ರೈತರ ಕ್ಷಮೆ ಕೇಳಿದ ಅಧಿಕಾರಿಗಳು
ಕುಣಿಗಲ್: ರೈತ ಸಂಘದ ಪದಾಧಿಕಾರಿಗಳು ಹೇಮಾವತಿ ನೀರಿಗೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆಗೆ ಉದ್ದಟತನದಿಂದ ವರ್ತಿಸಿದ ನಾಲಾ ವಿಭಾಗದ ಇಇ, ಎಇಇ ರೈತರ ತೀವ್ರ ಪ್ರತಿಭಟನೆಗೆ ಮಣಿದು ಬಹಿರಂಗ ಕ್ಷಮೆಯಾಚಿಸಿದ ಘಟನೆ ಬುಧವಾರ ಎಡೆಯೂರಿನ ಕಾವೇರಿ ನೀರಾವರಿ ನಿಗಮದ ಎಡೆಯೂರು ಕಾರ್ಯನಿರ್ವಾಹಕ ಅಭಿಯಂತರ ಕಚೇರಿಯಲ್ಲಿ ನಡೆದಿದೆ.
ತಾಲೂಕು ರೈತ ಸಂಘದ(ಕೋಡಿಹಳ್ಳಿ ಚಂದ್ರಶೇಖರ್ ಬಣ) ಅಧ್ಯಕ್ಷ ಆನಂದ್ ಪಟೇಲ್ ನೇತೃತ್ವದಲ್ಲಿ ತಾಲೂಕಿನ ವಿವಿಧ ಜಲಾಶಯ ಮತ್ತು ಕೆರೆಗಳಿಗೆ ಹೇಮಾವತಿ ನೀರು ಹರಿಸಲು ಕಳೆದ ಕೆಲವು ವರ್ಷಗಳಿಂದಲೂ ಜಿಲ್ಲಾಡಳಿತ, ಜನಪ್ರತಿನಿಧಿಗಳು, ನೀರಾವರಿ ಇಲಾಖೆ ಕ್ರಮಕೈಗೊಳ್ಳದ ಕಾರಣ ತಾಲೂಕಿನ ಪಾಲಿನ ಹೇಮಾವತಿ ನೀರು ಇತರೆ ತಾಲೂಕುಗಳ ಪಾಲಾಗುತ್ತಿದೆ. ಈ ಬಾರಿ ಅಗತ್ಯ ಕ್ರಮಕೈಗೊಂಡು ನಿಗದಿತ ಪ್ರಮಾಣದಲ್ಲಿ ನೀರು ಹರಿಸದಿದ್ದಲ್ಲಿ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಗೆ ಕಲ್ಲಿನ ಗೋಡೆಕಟ್ಟಿ ಪ್ರತಿಭಟಿಸುವುದಾಗಿ ಎಚ್ಚರಿಸಿ ತಹಸೀಲ್ದಾರ್ ಶಂಭುಲಿಂಗಯ್ಯ ಅವರಿಗೆ ಮನವಿ ಸಲ್ಲಿಸಿದರು. ಮನವಿಗೆ ಸ್ಪಂದಿಸಿದ ತಹಸೀಲ್ದಾರ್, ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಿ ರೈತ ಸಂಘಧ ಪದಾಧಿಕಾರಿಗಳು ಎಡೆಯೂರು ನಾಲಾವಲಯದ ಕಾರ್ಯನಿರ್ವಾಹಕ ಅಭಿಯಂತರ ಕಚೇರಿಗೆ ಮನವಿ ನೀಡಲು ತೆರಳಿದ್ದರು. ಕಚೇರಿಯಲ್ಲಿದ್ದ ಇಇ ವರದಯ್ಯ, ರೈತ ಸಂಘದ ಪದಾಧಿಕಾರಿಗಳು ಮಾರ್ಕೋನಹಳ್ಳಿ, ಮಂಗಳಾ ಜಲಾಶಯಕ್ಕೆ ಹೇಮಾವತಿ ನೀರು ಹರಿಸಲು ಕೈಗೊಂಡಿರುವ ಕ್ರಮದ ಬಗ್ಗೆ ಪ್ರಶ್ನಿಸಿದುರ. ಆಗ ಇಇ ಮತ್ತು ಸ್ಥಳದಲ್ಲಿದ್ದ ಎಇ ಹಾರಿಕೆ ಉತ್ತರ ನೀಡಿ ಮನವಿ ನೀಡಿ ಹೋಗುವಂತೆ ಉದ್ದಟತನದಿಂದ ವರ್ತಿಸಿದ್ದಾರೆ. ಇದರಿಂದ ರೋಸಿ ಹೋದ ಪದಾಧಿಕಾರಿಗಳು ಕಚೇರಿಯ ಮುಖ್ಯ ಬಾಗಿಲಿಗೆ ಬೀಗ ಜಡಿದು ಇಲಾಖೆ ವಿರುದ್ಧ ಘೋಷಣೆ ಕೂಗಿದರು. ರೈತರ ಪ್ರತಿಭಟನೆಗೆ ಮಣಿದ ಅಧಿಕಾರಿಗಳು ನಂತರ ರೈತ ಸಂಘದ ಪದಾಧಿಕಾರಿಗಳನ್ನು ಚರ್ಚೆಗೆ ಆಹ್ವಾನಿಸಿದರು.
ಇಇ ಮತ್ತು ಎಇ ಅವರೊಂದಿಗೆ ತೀವ್ರ ವಾಗ್ಯುದ ನಡೆಸಿದ ರೈತ ಸಂಘದ ಪದಾಧಿಕಾರಿಗಳು, ಅಧಿಕಾರಿಗಳ ಕ್ರಮ ಖಂಡಿಸಿ ಅವರ ಕೊಠಡಿಯಲ್ಲೆ ಘೋಷಣೆ ಕೂಗಿದರು. ಇದರಿಂದ ಮೆತ್ತಗಾದ ಎಇ ಜಯರಾಜ್ ಮತ್ತು ಇಇ ವರದಯ್ಯ, ಕೆಲಸದ ಒತ್ತಡ ಹಾಗೂ ಸಮರ್ಪಕ ಮಾಹಿತಿ ಕೊರತೆಯಿಂದ ನಮ್ಮಿಂದ ತಪ್ಪಾಗಿದೆ. ಆದ್ದರಿಂದ ಕ್ಷಮೆಯಾಚಿಸುತ್ತೇವೆ ಎಂದು ಬಹಿರಂಗ ಕ್ಷಮೆಯಾಚಿಸಿದ್ದರಿಂದ ಧರಣಿ ಕೈಬಿಟ್ಟ ಪದಾಧಿಕಾರಿಗಳು ಮನವಿ ಸಲ್ಲಿಸಿ ಸೂಕ್ತ ನೀರು ಹರಿಸುವಂತೆ ಆಗ್ರಹಿಸಿದರು. ಉಪಾಧ್ಯಕ್ಷ ನಿಡಸಾಲೆ ಪ್ರಸಾದ್, ನಗರಾಧ್ಯಕ್ಷ ರೇಣುಕಪ್ಪ, ಪ್ರಮುಖರಾದ ಶಿವಣ್ಣ, ಪಾರ್ಥಸಾದಿ, ಕೃಷ್ಣಪ್ಪ, ಶ್ರಿಧರ, ರಮೇಶ್, ವೆಂಕಟೇಶ ಹಾಗೂ ಇತರರು ಇದ್ದರು.