ಹಾಲಿನಲ್ಲಿ ಹಾಲಾಹಲ ಸೃಷ್ಟಿಸುವವರ ವಿರುದ್ಧ ಕಠಿಣ ಕ್ರಮ ಅಗತ್ಯ: ಕೃಷ್ಣಕುಮಾರ್
ಕುಣಿಗಲ್ : ಎಲ್ಲಾ ವಯಸ್ಸಿನವರಿಗೆ ಅತ್ಯುತ್ತಮ ಆಹಾರವಾದ ಹಾಲಿನಲ್ಲಿ ರಸಾಯನಿಕ ಅಂಶ ಬೆರೆಸಿ ಹಾಲಾಹಲ ಸೃಷ್ಟಿಸುತ್ತಾ, ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಬಳಸುವವರೂ ಹಾಲನ್ನು ತ್ಯಜಿಸುವಂತೆ ಮಾಡುವಂಥ ವಾತಾವರಣ ಸೃಷ್ಟಿಸುತ್ತಿರುವ ಕೆಲ ಖಾಸಗಿ ಹಾಲಿನ ಡೈರಿಗಳ ವಿರುದ್ಧ ರಾಜ್ಯ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ತುಮಕೂರು ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ ಡಿ.ಕೃಷ್ಣಕುಮಾರ್ ತಿಳಿಸಿದರು.
ಸೋಮವಾರ ತಾಲೂಕು ಕಚೇರಿ ಆವರಣದಲ್ಲಿನ ನಂದಿನಿ ಕ್ಷೀರ ಮಳಿಗೆಯಲ್ಲಿ ವಿಶ್ವ ಹಾಲು ದಿನವನ್ನು ಉದ್ಘಾಟಿಸಿ, ಸಾರ್ವಜನಿಕರಿಗೆ ಉಚಿತವಾಗಿ ಹಾಲು ವಿತರಿಸಿ ಮಾತನಾಡಿದ ಅವರು, ಹಾಲು ಒಂದು ಉತ್ತಮವಾದ ಆಹಾರವಾಗಿದ್ದು, ಯಾವುದೇ ವಯೋವಾನದ ಭೇದಭಾವವಿಲ್ಲದೆ ಬಳಸುವ ಏಕೈಕ ದ್ರವ ಆಹಾರವಾಗಿದೆ. ತುಮಕೂರು ಹಾಲು ಒಕ್ಕೂಟವು ಸಾವಿರದ ನೂರು ಸಹಕಾರ ಸಂಘಗಳ ಮೂಲಕ ದಿನಕ್ಕೆ ಐದು ಲಕ್ಷ ಲೀಟರ್ ಹಾಲು ಸಂಗ್ರಹಿಸುತ್ತಿದೆ. ಉತ್ತಮ ಗುಣಮಟ್ಟ ನಿರ್ವಹಣೆಗೆ ಪ್ರಥಮ ಆದ್ಯತೆ ನೀಡುತ್ತಾ ಗ್ರಾಹಕರ ನಂಬಿಕೆಗೆ ಪಾತ್ರವಾಗಿದೆ ಎಂದರು.
ಇಂತಹ ಸ್ಥಿತಿಯಲ್ಲಿ ಸಹಕಾರಿ ಸ್ವಾಮ್ಯದ ನಂದಿನಿಯು ಉತ್ತಮ ಹಾಲಿನ ಗುಣಮಟ್ಟದ ಹಾಲಿನ ಉತ್ಪನ್ನಗಳನ್ನು ಪೂರೈಸುತ್ತಿದೆ ಎಂದರು. ಶಿರಸ್ತೇದಾರ್ ಮಂಜುನಾಥ್, ಮಾಜಿ ನಿರ್ದೇಶಕ ರಂಗಸ್ವಾಮಿ, ತುಮೂಲ್ ತಾಲೂಕು ವ್ಯವಸ್ಥಾಪಕ ಕೇಶವಮೂರ್ತಿ, ವಿಸ್ತರಣಾಧಿಕಾರಿ ಬಸವರಾಜು ಇತರರು ಇದ್ದರು. ನಾಗರಿಕರಿಗೆ ಉಚಿತವಾಗಿ ಹಾಲನ್ನು ವಿತರಿಸಲಾಯಿತು, ವಿಶ್ವಹಾಲು ದಿನದ ಅಂಗವಾಗಿ ನಂದಿನಿ ಸಿಹಿ ಉತ್ಪನ್ನಗಳ ಮೇಲೆ ಇದೆ 2 ರಿಂದ 10ನೇ ತಾರೀಕಿನವರೆಗೂ ಶೇಕಡಾ ಹತ್ತರಷ್ಟು ರಿಯಾಯಿತಿ ಘೋಷಣೆ ಮಾಡಲಾಗಿದ್ದು ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದರು.