ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ನರಸಿಂಹರಾಜು ಸ್ಮರಣಾರ್ಥ ರಂಗಮಂದಿರ ನಿರ್ಮಾಣದಲ್ಲೂ 'ಕಾಮಿಡಿ' 4 ವರ್ಷವಾದರೂ ಪೂರ್ಣಗೊಳ್ಳದ ಕಾಮಗಾರಿ, ಕಲಾವಿದರ ಸಿಡಿಮಿಡಿ

Mainashree
Updated On : 23 Jul 2014, 11:44 am

ತಿಪಟೂರು: ರಂಗಭೂಮಿಯ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿ ಹಾಸ್ಯ ಚಕ್ರವರ್ತಿಯಾಗಿ ಮೆರೆದ ದಿವಂಗತ ನರಸಿಂಹರಾಜು ಸ್ಮರಣಾರ್ಥ ತಿಪಟೂರಿನ ಕೆ.ಆರ್.ಬಡಾವಣೆಯಲ್ಲಿ ನಿರ್ಮಾಣವಾಗುತ್ತಿರುವ ನರಸಿಂಹರಾಜು ರಂಗಮಂದಿರ ಅನುದಾನದ ಕೊರತೆಯಿಂದ ನಾಲ್ಕು ವರ್ಷಗಳಿಂದ ನನೆಗುದಿಗೆ ಬಿದ್ದಿದೆ.
1923, ಜು.24ರಂದು ರಾಮರಾಜು ಹಾಗೂ ವೆಂಕಟಲಕ್ಷಮ್ಮ ದಂಪತಿ ಹಿರಿಯ ಪುತ್ರನಾಗಿ ತಿಪಟೂರಿನಲ್ಲಿ ಜನಿಸಿದ ನರಸಿಂಹರಾಜು ಕನ್ನಡ ಚಿತ್ರರಂಗದ ಉದಯೋನ್ಮುಖ ನಟನಾಗಿ ಗಮನ ಸೆಳೆದವರು. ತಂದೆ ತಿಪಟೂರು ಪಟ್ಟಣದಲ್ಲಿ ಪೇದೆಯಾಗಿದ್ದ ಹಿನ್ನೆಲೆಯಲ್ಲಿ ಬಾಲ್ಯದ ದಿನಗಳನ್ನು ತಿಪಟೂರು ನಗರದಲ್ಲೇ ಕಳೆದರು. ಅಂದಿನ ಕಾಲದಲ್ಲಿ ತಿಪಟೂರು ನಗರದಲ್ಲಿ ನಾಟಕ ಕಂಪನಿಗಳದ್ದೇ ಕಾರುಬಾರಾಗಿತ್ತು. ಅಂತಹ ವೇಳೆ ತಿಪಟೂರಿನ ಸಿ.ಬಿ.ಮಲ್ಲಪ್ಪನವರ ಚಂದ್ರಮೌಳೀಶ್ವರ ನಾಟಕ ಕಂಪನಿಯಲ್ಲಿ ತಮ್ಮ 4ನೇ ವಯಸ್ಸಿನಲ್ಲಿಯೇ ನರಸಿಂಹರಾಜು ಬಾಲಕಲಾವಿದನಾಗಿ ರಂಗಭೂಮಿಗೆ ಪಾದಾರ್ಪಣೆ ಮಾಡಿದರು. ಅಲ್ಲಿಂದ ಆರಂಭವಾದ ಅವರ ಬಣ್ಣದ ಬದುಕು ಮುಂದೆ ಆನೆ ನಡೆದಿದ್ದೇ ದಾರಿ ಎನ್ನುವಂತಾಯಿತು. ನಂತರ ಗುಬ್ಬಿ ವೀರಣ್ಣ ನಾಟಕ ಕಂಪನಿಗೆ ಸೇರಿ ಹಲವು ಪಾತ್ರಗಳ ಮೂಲಕ ತಮ್ಮೊಳಗಿನ ಕಲೆಗೆ ಅಭಿವ್ಯಕ್ತಿ ನೀಡಿದರು.
ತಿಪಟೂರಿನಲ್ಲೇ ವಾಸವಾಗಿದ್ದ ನರಸಿಂಹರಾಜು ವಿವಾಹವಾದ ನಂತರ ಕನ್ನಡ ಸಿನಿರಂಗಕ್ಕೆ ಪ್ರವೇಶ ಮಾಡಿ ಬೆಂಗಳೂರಿಗೆ ತಮ್ಮ ಕುಟುಂಬವನ್ನು ಸ್ಥಳಾಂತರಿಸಿದರು. ಕನ್ನಡ ಚಿತ್ರರಂಗದಲ್ಲಿ ವರನಟ ಡಾ.ರಾಜ್‌ಕುಮಾರ್ ಅವರಿಗೆ ಸರಿಸಮನಾದ ಪಾತ್ರಗಳಲ್ಲಿ ನಟಿಸಿ ಮೆಚ್ಚುಗೆ ಗಳಿಸಿದರು. ಕನ್ನಡ ಚಿತ್ರರಂಗದಲ್ಲಿ ಹಾಸ್ಯ ಚಕ್ರವರ್ತಿಯಾಗಿ ಮೆರೆದರು.
ಇಂಥ ನಟನ ನೆನೆಪಿಗಾಗಿ ರಾಜ್ಯದ ಯಾವ ಭಾಗದಲ್ಲೂ ಏನೂ ಆಗಲಿಲ್ಲ ಎಂಬ ಕಲಾಭಿಮಾನಿಗಳ ಕೊರಗಿಗೆ 2011ರಲ್ಲಿ ಅಂದಿನ ಸರ್ಕಾರ ಹುಟ್ಟೂರಾದ ತಿಪಟೂರಿನಲ್ಲಿ ನರಸಿಂಹರಾಜು ಸ್ಮಾರಕ  ರಂಗ ಮಂದಿರ ನಿರ್ಮಾಣಕ್ಕೆ ಚಾಲನೆ ನೀಡಿತು. ಈ ಸಂದರ್ಭದಲ್ಲಿ ದಿ.ನರಸಿಂಹರಾಜು ಕುಟುಂಬ ವರ್ಗದವರು ಹಾಜರಿದ್ದು ಶಂಕುಸ್ಥಾಪನೆಗೆ ಸಾಕ್ಷಿಯಾಗಿದ್ದರು.      
ಈ ರಂಗಮಂದಿರದ ವಿನ್ಯಾಸಕಾರರ ನೀಲ ನಕ್ಷೆಯಂತೆ ಸುವ್ಯವಸ್ಥಿತ ರಂಗಮಂದಿರ ನಿರ್ಮಿಸಲು ಸುಮಾರು 4.5 ಕೋಟಿ ಅವಶ್ಯಕತೆ ಇದೆ. ಈವರಗೆ ಸರ್ಕಾರದಿಂದ 1.65 ಕೋಟಿ ಮಾತ್ರ ಬಿಡುಗಡೆಯಾಗಿದೆ. ಕಟ್ಟಡ ನಿರ್ಮಾಣದ ಹೊಣೆ ಹೊತ್ತಿರುವ ನಿರ್ಮಿತಿ ಕೇಂದ್ರದ ಅಧಿಕಾರಿಗಳ ಪ್ರಕಾರ 50 ಲಕ್ಷ ಬಿಡುಗಡೆಗೆ ಸರ್ಕಾರ ಸಮ್ಮತಿಸಿದ್ದು, ಕೆಲವೇ ತಿಂಗಳುಗಳಲ್ಲಿ ಈ ಹಣ ಬಿಡುಗಡೆಯಾಗಲಿದೆ ಎನ್ನುತ್ತಾರೆ. ಸರ್ಕಾರ ಅನುದಾನದ ಬಿಡುಗಡೆ ಮಾಡುವಲ್ಲಿ ವಿಳಂಬ ಮಾಡುತ್ತಿದೆಯೋ ಅಥವಾ ಅಧಿಕಾರಿಗಳ ಕಾರ್ಯವೈಖರಿ ಚುರುಕಿಲ್ಲವೋ ಗೊತ್ತಿಲ್ಲ. ಆದರೆ, ನಾಲ್ಕು ವರ್ಷಗಳಿಂದ ರಂಗಮಂದಿರ ಕಾಮಗಾರಿ ಮಾತ್ರ ಕುಂಟುತ್ತ ಸಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement