ಕೇಬಲ್ ಗುಂಡಿ ಮುಚ್ಚಿಸಿದ ಪಿಡಬ್ಲ್ಯೂಡಿ
ಹುಳಿಯಾರು: ಗ್ರಾಮ ಪಂಚಾಯ್ತಿಗೆ ಬ್ರಾಡ್‌ಬ್ಯಾಂಡ್ ಸಂಪರ್ಕ ಕಲ್ಪಿಸಲು ಕೇಬಲ್ ಸುಮಾರು ಎರಡು ಕಿಮೀಗೂ ಹೆಚ್ಚು ದೂರ ತೆಗೆದಿದ್ದ ಗುಂಡಿಯನ್ನು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಮುಚ್ಚಿಸಿದ ಘಟನೆ ಶನಿವಾರ ಪೊಚಗಟ್ಟೆ-ಬರಕನಹಾಳ್ ರಸ್ತೆಯಲ್ಲಿ ನಡೆದಿದೆ.
ಪ್ರತಿ ಗ್ರಾಪಂನಲ್ಲಿಯೂ ಎಲ್ಲಾ ದಾಖಲೆಗಳನ್ನು ಈ-ಸ್ವತ್ತಿನಡಿ ನೀಡಬೇಕಾಗಿರುವುದು ಅಗತ್ಯ ಪ್ರತಿ ಪಂಚಾಯ್ತಿಯೂ ಬ್ರಾಡ್‌ಬ್ಯಾಂಡ್ ಇಂಟರ್‌ನೆಟ್ ಸೇವೆ ಅಗತ್ಯವಾಗಿದ್ದು, ಇದೀಗ ಎಲ್ಲೆಡೆ ನೆಟ್ ಸೇವೆಗೆ ದೂರಸಂಪರ್ಕ ಇಲಾಖೆ ಮುಂದಾಗಿದೆ.
ಬರಕನಹಾಳ್ ಗ್ರಾ.ಪಂ. ಕಚೇರಿಗೆ ಇಂಟರ್‌ನೆಟ್ ಸೌಲಭ್ಯಕ್ಕಾಗಿ ಕಳೆದ ಮೂರು ದಿನಗಳಿಂದ ಜೆ.ಸಿ.ಬಿ, ಹಾಗೂ ಹಿಟ್ಯಾಜಿ ಮೂಲಕ ರಸ್ತೆ ಪಕ್ಕ ಕಾಲುವೆ ತೆಗೆಯಲಾಗುತ್ತಿತ್ತು. ಟಾರ್‌ರ ಸ್ತೆಯ ಪಕ್ಕದಲ್ಲೇ ತೆಗೆಯುತ್ತಿರುವುದರಿಂದ ರಸ್ತೆಗೆ ಹಾನಿಯಾಗಲಿದೆ ಎಂದು ದೂರು ಕೇಳಿ ಬಂದ ಹಿನ್ನಲೆಯಲ್ಲಿ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದರು. ಪೂರ್ವಾನುಮತಿಯಿಲ್ಲದೆ ಕಾಮಗಾರಿ ಕೈಗೊಂಡು ನಿಯಮ ಉಲ್ಲಂಘಿಸಲಾಗಿದೆ ಎಂದು ತೆಗೆದಿದ್ದ ಕಾಲುವೆಯನ್ನು ಕೂಡಲೇ ಮುಚ್ಚುವಂತೆ ಸಹಾಯಕ ಎಂಜಿನಿಯರ್ ಚಂದ್ರಶೇಖರ್ ಸೂಚಿಸಿದರು.
ಈ ಬಗ್ಗೆ ಹುಳಿಯಾರಿನ ದೂರಸಂಪರ್ಕ ಅಧಿಕಾರಿಗಳನ್ನು ಸಂಪರ್ಕಿಸಲಾಗಿ, ಈ ಬಗ್ಗೆ ತಮಗೂ ಸರಿಯಾದ ಮಾಹಿತಿ ಇಲ್ಲ ಎಂದು ಉತ್ತರಿಸಿದ್ದಾರೆ. ನಿಯಮ ಪಾಲಿಸದೆ ಬೇಜವಾಬ್ದಾರಿತನ ತೋರಿರುವ ಅಧಿಕಾರಿಗಳ ವರ್ತನೆ ಬಗ್ಗೆ ಸಾರ್ವಜನಿಕರು ತೀವ್ರ ಅಸಮಧಾನ ವ್ಯಕ್ತಪಡಿಸಿದ್ದಾರೆ