ಅಂಗನವಾಡಿಯ ಕಾರ್ಯಕರ್ತೆಯರಿಗೆ ತರಬೇತಿ
ತುಮಕೂರು: ತಿಪಟೂರು ತಾಲೂಕು ಬಿದರೆಗುಡಿ ಕಾವಲ್ ಕೃಷಿ ವಿಜ್ಞಾನ ಕೇಂದ್ರದಿಂದ ಇತ್ತೀಚೆಗೆ ಅಂಗನವಾಡಿ ಕಾರ್ಯಕರ್ತೆಯರಿಗೆ ವಿವಿಧ ತರಬೇತಿ ಹಮ್ಮಿಕೊಳ್ಳಲಾಗಿತ್ತು. ಮೂರು ದಿನಗಳ ತರಬೇತಿಯಲ್ಲಿ ಕೇಂದ್ರದ ವಿಜ್ಞಾನಿ ಡಾ. ರೂಪಾ ಬಿ. ಪಾಟೀಲ್ ಪೌಷ್ಟಿಕ ರೊಟ್ಟಿ ತಯಾರಿಕೆ, ರಾಗಿ ಮಾಲ್ಟ್, ರಾಗಿ ಬಿಸ್ಕೆಟ್ ತಯಾರಿಕೆ ಕುರಿತು ಪ್ರಾತ್ಯಕ್ಷಿಕೆ ಮೂಲಕ ತರಬೇತಿ ನೀಡಿದರು. ರೂಪಾ ಅವರೊಂದಿಗೆ ಡಾ.ಎಂ.ಎಚ್. ಶಂಕರ್, ತಾಂತ್ರಿಕ ಸಿಬ್ಬಂದಿ ಅರ್ಜುಮನ್ ಬಾನು, ಕೋಟೆಹಳ್ಳಿ ಸರ್ಕಾರಿ ಆಸ್ಪತ್ರೆಯ ಡಾ. ಸುಮನ ಮತ್ತಿತರ ವಿಜ್ಞಾನಿಗಳು ಆರೋಗ್ಯ ಪೋಷಕಾಂಶಗಳ ಮಹತ್ವ, ಮಕ್ಕಳ ಆರೋಗ್ಯದಲ್ಲಿ ಆಯುರ್ವೇದ ಔಷಧಿಗಳ ಪಾತ್ರ, ಆರೋಗ್ಯದಲ್ಲಿ ಸಮತೋಲನ ಆಹಾರದ ಪಾತ್ರ, ಸಮುದಾಯದ ಸಹಭಾಗಿತ್ವದಲ್ಲಿ ಅಂಗನವಾಡಿಯ ಪಾತ್ರ, ಮಗುವಿನ ಆರೋಗ್ಯ ರಕ್ಷಣೆ, ಬೆಳವಣಿಗೆ ಮತ್ತು ಪೋಷಣೆ, ಮೊಳಕೆ ಕಟ್ಟಿದ ಹೆಸರು ಕಾಳು ಉಸಲಿ, ಪೌಷ್ಟಿಕ ರೊಟ್ಟಿ ತಯಾರಿಕೆ, ರೋಗ ನಿರೋಧಕ ಲಸಿಕೆ ನೀಡಿಕೆ, ಕುಟುಂಬ ನಿವಾರಣೆಯಲ್ಲಿ ಮಹಿಳೆಯರ ಪಾತ್ರ ಕುರಿತು ಮಾಹಿತಿ ಹಾಗೂ ತರಬೇತಿ ನೀಡಲಾಯಿತು.