ಸಂಸದ ರಾಜೀವ್ ಚಂದ್ರಶೇಖರ್ ನಗರಕ್ಕೆ 3ಕ್ಕೆ
ತುಮಕೂರು: 'ಕನ್ನಡಪ್ರಭ' ಮತ್ತು 'ಸುವರ್ಣ ವಾಹಿನಿ' ಮುಖ್ಯಸ್ಥ ಹಾಗೂ ಸಂಸದ ರಾಜೀವ್ ಚಂದ್ರಶೇಖರ್ ಅವರು ಆ.3ರಂದು ನಗರಕ್ಕೆ ಆಗಮಿಸಲಿದ್ದಾರೆ. ತುಮಕೂರಿನ ಎಸ್ಐಟಿ ಕ್ಯಾಂಪಸ್ನಲ್ಲಿ ಭಾನುವಾರ ಬೆಳಗ್ಗೆ 11 ಗಂಟೆಗೆ ಆಯೋಜಿಸಲಾಗಿರುವ ಪದವಿ ಪ್ರದಾನ ಸಮಾರಂಭದಲ್ಲಿ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ. ಕಾರ್ಯಕ್ರಮದ ಸಾನಿಧ್ಯವನ್ನು ಡಾ. ಶಿವಕುಮಾರ ಸ್ವಾಮೀಜಿ ಹಾಗೂ ಕಿರಿಯ ಸ್ವಾಮೀಜಿ ಸಿದ್ಧಲಿಂಗ ಶ್ರೀಗಳು ವಹಿಸಲಿದ್ದಾರೆ. ಅಧ್ಯಕ್ಷತೆಯನ್ನು ಡಾ.ಕೆ. ಸಿದ್ದಪ್ಪ ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಎಸ್ಐಟಿ ಪ್ರಾಂಶುಪಾಲ ಡಾ. ಶಿವಕುಮಾರಯ್ಯ, ಎಸ್ಐಟಿ ನಿರ್ದೇಶಕ ಡಾ. ಎಂ.ಎನ್. ಚನ್ನಬಸಪ್ಪ ಉಪಸ್ಥಿತರಿರುವರು.
ಪರೀಕ್ಷೆ ನಾಳೆ
ತುಮಕೂರು: 2014-15ನೇ ಸಾಲಿನ ರಾಷ್ಟ್ರೀಯ ಪ್ರತಿಭಾನ್ವೇಷಣೆ ಪರೀಕ್ಷೆ (ಎನ್ಟಿಎಸ್ಇ) ಹಾಗೂ ಎನ್ಎಂಎಂಎಸ್ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ. 1, ಆಗಸ್ಟ್ 2014ರಂದು ಎಚ್.ಸಿ. ನಾಗಭೂಷಣ್, ಶಿಕ್ಷಣ ಸಂಯೋಜಕರು(ಗೂಳೂರು ಹೋಬಳಿ) ತುಮಕೂರು ಅವರಿಂದ ಪ್ರಶ್ನೆ ಪತ್ರಿಕೆಗಳನ್ನು ತಾಲೂಕಿನ ಎಲ್ಲ ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಪ್ರೌಢಶಾಲೆಗಳ ಮುಖ್ಯ ಶಿಕ್ಷಕರು ಪಡೆದು 2, ಆಗಸ್ಟ್ 2014ರಂದು ಬೆಳಗ್ಗೆ 11 ಗಂಟೆಯಿಂದ 12.30 ರವರೆಗೆ ಪೂರ್ವಭಾವಿ ಪರೀಕ್ಷೆಯನ್ನು ಎಲ್ಲ ಶಾಲೆಗಳಲ್ಲಿ ನಡೆಸಲು ಮುಖ್ಯ ಶಿಕ್ಷಕರಿಗೆ ತಿಳಿಸಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎಸ್. ಕುಮುದಮ್ಮ ತಿಳಿಸಿದ್ದಾರೆ.
ಕ್ರೀಡಾಕೂಟ ಇಂದು
ತಿಪಟೂರು: ತಿಪಟೂರು ತಾಲೂಕು ಪ್ರೌಢಶಾಲೆಗಳ ತಾಲೂಕು ಮಟ್ಟದ ಕ್ರೀಡಾಕೂಟವು ಪಟ್ಟಣದ ಕಲ್ಪತರು ಕ್ರೀಡಾಂಗಣದಲ್ಲಿ ಶುಕ್ರವಾರ ಬೆಳಿಗ್ಗೆ 9.30ಕ್ಕೆ ಏರ್ಪಡಿಸಲಾಗಿದೆ. ಧ್ವಜಾರೋಹಣವನ್ನು ಶಾಸಕ ಕೆ.ಷಡಕ್ಷರಿ ನರೆವೇರಿಸಲಿದ್ದು, ಅಧ್ಯಕ್ಷತೆ ತಾಪಂ ಅಧ್ಯಕ್ಷೆ ನೇತ್ರಾವತಿ ಭಾಸ್ಕರ್ ವಹಿಸಲಿದ್ದಾರೆ. ಸಾ.ಶಿ.ಉಪನಿರ್ದೇಶಕ ಈಶ್ವರಯ್ಯ ಉದ್ಘಾಟನೆ ಮಾಡಲಿದ್ದಾರೆ. ನಗರಸಭೆ ಅಧ್ಯಕ್ಷೆ ಗೀತಾ ದಿಲೀಪ್ ಕ್ರೀಡಾಜ್ಯೋತಿ ಸ್ವೀಕರಿಸಲಿದ್ದಾರೆ.
ಜೈಲಲ್ಲಿ ಕಿತ್ತಾಡಿದ ಕೈದಿಗಳು
ತುಮಕೂರು: ಸೆಲ್ಗೆ ಹೋಗುವ ವಿಷಯದಲ್ಲಿ ಕೈದಿಗಳು ಕಿತ್ತಾಡಿರುವ ಘಟನೆ ಹೊರವಲಯದ ಕಾರಾಗೃಹದಲ್ಲಿ ಗುರುವಾರ ನಡೆದಿದೆ. ರಂಜಾನ್ ಹಬ್ಬದ ಪ್ರಯುಕ್ತ ಒಂದು ಕೋಮಿನವರನ್ನು ಒಂದೇ ಸೆಲ್ನಲ್ಲಿ ಕೂಡಿ ಹಾಕಲಾಗಿತ್ತು. ಹಬ್ಬ ಮುಗಿದ ಬಳಿಕ ಅವರವರ ಸೆಲ್ಗೆ ಹೋಗುವಂತೆ ಜೈಲರ್ ಸೂಚಿಸಿದ್ದರು. ಈ ಸಂಬಂಧ ಕೈದಿಗಳ ನಡುವೆ ತಳ್ಳಾಟ, ಜಗಳ ನಡೆದಿದೆ. ಕೂಡಲೇ ಸಿಪಿಐ ಗಳಾದ ಖಾದರ್, ರವಿ, ಕೋರಾ ಪಿಎಸ್ಐ ಅವಿನಾಶ್ ಭೇಟಿ ನೀಡಿ ಗಲಾಟೆ ನಿಯಂತ್ರಿಸಿದ್ದಾರೆ.
ಜಿಲ್ಲಾ ಮಟ್ಟಕ್ಕೆ ಆಯ್ಕೆ
ತಿಪಟೂರು: ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಪಟ್ಟಣದ ಠಾಗೂರ್ ಪ್ರೌಢಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆಯುವ ಮೂಲಕ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಕಸಬಾ ಎ ವಿಭಾಗದ ಕ್ರೀಡಾಕೂಟದಲ್ಲಿ ಶಾಲೆಯ ವಿದ್ಯಾರ್ಥಿಗಳಾದ ಫಲ್ಗುಣಿ, ಯಶಸ್ವಿನಿ, ಸ್ನೇಹ, ಎಚ್.ಪಿ.ಮೇಘನ ಮತ್ತು ಲಾವಣ್ಯ ಬ್ಯಾಡ್ಮಿಂಟನ್ನಲ್ಲಿ ಪ್ರಥಮ ಸ್ಥಾನ ಗಳಿಸಿ, ಚೆಸ್ನಲ್ಲಿ ಫಲ್ಗುಣಿ ಪ್ರಥಮ ಸ್ಥಾನ ಮತ್ತು ಟೇಬಲ್ ಟೆನಿಸ್ನಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ಈ ಎಲ್ಲಾ ವಿಜೇತ ವಿದ್ಯಾರ್ಥಿಗಳಿಗೆ ಹಾಗೂ ದೈಹಿಕ ಶಿಕ್ಷಕರಾದ ಸೋಮಶೇಖರ್ ಅವರಿಗೆ ಸಂಸ್ಥೆಯ ಅಧ್ಯಕ್ಷ ಬಿ.ಡಿ.ರಾಮಯ್ಯ, ಮುಖ್ಯ ಶಿಕ್ಷಕಿ ಕೆ. ಶಶಿಕಲಾ ಅಭಿನಂದನೆ ಸಲ್ಲಿಸಿದ್ದಾರೆ..