆ. 2013ರ ಚಳಿಗಾಲದ ಅಧಿವೇಶನದ ವೇಳೆ ಸಂಗೊಳ್ಳಿ ರಾಯಣ್ಣ ಗದ್ದುಗೆಯಿಂದ ಸುವರ್ಣಸೌಧದವರೆಗೆ ಪಾದಯಾತ್ರೆ ನಡೆಸಿದಾಗ ಸಿಎಂ ಸಿದ್ದರಾಮಯ್ಯ ಗ್ರಾಮ ಸಹಾಯಕರನ್ನು ಡಿ ದರ್ಜೆ ನೌಕರರೆಂದು ಪರಿಗಣಿಸಿ ಸೇವಾ ಭದ್ರತೆ ನೀಡುವ ಭರವಸೆ ನೀಡಿದ್ದರು. ಆದರೆ ಈ ಭರವಸೆ ಇದುವರೆಗೂ ಈಡೇರಿಲ್ಲ. ಅಲ್ಲದೆ 2014ರ ಜನವರಿ 3ರಂದು ಕಂದಾಯ ಸಚಿವರು, ಸಮಾಜಕಲ್ಯಾಣ ಸಚಿವರು ಹಾಗೂ ಸಂಬಂಧಪಟ್ಟ ಇಲಾಖೆಯ ಪ್ರಧಾನಕಾರ್ಯದರ್ಶಿಗಳ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಗ್ರಾಮಸಹಾಯಕರ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದ್ದರು. ಏಳು ತಿಂಗಳು ಕಳೆದರೂ ಈಡೇರಿಲ್ಲ. ಹೀಗಾಗಿ ಜು.23ರಂದು ವಿಧಾನಸೌಧ ಮುತ್ತಿಗೆ ಕಾರ್ಯಕ್ರಮವನ್ನು ಸಂಘದಿಂದ ಹಮ್ಮಿಕೊಳ್ಳಲಾಗಿದೆ ಎಂದರು. ಸಂಘದ ಗೌರವಾಧ್ಯಕ್ಷ ಲಕ್ಷ್ಮೀಕಾಂತಣ್ಣ, ಖಚಾಂಚಿ ಸೋರಲಮಾವು ರಮೇಶ್, ಸಂಘಟನಾ ಕಾರ್ಯದರ್ಶಿ ದಯಾನಂದ್, ಸಹ ಕಾರ್ಯದರ್ಶಿ ಕೃಷ್ಣಮೂರ್ತಿ ಇತರರು ಉಪಸ್ಥಿತರಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement