ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ನೆಪ ಮಾತ್ರಕ್ಕೆ ನಡೆಯುತ್ತವೆಯೇ ಗ್ರಾಮಸಭೆ?

Rashmi Kasaragodu
Updated On : 30 Jul 2014, 11:12 am

ಹುಳಿಯಾರು: ಸರ್ಕಾರದ ಸವಲತ್ತಿಗಾಗಿ ಅರ್ಹ ಫಲಾನುಭವಿಗಳನ್ನು ಗುರ್ತಿಸಲು ನಡೆಯುವ ವಾರ್ಡ್ ಸಭೆ ಹಾಗೂ ಗ್ರಾಮಸಭೆಗಳಲ್ಲಿ ಜನರು ಹಾಗೂ ಜನಪ್ರತಿನಿಧಿಗಳು ಇಲ್ಲದೆ ನೆಪಮಾತ್ರಕ್ಕೆ ಒಬ್ಬಿಬ್ಬರ ಹಾಜರಾತಿಯಲ್ಲಿ ನಡೆಯುವ ಪರಿಸ್ಥಿತಿ ನಿರ್ಮಾಣವಾಗಿದೆ.
ಈಗಾಗಲೇ ಹೋಬಳಿಯ ಹಲವು ಗ್ರಾಪಂಗಳಲ್ಲಿ ಇಂತಹ ಸಭೆಗಳು ಬೇಕಾಬಿಟ್ಟಿಯಾಗಿ ನಡೆದಿವೆ. ಇದಕ್ಕೆ ಸಾಕ್ಷಿ ಎನ್ನುವಂತೆ ಶನಿವಾರದಂದು ಕೆಂಕೆರೆ ಗ್ರಾಪಂನಲ್ಲಿ ನಡೆದ ಗ್ರಾಮ ಸಭೆಯಲ್ಲಿ ಹದಿನೆಂಟು ಸದಸ್ಯರ ಪೈಕಿ ಮೂರ್ನಾಲ್ಕು ಮಂದಿ, ಜಿಲ್ಲಾ ಹಾಗೂ ತಾ.ಪಂ. ಸದಸ್ಯರ ಸುಳಿವೇ ಇಲ್ಲದಿರುವುದು ದುರ್ದೈವವಾಗಿದೆ.
ಹೋಬಳಿ ಕೆಂಕೆರೆ ಗ್ರಾಪಂಗೆ 2014-15ನೇ ಸಾಲಿನ ಇಂದಿರಾ ಆವಾಜ್ ಯೋಜನೆಯಡಿ ಮಂಜೂರಾಗಿದ್ದ ಮನೆಗಳನ್ನು ಹಂಚಲು ಫಲಾನುಭವಿಗಳ ಆಯ್ಕೆಗಾಗಿ ಶನಿವಾರ  ಗ್ರಾಮ ಸಭೆ ಅಯೋಜಿಸಲಾಗಿತ್ತು. ಒಂದೆಡೆ ಸದಸ್ಯರೇ ಗೈರಾಗಿದ್ದರು. ಮತ್ತೊಂದೆಡೆ ಗ್ರಾಮಸ್ಥರ ಅನುಪಸ್ಥಿತಿಯೂ ಎದ್ದುಕಾಣುತಿತ್ತು.
ಪ್ರಚಾರದ ಕೊರತೆ: ಗ್ರಾಮ ಸಭೆ ನಡೆಯುವುದರ ಬಗ್ಗೆ ಹೆಚ್ಚು ಪ್ರಚಾರವಿಲ್ಲ ಎಂಬುದಕ್ಕೆ ಸಭೆಗೆ ಆಗಮಿಸಿದ್ದ ಬೆರಳೆಣಿಯಷ್ಟು ಸಾರ್ವಜನಿಕರು ಸಾಕ್ಷಿಯಾಗಿದ್ದರು.
ನಿರಾಸಕ್ತಿ: ತಮ್ಮಿಂದ ಅರ್ಜಿ ಪಡೆಯುವ ಸಲುವಾಗಿ ಈಗ ನೆಪಮಾತ್ರಕ್ಕೆ ಗ್ರಾಮ ಸಭೆ ಮಾಡುತ್ತಿದ್ದು, ನಂತರ ತಮಗೆ ಬೇಕಾದವರಿಗೆ ಮನೆ ಹಂಚಿಕೆ ಮಾಡುತ್ತಾರೆ. ಈ ಹಿಂದೆ ನಿರ್ಮಿಸಿಕೊಂಡಿರುವ ಅನೇಕ ಶೌಚಾಲಯಗಳ ಬಿಲ್ ಸಂದಾಯ ಮಾಡದೇ ಸತಾಯಿಸುತ್ತಿದ್ದಾರೆಂದು ಗ್ರಾಮಸ್ಥರಾದ ಉದಯ್ ಕುಮಾರ್ ಹೇಳುತ್ತಾರೆ.
ಸವಲತ್ತು ಯಾರಿಗೆ ಕೊಡಬೇಕು ಎಂಬುದನ್ನು ಸದಸ್ಯರು ಮೊದಲೇ ನಿರ್ಧರಿಸಿಕೊಂಡಿರುತ್ತಾರೆ. ನೆಪಮಾತ್ರಕ್ಕೆ ಇಂತಹ ಸಭೆಗಳು ನಡೆಯುತ್ತವಾದ್ದರಿಂದ ಸಭೆಗೆ ಹೋಗುವುದರಲ್ಲಿ ಅರ್ಥವಿಲ್ಲ ಎನ್ನುತ್ತಾರೆ ಮಹೇಶ್.
ಪ್ರಸಕ್ತ ಸಾಲಿನಲ್ಲಿ ಎಸ್‌ಸಿ-5, ಎಸ್‌ಟಿ- 2, ಅಲ್ಪಸಂಖ್ಯಾತರಿಗೆ- 1, ಜನರಲ್‌ಗೆ - 4. ಹೀಗಾಗಿ ಒಟ್ಟು 12 ಮನೆಗಳಿಗೆ ಅನುದಾನ ಬಂದಿದೆ. ಈ ಸಭೆಯಲ್ಲಿ ಫಲಾನುಭವಿಗಳಿಂದ ಅರ್ಜಿ ಪಡೆದಿದ್ದು, ಸರ್ವ ಸದಸ್ಯರ ಸಭೆಯಲ್ಲಿ ಅರ್ಹ ಫಲಾನುಭವಿಗಳನ್ನು ಗುರ್ತಿಸಿ ಅವರಿಗೆ ಮನೆ ಅನುದಾನ ನೀಡಲಾಗುತ್ತದೆ. ಯಾವುದೇ ಗೊಂದಲಕ್ಕೆ ಎಡೆಮಾಡಿಕೊಡುವುದಿಲ್ಲ ಎನ್ನುತ್ತಾರೆ ಗ್ರಾ.ಪಂ. ಅಧ್ಯಕ್ಷೆ ಪೂರ್ಣಿಮಾ.
ಈ ಸಂದರ್ಭದಲ್ಲಿ ಉಪಾಧ್ಯಕ್ಷೆ ರೇಣುಕ, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ರಾಜೇಂದ್ರ, ಪಿಡಿಒ ಮಹಬೂಬ್ ಸಾಬ್, ಸದಸ್ಯರಾದ ಬಸವರಾಜು, ರಾಧಾ, ಬಿಲ್ ಕಲೆಕ್ಟರ್ ಜಯಣ್ಣ, ಯುವರಾಜ್ ಸೇರಿದಂತೆ ಕೆಲವೇ ಸಾರ್ವಜನಿಕರು ಉಪಸ್ಥಿತರಿದ್ದರು.

 


ಸರ್ಕಾರದ ವತಿಯಿಂದ ಒಂದು ಗ್ರಾಮಕ್ಕೆ ಸಾಮಾನ್ಯ ಅಥವಾ ಮತ್ತಾವುದೇ ವರ್ಗಕ್ಕೆ ಕೇವಲ ಎರಡು ಅಥವಾ ಮೂರು ಮನೆಗಳನ್ನು ಮಂಜೂರಾಗಿರುತ್ತವೆ. ಆದರೆ ಆಕಾಂಕ್ಷಿಗಳು ಹತ್ತಕ್ಕೂ ಹೆಚ್ಚು ಜನರಿರುತ್ತಾರೆ. ಇದರಿಂದ ನಾವು ಹೋಗಿ ಯಾರೋ ಒಬ್ಬ ಅರ್ಹರನ್ನು ಆಯ್ಕೆ ಮಾಡಿದರೆ ಉಳಿದವರ ನಿಂದನೆಗೆ ಗುರಿಯಾಗಬೇಕಾಗುತ್ತದೆ.
 ಕೆಂಕೆರೆ ನವೀನ್, ತಾ.ಪಂ. ಸದಸ್ಯ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement