ಆಲಿಕಲ್ಲು ಮಳೆಗೆ ನೆಲಕ್ಕುರುಳಿದ 200 ಅಡಕೆ ಮರ
ಶಿರಾ: ತಾಲೂಕಿನ ವಿವಿಧೆಡೆ ಸುರಿದ ಆಲಿಕಲ್ಲು ಮಳೆಗೆ 200 ಕ್ಕೂ ಹೆಚ್ಚು ಅಡಕೆ ಮರಗಳು ನೆಲಕ್ಕುರುಳಿದ್ದು, ಹಲವೆಡೆ ವಿದ್ಯುತ್ ಕಂಬಗಳಿಗೆ ಹಾನಿಯಾಗಿ ನೆಲಕ್ಕುರುಳಿವೆ.
ಆಲಿಕಲ್ಲು ಮಳೆಯಿಂದಾಗಿ ಮಾನಂಗಿ ತಾಂಡದ ರಂಗನಾಥನಾಯ್ಕ ಎಂಬುವನಿಗೆ ಸೇರಿದ 80 ಅಡಕೆ ಮರಗಳು, ಸ್ವಾಮ್ಯನಾಯ್ಕಗೆ ಸೇರಿದ 60 ಮರಗಳು, ಜಯರಾಮನಾಯ್ಕಗೆ ಸೇರಿದ 36 ಮರಗಳು, ರಾಮಕೃಷ್ಣನಾಯ್ಕಗೆ ಸೇರಿದ 35 ಮರಗಳು ಮತ್ತು ಗೋವಿಂದನಾಯ್ಕಗೆ ಸೇರಿದ 20 ಮರಗಳು ಧರೆಗುರುಳಿವೆ. ಇದೇ ಪ್ರದೇಶದಲ್ಲಿ ವಿದ್ಯುತ್ ಕಂಬ ಬಿದ್ದಿದ್ದರಿಂದ ವಿದ್ಯುತ್ ವ್ಯತ್ಯಯವಾಗಿತ್ತು, ಸಿಡಿಲು ಬಡಿದು ನಾಲ್ಕೈದು ತೆಂಗಿನ ಮರಗಳು ಹಾನಿಗೊಳಗಾಗಿವೆ ಎಂದು ಕಂದಾಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.