ಕುಣಿಗಲ್: ಅಕ್ರಮ ಮರಳು ಸಾಗಣೆ ಮಾಡುತ್ತಿರುವ ಎತ್ತಿನಗಾಡಿಗಳ ವಿರುದ್ಧ ಕ್ರಮಕೈಗೊಳ್ಳಲು ಪೊಲೀಸರು ಮುಂದಾಗಿರುವುದನ್ನು ಖಂಡಿಸಿ ಎತ್ತಿನಗಾಡಿ ಸಮೇತ ಠಾಣೆ ಮುಂದೆ ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.
ಈ ಸಂದರ್ಭದಲ್ಲಿ ಪೊಲೀಸ್ ಠಾಣೆ ಮುಂದೆ ಮರಳು ಸಾಗಣೆ ಪರ-ವಿರೋಧ ವಾಗ್ವಾದ ನಡೆದು ಕೆಲಕಾಲ ಗೊಂದಲದ ಸ್ಥಿತಿ ನಿರ್ಮಾಣವಾಯಿತು. ತಾಲೂಕಿನ ಬೇಗೂರು ಕೆರೆಯಲ್ಲಿ ಅಕ್ರಮ ಮರಳುಗಾರಿಕೆ ಹೆಚ್ಚಿದ್ದು, ಕೆಲ ಎತ್ತಿನ ಗಾಡಿಯವರು ಮರಳನ್ನು ಕೆರದಡದಲ್ಲಿ ಶೇಖರಿಸಿ, ಲಾರಿಗಳ ಮೂಲಕ ಸಾಗಣೆ ಮಾಡುವ ಜಾಲದಲ್ಲಿ ತೊಡಗಿದ್ದರು. ಈ ಬಗ್ಗೆ ವ್ಯಾಪಕ ದೂರುಗಳ ಹಿನ್ನೆಲೆಯಲ್ಲಿ ತಹಸೀಲ್ದಾರ್ ಸೂಚನೆ ಮೇರೆಗೆ ಶುಕ್ರವಾರ ಪೊಲೀಸರು, ದಾಳಿ ನಡೆಸಿ ಅಕ್ರಮ ಮರಳು ಎತ್ತುವಳಿಯಲ್ಲಿ ನಿರತರಾಗಿದ್ದ ಎತ್ತಿನಗಾಡಿಯವರನ್ನು ಠಾಣೆಗೆ ಕರೆತಂದರು. ಇದನ್ನು ವಿರೋಧಿಸಿದ ಇತರೆ ಎತ್ತಿನಗಾಡಿಯವರು ಠಾಣೆಸುತ್ತ ಎತ್ತಿನಗಾಡಿಗಳನ್ನು ನಿಲ್ಲಿಸಿ ಪೊಲೀಸರ ವಿರುದ್ಧ ಪ್ರತಿಭಟನೆಗೆ ಮುಂದಾದರು.
ಎತ್ತಿನಗಾಡಿ ಮಾಲೀಕ ಭೈರಪ್ಪ ಮಾತನಾಡಿ, ಕಳೆದ ಹಲವು ದಿನಗಳಿಂದ ಪೊಲೀಸ್ ಪೇದೆಗಳು ಸಾಹೇಬರಿಗೆ ಕೊಡಬೇಕೆಂದು ಗಾಡಿಯೊಂದಕ್ಕೆ ನೂರು ರುಪಾಯಿ ವಸೂಲಿ ಮಾಡುತ್ತಿದ್ದಾರೆ. ಆದರೆ ಈಗ್ಗೆ ಮೂರು ದಿನಗಳಿಂದ ಮುನ್ನೂರು ಕೇಳಿದ್ದು, ಕೊಡದ ಕಾರಣ ಇಲ್ಲಿಗೆ ಕರೆತಂದಿದ್ದಾರೆ ಎಂದು ಆರೋಪಿಸಿದರು.
ಗ್ರಾಮಸ್ಥರಾದ ಪ್ರಕಾಶ್, ನಾಗರಾಜು, ವೆಂಕಟೇಶ್ ಇತರರು ಸಿಪಿಐ ಧರ್ಮೇಂದ್ರ, ಪಿಎಸೈ ಹರೀಶ ಅವರೊಂದಿಗೆ ಪೊಲೀಸರು ಮರಳು ತುಂಬಿದ ವಾಹನಗಳಿಂದ ರಾಜರೋಷವಾಗಿ ಹಣ ವಸೂಲಿ ಮಾಡುತ್ತಿದ್ದಾರೆ. ಅಧಿಕಾರಿಗಳು ಕಂಡೂ ಕಾಣದಂತಿದ್ದಾರೆಂದು ಕಿಡಿ ಕಾರಿದರು. ಸಿಪಿಐ ಆಕ್ಷೇಪ ವ್ಯಕ್ತಪಡಿಸಿ, ಹಣಕ್ಕೆ ಬೇಡಿಕೆ ಇಟ್ಟ ಸಿಬ್ಬಂದಿ ಹೆಸರೇಳಿ ಸ್ಥಳದಲ್ಲೆ ಅಮಾನತು ಮಾಡುವುದಾಗಿ ತಿಳಿಸಿದಾಗ, ಆರೋಪ ಮಾಡಿದವರು ಮೌನವಹಿಸಿದರು.
ಮಧ್ಯ ಪ್ರವೇಶಿಸಿದ ರೈತಸಂಘದ ಗೌರವಾಧ್ಯಕ್ಷ ಕಪಿನಿಪಾಳ್ಯ ರಮೇಶ್, ಅಕ್ರಮ ಮರಳು ಸಾಗಣೆಗೆ ರೈತರು ಬಲಿಯಾಗಿದ್ದಾರೆ. ಕೂಡಲೇ ಈ ದಂಧೆಗೆ ಕಡಿವಾಣ ಹಾಕುವಂತೆ ಆಗ್ರಹಿಸಿದಾಗ, ಗಾಡಿ ಮಾಲೀಕರು ಆಕ್ಷೇಪಿಸಿ ವಾಗ್ವಾದ್ಕಕೆ ಇಳಿದರು.
ಸಿಪಿಐ ಧರ್ಮೇಂದ್ರ, ತಹಸೀಲ್ದಾರ್ರಿಂದ ಅನುಮತಿ ಪಡೆದು ಮರಳು ಎತ್ತುವಳಿ ಮಾಡಿ, ಅನುಮತಿ ಇಲ್ಲದೆ ಮರಳು ಸಂಗ್ರಹಿಸಿದಲ್ಲಿ ಕ್ರಮ ಜರುಗಿಸುವ ಎಚ್ಚರಿಕೆ ನೀಡಿದರು.
ತಾಪಂ ಪ್ರಭಾರ ಅಧ್ಯಕ್ಷ ಜಗದೀಶ್ ಮಾತನಾಡಿ, ತಾಲೂಕಿನಲ್ಲಿ ಕಂದಾಯ, ಪೊಲೀಸ್ ಇಲಾಖೆಗಳ ಸಮನ್ವಯದ ಕೊರತೆಯಿಂದ ಅಕ್ರಮ ಮರಳು ದಂಧೆ ನಿಯಂತ್ರಿಸಲಾಗಿಲ್ಲ. ಎತ್ತಿನಗಾಡಿಯವರನ್ನು ಶಿಕ್ಷಿಸುವುದಕ್ಕಿಂತ ಜೆಸಿಬಿ, ಲಾರಿ, ಟ್ರ್ಯಾಕ್ಟರ್ಗಳನ್ನು ಬಳಸುತ್ತಿರುವವರ ವಿರುದ್ಧ ಕ್ರಮಕೈಗೊಳ್ಳುವಂತೆ ಆಗ್ರಹಿಸಿದರು. ಕೆಲಕಾಲ ಪರವಿರೋಧ ಚರ್ಚೆ ನಂತರ ಸಿಪಿಐ, ವಶಕ್ಕೆ ಪಡೆದಿರುವ ಎತ್ತಿನಗಾಡಿಯವರನ್ನು ಎಚ್ಚರಿಕೆ ನೀಡಿ ಬಿಡುವ ಭರವಸೆ ನೀಡಿದ ಮೇರೆಗೆ ಪರಿಸ್ಥಿತಿ ತಿಳಿಗೊಂಡಿತು.