ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಮಹಿಳೆಯರು, ಮಕ್ಕಳ ಮೇಲಿನ ಅತ್ಯಾಚಾರ ಖಂಡಿಸಿ ಪ್ರತಿಭಟನೆ

Rashmi Kasaragodu
Updated On : 1 Aug 2014, 1:25 am

ತುಮಕೂರು: ಮಹಿಳೆಯರ ಮೇಲಿನ ದೌರ್ಜನ್ಯ, ಮುಗ್ಧ ಮಕ್ಕಳ ಮೇಲೆ ನಡೆಯುತ್ತಿರುವ ಅತ್ಯಾಚಾರ ಪ್ರಕರಣಗಳನ್ನು ಖಂಡಿಸಿ, ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿ ಎಸ್ಎಫ್ಐ, ಡಿವೈಎಫ್ಐ, ಮಹಿಳಾ ದೌರ್ಜನ್ಯ ವಿರೋಧಿ ಸಮಿತಿ ಹಾಗೂ ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ತುಮಕೂರಿನಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.
ಬೃಹತ್ ಮೆರವಣಿಗೆ ಮೂಲಕ ನಗರದ ಟೌನ್ ಹಾಲ್ ಸರ್ಕಲ್ ಬಳಿ ಸೇರಿ, ಬೋಧಿ ಮಂಡಲ ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳು ಮಹಿಳಾ ಸಂಘಟನೆಗಳೊಂದಿಗೆ ಮಾನವ ಸರಪಳಿಯನ್ನು ರಚಿಸಿ ಅತ್ಯಾಚಾರಿಗಳ ವಿರುದ್ಧ ಘೋಷಣೆಗಳನ್ನು ಕೂಗಿದರು. ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ವರದಕ್ಷಿಣೆ ವಿರೋಧಿ ವೇದಿಕೆಯ ಅನ್ನಪೂರ್ಣ ವೆಂಕಟನಂಜಪ್ಪ, ಬಾ.ಹ. ರಮಾಕುಮಾರಿ, ಪಿಯುಸಿಎಲ್ನ ಕೆ.ದೊರೈರಾಜು, ಹಿರಿಯ ಸ್ವಾತಂತ್ಯ ಹೋರಾಟಗಾರ ಟಿ.ಆರ್. ರೇವಣ್ಣ , ಹೋರಾಟ ಸಮಿತಿಯ ಸಂಚಾಲಕಿ ಮಲ್ಲಿಕಾ ಬಸವರಾಜು, ಡಾ.ಅರುಂಧತಿ, ಸಿ.ಎನ್. ಸುಗುಣಾದೇವಿ ಮಾತನಾಡಿದರು. ಮಹಿಳಾ ಜಾಗೃತಿ-ಜನ ಜಾಗೃತಿ, ಲಿಂಗ ಸಮಾನತೆ, ತಾರತಮ್ಯ ನಿವಾರಣೆ ಮುಂತಾದ ಸಾಮಾಜಿಕ ಪಿಡುಗುಗಳ ವಿರುದ್ಧ ಹೋರಾಟಗಳು ನಡೆಯುತ್ತಿದ್ದಾಗ್ಯೂ ಮಹಿಳೆ ಮತ್ತು ಮಕ್ಕಳ ಮೇಲಿನ ಅತ್ಯಾಚಾರ, ಲೈಂಗಿಕ ದೌರ್ಜನ್ಯ - ಕಿರುಕುಳ ಮುಂತಾದ ತಲೆ ತಗ್ಗಿಸುವ ಪ್ರಸಂಗಗಳು ಮಾನವೀಯತೆಯ ಮೇಲಿನ ನಂಬಿಕೆಯನ್ನೇ ಬುಡಮೇಲು ಮಾಡುತ್ತಿವೆ.
ನಿಜಕ್ಕೂ ಇದು ಕ್ರೌರ್ಯದ ಪರಮಾವಧಿ. ಈ ಪಿಡುಗಿನ ಮೂಲೋತ್ಪಾಟನೆ ಮಾಡುವುದು ಆಡಳಿತ ವ್ಯವಸ್ಥೆ ಹಾಗೂ ಸಮಾಜದ ಎಲ್ಲರ ಕರ್ತವ್ಯವಾಗಿದೆ. ಕೇವಲ ಅತ್ಯಾಚಾರ ಮಾತ್ರವಲ್ಲ, ಇದಕ್ಕೆ ಸಮಾನವಾದಂತಹ ಅಪರಾಧಗಳಾದ ವಿವಾಹವಾಗುವುದಾಗಿ ನಂಬಿಸಿ ಲೈಂಗಿಕವಾಗಿ ಬಳಸಿಕೊಂಡ, ಪ್ರೇಮಿಸಿ ಕೈಕೊಟ್ಟ, ಮಗುವಾದ ನಂತರ ತ್ಯಜಿಸಿದ, ಬೇರೆ ಬೇರೆ ರೀತಿಯಲ್ಲಿ ನಡೆಯುತ್ತಿರುವ ಲೈಂಗಿಕ ದೌರ್ಜನ್ಯ ಮತ್ತು ಕಿರುಕುಳಗಳನ್ನು ಅತ್ಯಾಚಾರ ವ್ಯಾಪ್ತಿಗೆ ಬರುತ್ತದೆಂದು ಪರಿಗಣಿಸಿ, ಕಾನೂನು ಪಾಲಕರು, ಅಧಿಕಾರಸ್ಥರು ಬಲಿಷ್ಠ ಕಾನೂನು ರೂಪಿಸಿ ತಪ್ಪಿತಸ್ಥರಿಗೆ ಉಗ್ರ ಶಿಕ್ಷೆಯಾಗುವಂತೆ ಮಾಡಿದಾಗ ಮಾತ್ರ ಇಂತಹ ಅಮಾನವೀಯ ಘಟನೆಗಳು ಮರುಕಳಿಸದಂತೆ ತಡೆಯಲು ಸಾಧ್ಯವಿದೆ. ಅದಕ್ಕಾಗಿ ಸಾರ್ವಜನಿಕರೆಲ್ಲರ ಸಹಕಾರದ ಅಗತ್ಯವಿದೆ ಎಂದು ಮೇಲಿನ ಗಣ್ಯರು ಅಭಿಪ್ರಾಯಪಟ್ಟರು.
ಮೆರವಣಿಗೆ ಟೌನ್ಹಾಲ್ ವೃತ್ತದಿಂದ ಮೆರವಣಿಗೆ ಮೂಲಕ ಜಾಗೃತಿ ಗೀತೆಗಳನ್ನು ಹಾಡುತ್ತಾ ಮೆರವಣಿಗೆ ಮೂಲಕ ತೆರಳಿ ಜಿಲ್ಲಾಧಿಕಾರಿಗಳ ಕಚೇರಿ ತಲುಪಿತು. ಅಪರ ಜಿಲ್ಲಾಧಿಕಾರಿಗಳಾದ ಅನುರಾಧಾ ಅವರ ಮೂಲಕ ರಾಜ್ಯಪಾಲರಿಗೆ ಮತ್ತು ರಾಜ್ಯ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಲಾಯಿತು.
ಪ್ರತಿಭಟನೆಯ ನೇತೃತ್ವವನ್ನು ಎಸ್ಎಫ್ಐ ನ ಜಿಲ್ಲಾ ಕಾರ್ಯದರ್ಶಿ ಇ.ಶಿವಣ್ಣ, ಉಪಾಧ್ಯಕ್ಷ ಜಗದೀಶ್, ಜ್ಯೊತಿ ಡಿ.ವೈಎಫ್ ಜಿಲ್ಲಾಧ್ಯಕ್ಷ ಎಸ್.ರಾಘವೇಂದ್ರ, ಉಪಾಧ್ಯಕ್ಷ ಎಂ.ಜಿ. ಮಂಜುನಾಥ್, ಕಾರ್ಯದರ್ಶಿ ಎಂ.ಆರ್.ನಾಗರಾಜು, ಎಂ.ಎಸ್. ಮಂಜುನಾಥ್, ರಘುಪ್ರಸಾದ್, ಮಂಜುಸ್ವಾಮಿ, ಯುವತಿಯರ ಉಪಸಮಿತಿಯ ಸಂಚಾಲಕಿ ಆರತಿ, ಗುರುಶ್ರೀ ಕಾಲೇಜಿನ ಉಪನ್ಯಾಸಕ ಲಕ್ಷ್ಮೀರಂಗನಾಥ್, ಸಮುದಾಯದ ಅಧ್ಯಕ್ಷರಾದ ಗೋವಿಂದಪ್ಪ, ರಾಜ್ಯ ರೈತ ಸಂಘದ ಮುಖಂಡರು, ಸಿಐಟಿಯು ಜಿಲ್ಲಾಧ್ಯಕ್ಷ ಸೈಯದ್ ಮುಜೀಬ್, ಕೊಳಗೆರಿ ನಿವಾಸಿಗಳ ಸಂಘದ ಅಧ್ಯಕ್ಷ ಎ,ನರಸಿಂಹಮೂತಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement