ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಜಿಲ್ಲಾ ವಕ್ಫ್ ಮಂಡಳಿಯಲ್ಲಿ ಅವ್ಯವಹಾರ ಆರೋಪ

Rashmi Kasaragodu
Updated On : 4 Jun 2014, 1:18 am

ಕನ್ನಡಪ್ರಭ ವಾರ್ತೆ, ತುಮಕೂರು, ಜೂ.3
ಜಿಲ್ಲಾ ವಕ್ಫ್ ಮಂಡಳಿಯಲ್ಲಿ ಅವ್ಯವಹಾರ ನಡೆದಿದ್ದು, ಕೂಡಲೇ ಸಮಿತಿ ವಜಾಗೊಳಿಸಿ ಲೋಕಾಯುಕ್ತ ತನಿಖೆಗೆ ಒಳಪಡಿಸಬೇಕು ಎಂಬ ಒತ್ತಾಯವನ್ನು ಜಿಲ್ಲಾ ವಕ್ಫ್ ಮಂಡಳಿ ರಕ್ಷಣಾ ಸಮಿತಿ ಅಧ್ಯಕ್ಷ ಮುನೀರ್ ಅಹಮದ್ ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಸ್ಲಿಂ ಸಮುದಾಯ ಬಡಜನರ ಸೇವೆಗೆಂದು ಮೀಸಲಿರುವ ಈ ಸಮಿತಿಯಲ್ಲಿ ಹಣವನ್ನು ನಿಯಮ ಮೀರಿ ಖರ್ಚು ಮಾಡಲಾಗಿದೆ. ಇದರಿಂದ ಸಾಕಷ್ಟು ಜನರಿಗೆ ಅನ್ಯಾಯಾಗಿದ್ದು, ಕೇಂದ್ರ ವಕ್ಫ್ ಮಂಡಳಿ ಹಾಗೂ ವಕ್ಫ್ ಇಲಾಖೆ ಕೂಡಲೇ ಜಿಲ್ಲೆಯಲ್ಲಿ ವಕ್ಫ್ ಮಂಡಳಿ ಪ್ರಾರಂಭದಿಂದ ಇಲ್ಲಿಯವರೆಗಿನ ಎಲ್ಲಾ ವ್ಯವಹಾರಗಳ ಕುರಿತು ಲೋಕಾಯುಕ್ತ ತನಿಖೆಗೆ ಒಳಪಡಿಸಬೇಕು ಹಾಗೂ ತಕ್ಷಣವೇ ಜಾರಿಗೆ ಬರುವಂತೆ ಜಿಲ್ಲಾ ಕಮಿಟಿಯನ್ನು ವಜಾ ಮಾಡಿ ಆಡಳಿತಾಧಿಕಾರಿಗಳನ್ನು ನೇಮಿಸಬೇಕೆಂದು ಆಗ್ರಹಿಸಿದರು.
9 ಎಕರೆ ಪ್ರದೇಶದಲ್ಲಿ ಜಿಲ್ಲಾ ವಕ್ಫ್ ಮಂಡಳಿ ಆಸ್ತಿಯಿದ್ದು 250 ಅಂಗಡಿ ಮಳಿಗೆಗಳನ್ನು ನಿರ್ಮಿಸಿ ಬಾಡಿಗೆ ನೀಡಲಾಗಿದೆ. ಅಂಗಡಿ ಮಳಿಗೆಗಳ ಬಾಡಿಗೆ ಮತ್ತು ಇನ್ನಿತರ ಮೂಲಗಳಿಂದ ವಾರ್ಷಿಕ 1.50 ಕೋಟಿ ಅದಾಯ ಬರುತ್ತಿದ್ದು, ಅಂಗಡಿ ಮಳಿಗೆ ಹಂಚಿಕೆಯಲ್ಲಿಯೂ ಮಂಡಳಿಯ ನಿಯಮ ಮೀರಿ ಒಬ್ಬರಿಗೆ ಮೂರರಿಂದ ಐದು ಮಳಿಗೆಗಳನ್ನು ನೀಡಲಾಗಿದೆ. ಕೆಲವರು ತಮಗೆ ಮಂಜೂರಾದ ಅಂಗಡಿಗಳನ್ನು ಇನ್ನೊಬ್ಬರಿಗೆ ಸಬ್‌ಲೀಸ್ ನೀಡಿ ಲಕ್ಷಾಂತರ ರು. ಅದಾಯ ಮಾಡಿಕೊಂಡಿದ್ದಾರೆ. ಅಲ್ಲದೆ ವಕ್ಫ್ ಮಂಡಳಿಯ ನಿರ್ದೇಶಕರೇ ಅಕ್ರಮವಾಗಿ ಅಂಗಡಿ ಮಳಿಗೆಗಳನ್ನು ಪಡೆದಿದ್ದಾರೆ ಎಂದು ದಾಖಲೆಯೊಂದಿಗೆ ದೂರಿದರು.
ಅವ್ಯವಹಾರ: ಪ್ರತಿ ವರ್ಷ ಜಿಲ್ಲೆಯಿಂದ 190 ಮಂದಿ ಹಜ್‌ಯಾತ್ರೆಗೆ ತೆರಳುತ್ತಿದ್ದು, ಇವರಿಗೆ ಯಾತ್ರೆಯ ಸಂದರ್ಭದಲ್ಲಿ ಅನುಸರಿಸಬೇಕಾದ ಕ್ರಮಗಳ ಕುರಿತು ತರಬೇತಿ ನೀಡಲು ಖರ್ಚು ಮಾಡಿರುವ ಹಣದಲ್ಲಿ ಸಾಕಷ್ಟು ಅವ್ಯವಹಾರ ನಡೆದಿದೆ. 210 ಜನರಿಗೆ ತರಬೇತಿ ನೀಡಲು 1.80 ಲಕ್ಷ ರೂ ಖರ್ಚು ಮಾಡಲಾಗಿದೆ. ಮಾಂಸ ಖರೀದಿಗೆ 60 ಸಾವಿರ ಖರ್ಚು ಮಾಡಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ತುಮಕೂರು ನಗರದಲ್ಲಿಯೇ ಗುಣಮಟ್ಟದ ಮಾಂಸ ದೊರೆಯುತ್ತಿದ್ದರೂ ಶಿರಾದಿಂದ ಖರೀದಿ ಮಾಡುವ ಅಗತ್ಯವೇನಿತ್ತು ಎಂದು ಪ್ರಶ್ನಿಸಿದ್ದಾರೆ.
ನಿರ್ಲಕ್ಷ್ಯ: ನಗರದ ಹೃದಯ ಭಾಗದಲ್ಲಿರುವ ಶಾದಿ ಮಹಲ್ ಅನ್ನು 37 ಲಕ್ಷ  ರು. ಖರ್ಚು ಮಾಡಿ ದುರಸ್ತಿ ಮಾಡಿಸಿದ್ದು,ಇಲ್ಲಿ ನಡೆಯುವ ಮದುವೆಗಳಿಗೆ ಅಗತ್ಯವಿರುವ ಪಾತ್ರೆಗಳನ್ನು ಸರಬರಾಜು ಮಾಡಲು 61500 ರು.ಗಳಿಗೆ ವ್ಯಕ್ತಿಯೊಬ್ಬರಿಗೆ ಗುತ್ತಿಗೆ ನೀಡಲಾಗಿದೆ. ಅವರು ಒಂದು ಮದುವೆಗೆ 5 ಸಾವಿರ ರು. ಗಳಂತೆ ಪಾತ್ರೆ ನೀಡುತ್ತಿದ್ದು, ಒಂದು ದಿನಕ್ಕೆ ಎರಡು ಮದುವೆಯಂತೆ ಕನಿಷ್ಠ 9 ತಿಂಗಳ ಕಾಲ ಮದುವೆಗಳು ನಡೆಯುತ್ತಿದ್ದು ಒಂದು ವರ್ಷಕ್ಕೆ ಗುತ್ತಿಗೆದಾರರಿಗೆ 18 ಲಕ್ಷ ರು.  ಅದಾಯವಾಗಿದೆ. ಆದ್ದರಿಂದ ಪಾತ್ರೆ ಸರಬರಾಜಿಗೆ ಗುತ್ತಿಗೆ ನೀಡುವ ಬದಲು ಮೂರು ಲಕ್ಷ ರು. ಖರ್ಚು ಮಾಡಿ ಪಾತ್ರೆಗಳನ್ನು ಜಿಲ್ಲಾ ವಕ್ಫ ಮಂಡಳಿಯೇ ಖರೀದಿ ಮಾಡಿದ್ದರೆ 18 ಲಕ್ಷ ಸಮಿತಿಗೆ ಉಳಿಯುತ್ತಿತ್ತು. ಈ ಬಗ್ಗೆ ಹಲವು ಬಾರಿ ಸಲಹೆ ನೀಡಿದ್ದರೂ ನಿರ್ಲಕ್ಷಿಸಿದೆ ಎಂದು ದೂರಿದರು.
ಕಳೆದ ಮೂರು ವರ್ಷಗಳಲ್ಲಿ 4.50 ಕೋಟಿ ಅದಾಯ ಬಂದಿದ್ದು, ಬ್ಯಾಂಕಿನಲ್ಲಿ ಯಾವುದೇ ಹಣ ಠೇವಣಿ ಇರಿಸಿಲ್ಲ. ಈಗೆ ಹಲವಾರು ಅವ್ಯವಹಾರ ನಡೆಸಿರುವ ಸಮಿತಿಯನ್ನು ಕೂಡಲೇ ವಜಾಗೊಳಿಸಿ ಆಡಳಿತಾಧಿಕಾರಿಯನ್ನು ನೇಮಕ ಮಾಡಬೇಕು. ಅಲ್ಲದೆ ಇಡೀ ಪ್ರಕರಣವನ್ನು ಲೋಕಾಯುಕ್ತ ತನಿಖೆಗೆ ವಹಿಸಬೇಕು ಮತ್ತು ಆಡಳಿತಾಧಿಕಾರಿ ನೇಮಿಸಿ ಹೊಸ ಕಮಿಟಿ ರಚನೆಗೆ ಕ್ರಮ ಕೈಗೊಳ್ಳಬೇಕು ಎಂದು ಮುನೀರ್‌ಅಹಮದ್ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಸೂಫ್ಹ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ. ಇಂತಿಯಾಜ್ ಅಹಮದ್, ಹನೀಫ್‌ವುಲ್ಲಾ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement