ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಒಡೆದ ನಾಲೆ ವೀಕ್ಷಿಸಿದ ಶಾಸಕ

Rashmi Kasaragodu
Updated On : 1 Aug 2014, 1:24 am

ತುಮಕೂರು: ಜಿಲ್ಲೆಗೆ ಹೇಮಾವತಿ ನೀರು ಹರಿಸುವ ನಾಲೆ ಚನ್ನರಾಯಪಟ್ಟಣ ಬಳಿ ಒಡೆದು ಹೋಗಿ, ನೀರು ಪೂರೈಕೆ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ತುಮಕೂರು ನಗರ ಶಾಸಕ ಡಾ. ರಫೀಕ್ ಅಹಮದ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ನಾಗಸಮುದ್ರ ಗ್ರಾಮದ ಬಳಿ 62 ನೇ ಕಿ.ಮೀ.ನಲ್ಲಿ ನಾಲೆ ಒಡೆದಿದ್ದು, ದುರಸ್ತಿ ಕಾಮಗಾರಿ ಆರಂಭವಾಗಿದೆ. ಏರಿಯ ಮಣ್ಣು ಕುಸಿತದಿಂದ ಬಿರುಕು ಉಂಟಾಗಿ ನೀರು ಸೋರಿಕೆಯಾಗಿ, ಒತ್ತಡದಿಂದ ನಾಲೆ ಒಡೆದಿದೆ ಎಂದು ಸ್ಥಳದಲ್ಲಿದ್ದ ಚನ್ನರಾಯಪಟ್ಟಣ ವಿಭಾಗದ ನಾಲಾವಲಯದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಚಿಕ್ಕಮಲ್ಲಯ್ಯ ಶಾಸಕರಿಗೆ ತಿಳಿಸಿದರು.
ಬುಧವಾರದಿಂದ ದುರಸ್ತಿ ಕಾರ್ಯ ಆರಂಭಗೊಂಡಿದ್ದು, ಒಂದು ವಾರದಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗುವುದು. ಅಲ್ಲಿವರೆಗೆ ತಾತ್ಕಾಲಿಕವಾಗಿ ನೀರು ಸರಬರಾಜು ಸ್ಥಗಿತಗೊಳಿಸಲಾಗಿದೆ ಎಂದು ಇಂಜಿನಿಯರ್ ಹೇಳಿದರು.
ಕೆಲವು ಕಿಡಿಗೇಡಿಗಳಿಂದ ನಾಲೆ ಒಡೆದಿದೆ ಎಂಬ ವದಂತಿ ಹಿನ್ನೆಲೆಯಲ್ಲಿ ಅಧಿಕಾರಿಗಳಿಂದ ಮಾಹಿತಿ ಪಡೆದ ಬಳಿಕ ಮಾತನಾಡಿದ ಶಾಸಕರು, ಈ ಘಟನೆಯು ಮೇಲ್ನೋಟಕ್ಕೆ ಕಿಡಿಗೇಡಿಗಳ ಕೃತ್ಯ ಎನಿಸುತ್ತಿಲ್ಲ. ಆದರೂ ನಾಲೆ ಒಡೆದ ಪ್ರಕರಣದ ಬಗ್ಗೆ ಮುಖ್ಯಮಂತ್ರಿಗಳು ತನಿಖೆಗೆ ಆದೇಶಿಸಿದ್ದಾರೆ. ವರದಿ ಬಂದ ನಂತರ ಸತ್ಯಾಂಶ ತಿಳಿಯಲಿದೆ ಎಂದರು. ಒಂದು ವಾರದಲ್ಲಿ ಕಾಮಗಾರಿ ಪೂರ್ಣಗೊಳಿಸಿ, ನೀರು ಹರಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದು, ಜಿಲ್ಲೆಯ ಜನ ಆತಂಕಪಡುವ ಅಗತ್ಯವಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲೆಯ ಶಾಸಕರೊಂದಿಗೆ ಚರ್ಚಿಸಿ, ಜಿಲ್ಲೆಗೆ ಬರಬೇಕಾದ ಪೂರ್ಣ ಪ್ರಮಾಣದ ನೀರನ್ನು ಹರಿಸಲು ಕ್ರಮ ತೆಗೆದುಕೊಳ್ಳುವುದಾಗಿ ಡಾ. ರಫೀಕ್ ಅಹಮದ್ ತಿಳಿಸಿದರು.
ನಾಲೆಯ ಬಳಿ ತೆರಳುವ ಸಂದರ್ಭದಲ್ಲಿ ಶಾಸಕ ಡಾ. ರಫೀಕ್ ಅಹಮದ್ ಅವರು ಚನ್ನರಾಯಪಟ್ಟಣ ಶಾಸಕ ಬಾಲಕೃಷ್ಣ ಅವರೊಂದಿಗೆ ಸಮಾಲೋಚನೆ ನಡೆಸಿ, ನಾಲಾ ದುರಸ್ತಿ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಲು ಸಹಕರಿಸಲು ಕೋರಿದರು. ಹೇಮಾವತಿ ಜಲಾಶಯ ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗುತ್ತಿದ್ದು, ಜಲಾಶಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಸಂಗ್ರಹವಾಗುತ್ತಿದೆ. ಹಾಗಾಗಿ ತುಮಕೂರು ಜಿಲ್ಲೆಗೆ ನೀರು ಹರಿಸಲು ಯಾವುದೇ ನೀರಿನ ಕೊರತೆ ಇರುವುದಿಲ್ಲ. ಸಕಾಲದಲ್ಲಿ ನೀರು ಹರಿಸಲು ಕ್ರಮ ತೆಗೆದುಕೊಳ್ಳುವಂತೆ ಸಿಎಂ ಅವರನ್ನು ಕೋರುವುದಾಗಿ ತಿಳಿಸಿದರು. ಸುಮಾರು 35-40 ವರ್ಷಗಳ ಹಿಂದೆ ನಿರ್ಮಿಸಲಾದ ಹೇಮಾವತಿ ನಾಲೆ ಬಹುತೇಕ ಕಡೆ ಶಿಥಿಲಗೊಂಡಿದ್ದು, ನೀರು ಹರಿಸಿದಾಗ ನಾಲೆ ಒಡೆಯುವಂತಹ ಅವಘಡಗಳು ಸಂಭವಿಸುವ ಸಾಧ್ಯತೆ ಇದೆ. ನಾಲೆಯ ನೀರು ಹರಿಯುವ ಸಾಮರ್ಥ್ಯ ಕಡಿಮೆ ಇದೆ. ಹೀಗಾಗಿ ನಾಲೆ ಆಧುನೀಕರಣಕ್ಕೆ ಸರ್ಕಾರ ಕ್ರಿಯಾಯೋಜನೆ ರೂಪಿಸಿದ್ದು, ಶೀಘ್ರವಾಗಿ ಕಾಮಗಾರಿ ಕೈಗೆತ್ತಿಕೊಳ್ಳಬೇಕೆಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡುವುದಾಗಿ ಡಾ. ರಫೀಕ್ ಅಹಮದ್ ತಿಳಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಆಟೋರಾಜು, ಅಮ್ಜದ್, ರವಿ ಸೇರಿದಂತೆ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement